ADVERTISEMENT

ಅಂತರರಾಷ್ಟ್ರೀಯ ಟಿ20ಗೆ ಮಿಚೆಲ್ ಸ್ಟಾರ್ಕ್ ನಿವೃತ್ತಿ

ಟೆಸ್ಟ್, ಏಕದಿನ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಆಟ ಮುಂದುವರಿಸಲಿರುವ ಎಡಗೈ ವೇಗಿ

ಪಿಟಿಐ
Published 2 ಸೆಪ್ಟೆಂಬರ್ 2025, 13:53 IST
Last Updated 2 ಸೆಪ್ಟೆಂಬರ್ 2025, 13:53 IST
<div class="paragraphs"><p>ಮಿಚೆಲ್ ಸ್ಟಾರ್ಕ್</p></div>

ಮಿಚೆಲ್ ಸ್ಟಾರ್ಕ್

   

ಚಿತ್ರ ಕೃಪೆ: cricbuzz

ಬ್ರಿಸ್ಬೇನ್ : ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರಿಣಾಮಕಾರಿ ವೇಗಿ ಮಿಚೆಲ್ ಸ್ಟಾರ್ಕ್  ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಮಾದರಿಗೆ ಮಂಗಳವಾರ ನಿವೃತ್ತಿ ಘೋಷಿಸಿದರು. 

ADVERTISEMENT

ಮುಂಬರುವ ಆ್ಯಷಸ್ ಸರಣಿ, ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ಸರಣಿಗಳು ಮತ್ತು ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವತ್ತ ಹೆಚ್ಚು ಗಮನ ನೀಡುವ ದೃಷ್ಟಿಯಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. 

ಬಿರುಗಾಳಿ ವೇಗದ ಎಸೆತಗಳು, ಸ್ವಿಂಗ್, ನಿಖರವಾದ ಯಾರ್ಕರ್‌ಗಳು ಮತ್ತು ಎದೆಯತ್ತರದ ಬೌನ್ಸರ್‌ಗಳನ್ನು ಹಾಕುವಲ್ಲಿ ನಿಷ್ಣಾತರಾಗಿರುವ ಸ್ಟಾರ್ಕ್‌ ‘ಮ್ಯಾಚ್‌ ವಿನ್ನಿಂಗ್’ ಬೌಲರ್ ಆಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅವರು 65 ಪಂದ್ಯಗಳನ್ನು ಆಡಿ 79 ವಿಕೆಟ್‌ ಗಳಿಸಿದ್ದಾರೆ. ಈ ಮಾದರಿಯಲ್ಲಿ ಆ್ಯಡಂ ಜಂಪಾ (103 ಪಂದ್ಯ; 130 ವಿಕೆಟ್) ಅವರ ನಂತರ ಅತ್ಯಧಿಕ ವಿಕೆಟ್ ಗಳಿಸಿರುವ ಆಸ್ಟ್ರೇಲಿಯಾ ಬೌಲರ್ ಆಗಿದ್ದಾರೆ. 

‘ನಾನು ಆಡಿರುವ ಪ್ರತಿಯೊಂದು ಟಿ20 ಪಂದ್ಯದ ಅನುಕ್ಷಣವನ್ನೂ ಆನಂದಿಸಿದ್ದೇನೆ. ಅದರಲ್ಲಿ 2021ರ ವಿಶ್ವಕಪ್ ಟೂರ್ನಿ ವಿಶೇಷವಾದುದು. ಆ ಟೂರ್ನಿಯಲ್ಲಿ ಚಾಂಪಿಯನ್  ಆಗಿದ್ದಕ್ಕಿಂತಲೂ ಆಗಿದ್ದ ತಂಡವು ಅದ್ಭುತವಾಗಿತ್ತು’ ಎಂದು ಸ್ಟಾರ್ಕ್ ಹೇಳಿದರು. 

‘ಆ್ಯಷಸ್ ಟೆಸ್ಟ್ ಸರಣಿ, ಭಾರತದಲ್ಲಿ ಸರಣಿ ಮತ್ತು 2027ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗಳಲ್ಲಿ ಆಡುವತ್ತ ನನ್ನ ಗಮನವಿದೆ. ಆದ್ದರಿಂದ ಕಾರ್ಯೋತ್ತಡವನ್ನು ಕಡಿಮೆ ಮಾಡಿಕೊಳ್ಳಲು ಈ ನಿರ್ಧಾರ ಮಾಡಿರುವೆ. ಇದರಿಂದ (ನಿವೃತ್ತಿ ನಿರ್ಧಾರ) ತಂಡದ ಉಳಿದ ಬೌಲರ್‌ಗಳಿಗೂ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧವಾಗಲು ಅನುಕೂಲವಾಗುತ್ತದೆ’ ಎಂದೂ ಅವರು ಹೇಳಿದ್ದಾರೆ. 

2015 ಮತ್ತು 2023ರಲ್ಲಿ ಆಸ್ಟ್ರೇಲಿಯಾ ತಂಡವು ಏಕದಿನ ವಿಶ್ವಕಪ್ ಜಯಿಸುವಲ್ಲಿ ಸ್ಟಾರ್ಕ್‌ ಬೌಲಿಂಗ್‌ ಕಾಣಿಕೆಯೂ ಮಹತ್ವದ್ದಾಗಿತ್ತು. 

35 ವರ್ಷದ ಸ್ಟಾರ್ಕ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮುಂದುವರಿಯಲಿದ್ದಾರೆ. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಲ್ಲಿ ಆಡಿದ್ದಾರೆ. ಕೆಲವು ಪಂದ್ಯಗಳಲ್ಲಿ ಗೆಲುವಿನ ಕಾಣಿಕೆಯನ್ನೂ ನೀಡಿದ್ದಾರೆ. ಎಡಗೈ ವೇಗಿ ಸ್ಟಾರ್ಕ್ ಅವರಿಗೆ 2024ರ ಐಪಿಎಲ್ ಬಿಡ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ₹ 24.75 ಕೋಟಿ ನೀಡಿ ಖರೀದಿಸಿತ್ತು. ಈ ವರ್ಷದ ಐಪಿಎಲ್‌ನಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್‌ (₹ 11.75ಕೋಟಿ) ಸೇರಿದ್ದರು. 

ಆಸ್ಟ್ರೇಲಿಯಾ ತಂಡವು ಮೂರು ವಿಶ್ವಕಪ್‌ಗಳನ್ನು ಗೆದ್ದಾಗ ಪ್ರತಿನಿಧಿಸಿದ ಆಟಗಾರನೆಂಬ ಹೆಗ್ಗಳಿಕೆ ಸ್ಟಾರ್ಕ್ ಅವರದ್ದಾಗಿದೆ. ಈ ಸಂಗತಿಯಲ್ಲಿ ಅವರು ರಿಕಿ ಪಾಂಟಿಂಗ್, ಆ್ಯಡಂ ಗಿಲ್‌ಕ್ರಿಸ್ಟ್‌ ಮತ್ತು ಗ್ಲೆನ್ ಮೆಕ್‌ಗ್ರಾ ಅವರೊಂದಿಗೆ ಸ್ಥಾನ ಪಡೆದಿದ್ದಾರೆ. 

ಮಿಚೆಲ್‌ ಅವರಿಗೆ ತಮ್ಮಟಿ20 ಕ್ರಿಕೆಟ್ ಪಯಣದ ಕುರಿತು ಅಪಾರ ಹೆಮ್ಮೆ ಇರಲೇಬೇಕು. ಏಕೆಂದರೆ 2021ರಲ್ಲಿ ಟಿ20 ವಿಶ್ವಕಪ್ ಜಯದಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ವಿಕೆಟ್ ಗಳಿಸುವ ಅವರ ಸಾಮರ್ಥ್ಯವು ಅನನ್ಯವಾದುದು.
ಜಾರ್ಜ್ ಬೇಲಿ ಆಸ್ಟ್ರೇಲಿಯಾದ ಆಯ್ಕೆ ಸಮಿತಿ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.