ADVERTISEMENT

ಐಪಿಎಲ್ 2021: ಮಾರ್ಗನ್‌ಗೆ ವಾರ್ನರ್‌ ಸವಾಲು

ಕೋಲ್ಕತ್ತ ನೈಟ್‌ರೈಡರ್ಸ್‌– ಹೈದರಾಬಾದ್‌ ಸನ್‌ರೈಸರ್ಸ್ ಪಂದ್ಯ

ಪಿಟಿಐ
Published 10 ಏಪ್ರಿಲ್ 2021, 17:39 IST
Last Updated 10 ಏಪ್ರಿಲ್ 2021, 17:39 IST
ಏಯಾನ್ ಮಾರ್ಗನ್‌ ಹಾಗೂ ಡೇವಿಡ್ ವಾರ್ನರ್‌– ಪಿಟಿಐ ಚಿತ್ರ
ಏಯಾನ್ ಮಾರ್ಗನ್‌ ಹಾಗೂ ಡೇವಿಡ್ ವಾರ್ನರ್‌– ಪಿಟಿಐ ಚಿತ್ರ   

ಚೆನ್ನೈ: ಏಯಾನ್ ಮಾರ್ಗನ್‌ ನಾಯಕತ್ವದಲ್ಲಿ ಹೊಸ ಹುರುಪಿನಲ್ಲಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಭಾನುವಾರ ಐಪಿಎಲ್‌ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಇಲ್ಲಿಯ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿಭಾನುವಾರ ನಡೆಯುವ ಹಣಾಹಣಿಯಲ್ಲಿ ಆ ತಂಡಕ್ಕೆ ಸನ್‌ರೈಸರ್ಸ್‌ ಹೈದರಾಬಾದ್ ಸವಾಲು ಎದುರಾಗಿದೆ.

ಕಳೆದ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ನಡೆದ ಟೂರ್ನಿಯ ಮಧ್ಯದ ಅವಧಿಯಲ್ಲಿ ಇಂಗ್ಲೆಂಡ್‌ನ ಮಾರ್ಗನ್‌ ಅವರು ದಿನೇಶ್ ಕಾರ್ತಿಕ್ ಅವರಿಂದ ನಾಯಕತ್ವ ವಹಿಸಿಕೊಂಡಿದ್ದರು. ಆ ಆವೃತ್ತಿಯ ಲೀಗ್‌ನ ಕೊನೆಯಲ್ಲಿ ಕೋಲ್ಕತ್ತ ತಂಡವು ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳಷ್ಟೇ ಪಾಯಿಂಟ್ಸ್ ಗಳಿಸಿದ್ದರೂ ರನ್‌ರೇಟ್ ಕೊರತೆಯಿಂದ ಪ್ಲೇ ಆಫ್‌ ತಲುಪಿರಲಿಲ್ಲ.

ಈಗ ಪೂರ್ಣಪ್ರಮಾಣದಲ್ಲಿ ತಂಡದ ಸಾರಥ್ಯ ವಹಿಸಿರುವ ಮಾರ್ಗನ್‌, ಐಪಿಎಲ್‌ನಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ತಂಡದ ವೈಭವದ ದಿನಗಳನ್ನು ಮರಳಿಸುವ ವಿಶ್ವಾಸದಲ್ಲಿದ್ದಾರೆ.

ADVERTISEMENT

ಅಗ್ರಶ್ರೇಯಾಂಕದ ಶುಭಮನ್ ಗಿಲ್‌, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ ಮೇಲೆ ಕೋಲ್ಕತ್ತ ಭರವಸೆ ಇಟ್ಟುಕೊಂಡಿದೆ. ನಾಯಕ ಮಾರ್ಗನ್, ವೆಸ್ಟ್‌ ಇಂಡೀಸ್‌ನ ಆ್ಯಂಡ್ರೆ ರಸೆಲ್ ಸ್ಫೋಟಕ ಆಟವಾಡುವ ಸಾಮರ್ಥ್ಯ ಉಳ್ಳವರು. ಆಲ್‌ರೌಂಡರ್‌ ಸುನಿಲ್ ನಾರಾಯಣ್ ಅವರಿಂದಲೂ ತಂಡವು ಉತ್ತಮ ಸಾಮರ್ಥ್ಯ ನಿರೀಕ್ಷಿಸುತ್ತಿದೆ.

ನಿಧಾನಗತಿಯ ಚೆಪಾಕ್ ಪಿಚ್‌ನಲ್ಲಿ 40ರ ಹರೆಯದ ಸ್ಪಿನ್ನರ್ ಹರಭಜನ್ ಸಿಂಗ್ ತೋರುವ ಸಾಮರ್ಥ್ಯದ ಮೇಲೂ ಎಲ್ಲರ ಕಣ್ಣು ನೆಟ್ಟಿದೆ. ಇನ್ನೊಬ್ಬ ಸ್ಪಿನ್ನರ್‌ ವರುಣ್ ಚಕ್ರವರ್ತಿ ಅವರ ಫಿಟ್‌ನೆಸ್‌ ಕಳವಳಕ್ಕೆ ಕಾರಣವಾಗಿದೆ.

ಸ್ಥಿರ ಆಟದ ಮೂಲಕ ಗಮನ ಸೆಳೆಯುವ ಸನ್‌ರೈಸರ್ಸ್ ಹೈದರಾಬಾದ್‌, ಕಳೆದ ವರ್ಷ ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಎದುರು ಸೋತಿತ್ತು. ಈಗ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮರಳಿರುವುದು ತಂಡದ ಬಲ ವೃದ್ಧಿಸಿದೆ. ಯುಎಇಯಲ್ಲಿ ನಡೆದ ಟೂರ್ನಿಯಲ್ಲಿ ಗಾಯಗೊಂಡಿದ್ದ ಅವರು ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದರು.

‘ಭುವಿ‘ ಅವರಿಗೆ ಯಾರ್ಕರ್ ತಜ್ಞ ಟಿ.ನಟರಾಜನ್ ಬೆಂಬಲ ನೀಡಲಿದ್ದಾರೆ. ಇವರೊಂದಿಗೆ ಅಫ್ಗಾನಿಸ್ತಾನದ ರಶೀದ್ ಖಾನ್ ಅವರ ಸ್ಪಿನ್ ಕೂಡ ಜೊತೆಯಾಗಲಿದ್ದು, ಬೌಲಿಂಗ್ ವಿಭಾಗ ಸಮತೋಲನದಿಂದ ಕೂಡಿದಂತಿದೆ. ಬ್ಯಾಟಿಂಗ್‌ನಲ್ಲಿ ನಾಯಕ ವಾರ್ನರ್‌, ಅದ್ಭುತ ಲಯದಲ್ಲಿರುವ ಜಾನಿ ಬೆಸ್ಟೊ ತಂಡದ ಭರವಸೆಯಾಗಿದ್ದು, ಕೇನ್ ವಿಲಿಯಮ್ಸನ್‌, ಕನ್ನಡಿಗ ಮನೀಷ್ ಪಾಂಡೆ ಮಿನುಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.