
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಭಾನುವಾರ ಆಯ್ಕೆಯಾದ ಪದಾಧಿಕಾರಿಗಳು (ಎಡದಿಂದ), ರಘುರಾಮ್ ಭಟ್ (ಖಜಾಂಚಿ), ಪ್ರಭತೇಜ್ ಭಾಟಿಯಾ (ಜಂಟಿ ಕಾರ್ಯದರ್ಶಿ), ದೇವಜೀತ್ ಸೈಕಿಯಾ (ಕಾರ್ಯದರ್ಶಿ), ಮಿಥುನ್ ಮನ್ಹಾಸ್ (ಅಧ್ಯಕ್ಷ), ರಾಜೀವ ಶುಕ್ಲಾ (ಉಪಾಧ್ಯಕ್ಷ), ಅರುಣಸಿಂಗ್ ಧುಮಾಲ್ (ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ)
–ಬಿಸಿಸಿಐ ಚಿತ್ರ
ಮುಂಬೈ: ದೆಹಲಿ ಕ್ರಿಕೆಟ್ ತಂಡದ ಮಾಜಿ ನಾಯಕ ಮಿಥುನ್ ಮನ್ಹಾಸ್ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 37ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಭಾನುವಾರ ನಡೆದ 94ನೇ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ (ಎಜಿಎಂ) ಮಿಥುನ್ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಉಳಿದ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಕೂಡ ಘೋಷಿಸಲಾಯಿತು.
ರೋಜರ್ ಬಿನ್ನಿ ಅವರು 70 ವರ್ಷ ವಯಸ್ಸಾಗಿದ್ದರಿಂದ ಹೋದ ತಿಂಗಳು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಅವರ ಸ್ಥಾನಕ್ಕೆ ಈಗ 45 ವರ್ಷದ ಮಿಥುನ್ ಆಯ್ಕೆಯಾಗಿದ್ದಾರೆ.
ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಪ್ರಥಮ ದರ್ಜೆ ಕ್ರಿಕೆಟಿಗರೊಬ್ಬರನ್ನು ಆಯ್ಕೆ ಮಾಡುತ್ತಿರುವುದು ಇದು ಮೂರನೇ ಅವಧಿ. ಸೌರವ್ ಗಂಗೂಲಿ ಮತ್ತು ಬಿನ್ನಿ ಅವರ ನಂತರ ಮಿಥುನ್ ಈ ಗೌರವ ಪಡೆದಿದ್ದಾರೆ.
ಮಿಥುನ್ ಅವರು 1997–98ರಿಂದ 2016–17ರ ಅವಧಿಯಲ್ಲಿ 157 ಪ್ರಥಮ ದರ್ಜೆ, 130 ಲಿಸ್ಟ್ ಎ ಮತ್ತು 55 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು 9714 ರನ್ ಗಳಿಸಿದ್ದು, ಅದರಲ್ಲಿ 27 ಶತಕಗಳಿವೆ.
ಸೆಪ್ಟೆಂಬರ್ 20ರಂದು ನವದೆಹಲಿಯಲ್ಲಿ ನಡೆದಿದ್ದ ಮಂಡಳಿಯ ‘ಪ್ರಭಾವಿ’ಗಳ ಸಭೆಯಲ್ಲಿ ಮಿಥುನ್ ಅವರು ಅಚ್ಚರಿಯ ಆಯ್ಕೆಯಾಗಿ ಹೊರಹೊಮ್ಮಿದ್ದರು. ಮರುದಿನವೇ ಅವರು ನಾಮಪತ್ರ ಸಲ್ಲಿಸಿದ್ದರು.
ಮಿಥುನ್ ಅವರು ಜಮ್ಮು–ಕಾಶ್ಮೀರ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಆಡಳಿತ ಸುಧಾರಣೆಗಾಗಿ ನೇಮಕ ಮಾಡಲಾಗಿದ್ದ ಅಡ್‌ಹಾಕ್ ಸಮಿತಿಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಬೇರೆ ಬೇರೆ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಅವರಿಗೆ ಇದೆ.
‘ವಿಶ್ವದ ಶ್ರೇಷ್ಠ ಕ್ರಿಕೆಟ್ ಮಂಡಳಿಗೆ ಅಧ್ಯಕ್ಷನಾಗಿ ನೇಮಕವಾಗಿರುವುದು ನನಗೆ ಸಂದಿರುವ ದೊಡ್ಡ ಗೌರವ. ಇದೊಂದು ದೊಡ್ಡ ಹೊಣೆಗಾರಿಕೆಯೂ ಹೌದು. ನನ್ನ ಸಾಮರ್ಥ್ಯವನ್ನು ಪೂರ್ಣ ಪಣಕ್ಕಿಟ್ಟು ಮಂಡಳಿಯ ಬೆಳವಣಿಗೆಗೆ ಬದ್ಧನಾಗಿರುತ್ತೇನೆ’ ಎಂದು ಮಿಥುನ್ ಮಾಧ್ಯಮಗಳಿಗೆ ತಿಳಿಸಿದರು.
‘ಕ್ರಿಕೆಟಿಗನಾಗಿ ಮತ್ತು ಆಡಳಿತಗಾರನಾಗಿ ನಾನು ನಿರ್ವಹಿಸಿದ ಕಾರ್ಯಗಳಿಂದಾಗಿ ಇಂದು ಈ ಗೌರವ ಒಲಿದಿದೆ. ಕಳೆದ ನಾಲ್ಕು ವರ್ಷಗಳಿಂದ ಜೆಕೆಸಿಎದಲ್ಲಿ ಕಾರ್ಯನಿರ್ವಹಿಸಿದ್ದೇನೆ. ಅಲ್ಲಿ ಮಾಡಿರುವ ಉತ್ತಮ ಕಾರ್ಯಗಳು ಕೈಹಿಡಿದಿರಬಹುದು’ ಎಂದು ಅಭಿಪ್ರಾಯಪಟ್ಟರು.
ಹಿರಿಯ ಆಡಳಿತಗಾರ ರಾಜೀವ್ ಶುಕ್ಲಾ ಅವರನ್ನು ಮಂಡಳಿಯ ಉಪಾಧ್ಯಕ್ಷ ಸ್ಥಾನದಲ್ಲಿ ಮತ್ತೊಂದು ಅವಧಿಗೆ ಮುಂದುವರಿಸಲಾಗಿದೆ.
ಎಂ. ಖೈರುಲ್ ಜಮಾಲ್ ಮಜುಂದಾರ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಳಿತ ಸಮಿತಿಗೆ ಎರಡನೇ ಪ್ರತಿನಿಧಿಯಾಗಿ ನೇಮಕ ಮಾಡಲಾಯಿತು. ಅವರು ಅರುಣ ಸಿಂಗ್ ಧುಮಾಲ್ ಅವರೊಂದಿಗೆ ಕಾರ್ಯನಿರ್ವಹಿಸುವರು.
ಈ ಮೊದಲು ಖಜಾಂಚಿಯಾಗಿದ್ದ ಪ್ರಭತೇಜ್ ಭಾಟಿಯಾ ಅವರಿಗೆ ಜಂಟಿ ಕಾರ್ಯದರ್ಶಿ ಸ್ಥಾನ ನೀಡಲಾಯಿತು. ನಿಕಟಪೂರ್ವ ಜಂಟಿ ಕಾರ್ಯದರ್ಶಿ ರೋಹನ್ ಗೌನ್ಸ್ ದೇಸಾಯಿ ಮತ್ತು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಜಯದೇವ್ ಶಾ ಅವರನ್ನು ಅಪೆಕ್ಸ್ ಕೌನ್ಸಿಲ್ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.
‘ಅಪೆಕ್ಸ್ ಕೌನ್ಸಿಲ್ ಅಭ್ಯರ್ಥಿಗೂ ಪ್ರತಿಸ್ಪರ್ಧಿ ಇರಲಿಲ್ಲ. ಆದ್ದರಿಂದ ಅವರಿಬ್ಬರೂ ಅವಿರೋಧವಾಗಿ ಆಯ್ಕೆಯಾದರು’ ಎಂದು ಕಾರ್ಯದರ್ಶಿ ಸೈಕಿಯಾ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ರಘುರಾಮ್ ಭಟ್ ಅವರನ್ನು ಬಿಸಿಸಿಐ ಖಜಾಂಚಿಯಾಗಿ ಅವಿರೋಧ ಆಯ್ಕೆ ಮಾಡಲಾಯಿತು. ಭಾನುವಾರ ನಡೆದ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಯಿತು. ಕೆಎಸ್‌ಸಿಎ ಅಧ್ಯಕ್ಷರಾಗಿ ಅವರು ಇದೇ 30ರಂದು ಮೂರು ವರ್ಷದ ಅವಧಿ ಪೂರೈಸಲಿದ್ದಾರೆ. 67 ವರ್ಷದ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಎಡಗೈ ಸ್ಪಿನ್ನರ್ ಆಗಿ ಕರ್ನಾಟಕ ಮತ್ತು ಭಾರತ ತಂಡವನ್ನು ಪ್ರತಿನಿಧಿಸಿದ್ದರು. 1983ರಲ್ಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ಗಳಲ್ಲಿ ಆಡಿದ್ದರು. ಒಟ್ಟು 2 ಪಂದ್ಯಗಳಿಂದ 4 ವಿಕೆಟ್ ಗಳಿಸಿದ್ದರು. 82 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 374 ಮತ್ತು 12 ಲಿಸ್ಟ್ ಎ ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಗಳಿಸಿದ್ದರು. ಕೆಎಸ್‌ಸಿಎ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಅಂಪೈರಿಂಗ್ ಮತ್ತು ತರಬೇತುದಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಮೂರು ವರ್ಷಗಳ ಹಿಂದೆ ಕೆಎಸ್‌ಸಿಎ ಆಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದರು.
ಬಿಸಿಸಿಐ ರಾಷ್ಟ್ರೀಯ ಸೀನಿಯರ್ ಕ್ರಿಕೆಟ್ ತಂಡದ ಆಯ್ಕೆ ಸಮಿತಿಗೆ ಮಾಜಿ ಆಟಗಾರರಾದ ಆರ್.ಪಿ. ಸಿಂಗ್ ಮತ್ತು ಪ್ರಗ್ಯಾನ್ ಓಜಾ ಅವರನ್ನು ಸೇರ್ಪಡೆ ಮಾಡಲಾಗಿದೆ. ತಮಿಳುನಾಡಿನ ಮಾಜಿ ಆಟಗಾರ ಎಸ್. ಶರತ್ ಅವರು ಸೀನಿಯರ್ ಸಮಿತಿಯಿಂದ ಜೂನಿಯರ್ ಆಯ್ಕೆ ಸಮಿತಿಗೆ ಮರಳಿದ್ದಾರೆ. ಅಜಿತ್ ಆಗರಕರ್ ಮುಖ್ಯಸ್ಥರಾಗಿರುವ ಸೀನಿಯರ್ ಆಯ್ಕೆ ಸಮಿತಿಯಲ್ಲಿ ಈಗ ಶಿವಸುಂದರ್ ದಾಸ್ ಅಜಯ್ ರಾತ್ರಾ ಆರ್.ಪಿ. ಸಿಂಗ್ ಮತ್ತು ಓಜಾ ಇದ್ದಾರೆ. ಮಹಿಳೆಯರ ತಂಡದ ಆಯ್ಕೆ ಸಮಿತಿಯಲ್ಲಿ ಮಾಜಿ ಆಟಗಾರ್ತಿ ಅಮಿತಾ ಶರ್ಮಾ ಮುಖ್ಯಸ್ಥರಾಗಿದ್ದಾರೆ. ನೀತು ಡೇವಿಡ್ ಅವರು ನಿರ್ಗಮಿಸಿದ್ದಾರೆ.
ಅಮಿತಾ ಅವರು ಐದು ಟೆಸ್ಟ್ 116 ಏಕದಿನ ಮತ್ತು 41 ಟಿ20 ಪಂದ್ಯಗಳಲ್ಲಿ ಭಾರ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರ ಸಮಿತಿಯಲ್ಲಿ ಶ್ಯಾಮಾ ಡೇ ಜಯಾ ಶರ್ಮಾ ಮತ್ತು ಶ್ರಾವಂತಿ ನಾಯ್ಡು ಕೂಡ ಸ್ಥಾನ ಪಡೆದಿದ್ದಾರೆ. ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ಅಧ್ಯಕ್ಷ ಜಯೇಶ್ ಜಾರ್ಜ್ ಅವರನ್ನು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಆಡಳಿತ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಮೂಲಸೌಲಭ್ಯ ಅಭಿವೃದ್ಧಿ ಸಮಿತಿ ಮುಖ್ಯಸ್ಥರನ್ನಾಗಿ ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಅವರು ಆಯ್ಕೆಯಾಗಿದ್ದಾರೆ.
ಹರ್ಭಜನ್ ಮನವಿ; ಗಂಗೂಲಿ ಗೈರು
ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಈ ಸಭೆಯಲ್ಲಿ ಪಂಜಾಬ್ ಕ್ರಿಕೆಟ್ ಸಂಸ್ಥೆ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಅವರು ಮಿಥುನ್ ಮನ್ಹಾಸ್ ಅವರ ಆಯ್ಕೆಯನ್ನು ಸ್ವಾಗತಿಸಿದರು. ಅಲ್ಲದೇ ಪಂಜಾಬ್ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಅತಿವೃಷ್ಟಿಯಿಂದಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಅ ಪ್ರದೇಶಗಳಿಗೆ ಬಿಸಿಸಿಐ ಸಹಾಯಹಸ್ತ ಚಾಚಬೇಕು ಎಂದೂ ಮನವಿ ಮಾಡಿದರು. ಈಚೆಗೆ ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸೌರವ್ ಗಂಗೂಲಿ ಅವರು ಬಿಸಿಸಿಐ ಎಜಿಎಂನಲ್ಲಿ ಹಾಜರಾಗಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.