ADVERTISEMENT

ಧೋನಿ, ಕೊಹ್ಲಿ ಏಕದಿನ–ಟೆಸ್ಟ್ ಕ್ರಿಕೆಟ್‌ನ ದಶಕದ ನಾಯಕರು: ಕ್ರಿಕೆಟ್ ಆಸ್ಟ್ರೇಲಿಯಾ

ಏಕದಿನ ತಂಡದಲ್ಲಿ ಸ್ಥಾನ ಪಡೆದ ರೋಹಿತ್ ಶರ್ಮಾ

ಏಜೆನ್ಸೀಸ್
Published 24 ಡಿಸೆಂಬರ್ 2019, 8:55 IST
Last Updated 24 ಡಿಸೆಂಬರ್ 2019, 8:55 IST
   

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಹಾಗೂ ಹಾಲಿ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಕ್ರಮವಾಗಿ ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ನ ದಶಕದತಂಡದ ನಾಯಕರನ್ನಾಗಿ ಕ್ರಿಕೆಟ್‌ ಆಸ್ಟ್ರೇಲಿಯಾ ಹೆಸರಿಸಿದೆ.

ಧೋನಿ ನೇತೃತ್ವದಲ್ಲಿ ಭಾರತ ತಂಡವು 2011ರಲ್ಲಿ ಏಕದಿನ ವಿಶ್ವಕಪ್‌ ಮತ್ತು 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದುಕೊಂಡಿತ್ತು. ಮಾತ್ರವಲ್ಲದೆ ಧೋನಿ ತಂಡವು ಏಕದಿನ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮೆರೆದಿತ್ತು. ಹೀಗಾಗಿ ಅವರನ್ನು ನಾಯಕರನ್ನಾಗಿ ಗುರುತಿಸಲಾಗಿದೆ.

ಕ್ರಿಕೆಟ್‌ ಆಸ್ಟ್ರೇಲಿಯಾ ಪಟ್ಟಿಮಾಡಿರುವ ದಶಕದ ಏಕದಿನ ತಂಡದಲ್ಲಿಯೂ ಧೋನಿ ವಿಕೆಟ್‌ಕೀಪರ್‌ ಆಗಿಯೇ ಕಾಣಿಸಿಕೊಂಡಿದ್ದಾರೆ. ಭಾರತ ತಂಡದ ಸದ್ಯದ ನಾಯಕ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರೂ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ರೋಹಿತ್‌, ದಕ್ಷಿಣ ಆಫ್ರಿಕಾದ ಹಾಶಿಂ ಆಮ್ಲಾ ಜೊತೆಗೆ ಆರಂಭಿಕ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಎಂದಿನಂತೆ ತಮ್ಮ ಮೂರನೇ ಕ್ರಮಾಂಕ ಗಿಟ್ಟಿಸಿಕೊಂಡಿದ್ದಾರೆ.

ADVERTISEMENT

ಅಂದಹಾಗೆ ಕ್ರಿಕೆಟ್‌ ಆಸ್ಟ್ರೇಲಿಯಾ ಹೆಸರಿಸಿರುವ ದಶಕದ ಟೆಸ್ಟ್ ತಂಡದ ನಾಯಕ ಎನಿಸಿರುವ ವಿರಾಟ್‌ ಕೊಹ್ಲಿ, ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯನೂ ಹೌದು.

ಕೊಹ್ಲಿ ಪಡೆಗೆ ಇಂಗ್ಲೆಂಡ್‌ನ ಆಲಿಸ್ಟರ್‌ ಕುಕ್‌ ಮತ್ತು ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಅವರನ್ನು ಆರಂಭಿಕರನ್ನಾಗಿ ಆಯ್ಕೆ ಮಾಡಲಾಗಿದೆ. ಮೂರನೇ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಕ್ರಮವಾಗಿ ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ ಹಾಗೂ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್ ಕಾಣಿಸಿಕೊಂಡಿದ್ದು, ಕೊಹ್ಲಿಗೆ ಐದನೇ ಕ್ರಮಾಂಕ ನೀಡಲಾಗಿದೆ.

ದಶಕದ ಏಕದಿನ ತಂಡ
ಎಂಎಸ್‌ ಧೋನಿ (ನಾಯಕ & ವಿಕೆಟ್‌ ಕೀಪರ್‌), ರೋಹಿತ್‌ ಶರ್ಮಾ, ಹಾಶಿಂ ಆಮ್ಲಾ, ವಿರಾಟ್‌ ಕೊಹ್ಲಿ, ಎಬಿಡಿ ವಿಲಿಯರ್ಸ್‌, ಶಕೀಬ್‌ ಅಲ್‌ ಹಸನ್‌, ಜಾಸ್‌ ಬಟ್ಲರ್‌, ರಶೀದ್‌ ಖಾನ್‌, ಮಿಚೇಲ್‌ ಸ್ಟಾರ್ಕ್‌, ಟ್ರೆಂಟ್‌ ಬೌಲ್ಟ್‌, ಲಸೀತ್‌ ಮಲಿಂಗಾ

ದಶಕದ ಟೆಸ್ಟ್‌ ತಂಡ
ವಿರಾಟ್‌ ಕೊಹ್ಲಿ (ನಾಯಕ),ಆಲಿಸ್ಟರ್‌ ಕುಕ್‌, ಡೇವಿಡ್‌ ವಾರ್ನರ್‌, ಕೇನ್‌ ವಿಲಿಯಮ್ಸನ್‌, ಸ್ಟೀವ್‌ ಸ್ಮಿತ್, ಎಬಿಡಿ ವಿಲಿಯರ್ಸ್‌ (ವಿಕೆಟ್‌ ಕೀಪರ್‌), ಬೆನ್ಸ್ ಸ್ಟೋಕ್ಸ್‌, ಡೇಲ್‌ ಸ್ಟೇಯ್ನ್‌, ಸ್ಟುವರ್ಟ್‌ ಬ್ರಾಡ್‌, ನಾಥನ್‌ ಲಯೊನ್‌, ಜೇಮ್ಸ್‌ ಆ್ಯಂಡರ್ಸನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.