ADVERTISEMENT

ಪಾಕಿಸ್ತಾನ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಹುದ್ದೆ ತೊರೆಯಲಿರುವ ಮಿಸ್ಬಾ ಉಲ್‌ ಹಕ್‌

ಕ್ರಿಕೆಟ್‌: ಮುಖ್ಯ ಕೋಚ್‌ ಹುದ್ದೆಯಲ್ಲಿ ಮುಂದುವರಿಯಲು ನಿರ್ಧಾರ

ಪಿಟಿಐ
Published 14 ಅಕ್ಟೋಬರ್ 2020, 12:23 IST
Last Updated 14 ಅಕ್ಟೋಬರ್ 2020, 12:23 IST
ಮಿಸ್ಬಾ ಉಲ್‌ ಹಕ್‌–ಎಎಫ್‌ಪಿ ಚಿತ್ರ
ಮಿಸ್ಬಾ ಉಲ್‌ ಹಕ್‌–ಎಎಫ್‌ಪಿ ಚಿತ್ರ   

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮಿಸ್ಬಾ ಉಲ್‌ ಹಕ್‌ ಅವರು, ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಹುದ್ದೆ ತೊರೆಯಲಿದ್ದಾರೆ. ಮುಖ್ಯ ಕೋಚ್‌ ಹುದ್ದೆಗೆ ಹೆಚ್ಚು ಗಮನ ನೀಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

ಈ ಕುರಿತು ಲಾಹೋರ್‌ನಲ್ಲಿ ಮಾತನಾಡಿರುವ ಅವರು, ನವೆಂಬರ್‌ 30ರಂದು ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ (ಪಿಸಿಬಿ) ತಿಳಿಸಿರುವುದಾಗಿ ಹೇಳಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಅವರು ಆಯ್ಕೆ ಸಮಿತಿ ಹಾಗೂ ಕೋಚ್‌ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ.

‘ಜಿಂಬಾಬ್ವೆ ವಿರುದ್ಧದ ಸರಣಿಗೆ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತೇನೆ. ಆ ಬಳಿಕ ಕೋಚ್‌ ಹುದ್ದೆಗೆ ಹೆಚ್ಚು ಸಮಯ ಮೀಸಲಿಡುವೆ‘ ಎಂದು ಮಿಸ್ಬಾ ಹೇಳಿದ್ದಾರೆ.

ADVERTISEMENT

ಆಯ್ಕೆ ಸಮಿತಿಯ ಮುಖ್ಯಸ್ಥ ಹುದ್ದೆ ತೊರೆಯಲು ಮಂಡಳಿಯಿಂದ ತನಗೆ ಯಾವುದೇ ಒತ್ತಡ ಬಂದಿಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.

‘ಇದು ನನ್ನ ಸ್ವಂತ ನಿರ್ಧಾರ. ಏಕಕಾಲಕ್ಕೆ ಎರಡೂ ಹುದ್ದೆಗಳನ್ನು ನಿರ್ವಹಿಸುವುದು ಕಷ್ಟ ಎಂಬ ಕಾರಣಕ್ಕೆ ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಆಯ್ಕೆ ಸಮಿತಿಗೆ ಯಾರೇ ನೇಮಕವಾದರೂ ಸಂಪೂರ್ಣ ಸಹಕಾರ ನೀಡುವೆ. ತಂಡದ ಏಳಿಗೆಗಾಗಿ ಶ್ರಮಿಸುತ್ತೇನೆ‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.