ಮುಂಬೈ: ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಗುರುವಾರ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಜಯಿಸಿದವರು ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡುವರು.
ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ತಂಡವು ತವರಿನ ಅಂಗಳದಲ್ಲಿ ಟ್ರೋಫಿಗೆ ಮುತ್ತಿಡುವ ಕಾತುರದಲ್ಲಿದೆ. 2023ರಲ್ಲಿ ನಡೆದಿದ್ದ ಚೊಚ್ಚಲ ಡಬ್ಲ್ಯುಪಿಎಲ್‌ನಲ್ಲಿಯೂ ಮುಂಬೈ ಚಾಂಪಿಯನ್ ಆಗಿತ್ತು. ಹೋದ ಸಲ ಪ್ರಶಸ್ತಿ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಲೀಗ್ ಹಂತದಲ್ಲಿಯೇ ನಿರ್ಗಮಿಸಿತು.
ಪಾಯಿಂಟ್ ಪಟ್ಟಿಯಲ್ಲಿ ಮುಂಬೈ 10 ಮತ್ತು ಗುಜರಾತ್ 8 ಅಂಕ ಗಳಿಸಿ ಎಲಿಮಿನೇಟರ್‌ಗೆ ಪ್ರವೇಶಿಸಿವೆ. ಗುಜರಾತ್ ತಂಡವು ಲೀಗ್ ಹಂತದ ಆರಂಭದಲ್ಲಿ ಸತತ ಸೋಲುಗಳಿಂದ ಹೊರಬೀಳುವ ಆತಂಕ ಎದುರಿಸಿತ್ತು. ಆದರೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಜಯಿಸುವ ಮೂಲಕ ಪುಟಿದೆದ್ದ ಗಾರ್ಡನರ್ ಬಳಗವು ಈಗ ಪ್ರಶಸ್ತಿ ಸನಿಹ ಬಂದು ನಿಂತಿದೆ. ಬೆತ್ ಮೂನಿ, ಹರ್ಲಿನ್ ಡಿಯೊಲ್, ದಿಯಾಂದ್ರ ಡಾಟಿನ್, ಭಾರತಿ ಫೂಲ್‌ಮಾಲಿ, ಫೋಬಿ ಲಿಚ್‌ಫೀಲ್ಡ್ ಹಾಗೂ ಪ್ರಿಯಾ ಮಿಶ್ರಾ ಅವರು ತಂಡದ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆದರೆ ಮುಂಬೈ ತಂಡವನ್ನು ಕಟ್ಟಿಹಾಕುವುದು ಗುಜರಾತ್ ಬಳಗಕ್ಕೆ ಸುಲಭವಲ್ಲ. ನಾಯಕಿ ಹರ್ಮನ್‌ಪ್ರೀತ್, ಆಲ್‌ರೌಂಡರ್ ನಾಟ್ ಶಿವರ್ ಬ್ರಂಟ್, ಹೆಯ್ಲಿ ಮ್ಯಾಥ್ಯೂಸ್, ಅಮೆಲಿಯಾ ಕೆರ್ ಅವರನ್ನು ನಿಯಂತ್ರಿಸುವುದು ಎದುರಾಳಿಗಳಿಗೆ ದೊಡ್ಡ ಸವಾಲಾಗಲಿದೆ.
ಮುಂಬೈ ತಂಡದ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಮಧ್ಯಮವೇಗಿ ಶಬ್ನಿಂ ಇಸ್ಮಾಯಿಲ್, ಅಮೆಲಿಯಾ ಹಾಗೂ ಬ್ರಂಟ್ ಉತ್ತಮ ಲಯದಲ್ಲಿದ್ದಾರೆ. ಜೊತೆಗೆ ತವರಿನ ಅಂಗಳದಲ್ಲಿ ಅಭಿಮಾನಿಗಳ ಬೆಂಬಲ ಕೂಡ ಲಭಿಸಿರುವುದು ತಂಡದ ಬಲ ಹೆಚ್ಚಿಸುವ ನಿರೀಕ್ಷೆ ಇದೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.