ಶ್ರೇಯಸ್ ಅಯ್ಯರ್
ಜೈಪುರ: ಐದು ಸಲದ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಸೋಮವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಉಭಯ ತಂಡಗಳಿಗೂ ಇದು ಕೊನೆಯ ಲೀಗ್ ಪಂದ್ಯವಾಗಿದೆ. ಸದ್ಯ ಪಂಜಾಬ್ ತಂಡವು ಎರಡನೇ ಮತ್ತು ಮುಂಬೈ ನಾಲ್ಕನೇ ಸ್ಥಾನದಲ್ಲಿವೆ. ಪ್ಲೇ ಆಫ್ ಅರ್ಹತೆಯನ್ನೂ ಖಚಿತಪಡಿಸಿಕೊಂಡಿವೆ.
ಆದರೆ 17 ಅಂಕ ಹೊಂದಿರುವ ಪಂಜಾಬ್ ತಂಡವು ಮುಂಬೈ ವಿರುದ್ಧ ಸೋತರೆ ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ಇಳಿಯುವ ಸಾಧ್ಯತೆ ಇದೆ. ಆಗ ತಂಡವು ಎಲಿಮಿನೇಟರ್‌ನಲ್ಲಿ ಆಡಬೇಕಾಗುತ್ತದೆ. ಶನಿವಾರ ರಾತ್ರಿ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತಿದ್ದರಿಂದ ಈ ರೀತಿಯ ಪರಿಸ್ಥಿತಿ ಬಂದಿದೆ. ಅಗ್ರ ಎರಡರಲ್ಲಿ ಸ್ಥಾನ ಪಡೆಯಬೇಕೆಂದರೆ ಮುಂಬೈ ಎದುರು ಪಂಜಾಬ್ ಜಯಿಸಲೇಬೇಕು.
16 ಅಂಕ ಗಳಿಸಿರುವ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ರನ್‌ರೇಟ್ ಹೊಂದಿದೆ. ಪಂಜಾಬ್ ಎದುರು ಜಯಿಸಿದರೆ, ಎರಡನೇ ಸ್ಥಾನಕ್ಕೇರಲಿದೆ. ಗುಜರಾತ್ ಟೈಟನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ತಮ್ಮತಮ್ಮ ಕೊನೆಯ ಪಂದ್ಯಗಳಲ್ಲಿ ಸೋತರೆ ಮುಂಬೈ ಅಗ್ರಸ್ಥಾನಕ್ಕೇರಲೂಬಹದು.
ಆದರೆ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ತಂಡವು ಡೆಲ್ಲಿ ಎದುರಿನ ಸೋಲಿನಲ್ಲಿ ಆದ ಲೋಪಗಳನ್ನು ಸುಧಾರಣೆ ಮಾಡಿಕೊಂಡು ಕಣಕ್ಕಿಳಿಯುವುದು ಅನಿವಾರ್ಯ.
ಪಂಜಾಬ್ ತಂಡವು ಡೆಲ್ಲಿಗೆ 207 ರನ್‌ಗಳ ಗುರಿಯೊಡ್ಡಿತ್ತು. ಆದರೂ ಈ ಕಠಿಣ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಪಂಜಾಬ್ ಬೌಲರ್‌ಗಳು ಸಫಲರಾಗಲಿಲ್ಲ. ಆದ್ದರಿಂದ ಬೌಲಿಂಗ್ ಪಡೆಯ ಹರ್‌ಪ್ರೀತ್ ಬ್ರಾರ್ ಒಬ್ಬರನ್ನು ಬಿಟ್ಟರೆ ಉಳಿದ ಬೌಲರ್‌ಗಳು ಹೆಚ್ಚು ಪರಿಣಾಮಕಾರಿಯಾಗಿಲಿಲ್ಲ.
ಕಿಂಗ್ಸ್ ತಂಡದ ಬ್ಯಾಟಿಂಗ್ ಪಡೆ ಉತ್ತಮವಾಗಿದೆ. ಪ್ರಿಯಾಂಶ್ ಆರ್ಯ, ಪ್ರಭಸಿಮ್ರನ್ ಸಿಂಗ್, ಜೋಷ್ ಇಂಗ್ಲಿಸ್, ಶ್ರೇಯಸ್ ಅಯ್ಯರ್, ಮಾರ್ಕಸ್ ಸ್ಟೊಯಿನಿಸ್ ಮತ್ತು ನೆಹಲ್ ವಧೇರಾ ಅವರು ರನ್‌ಗಳ ಕಾಣಿಕೆಯನ್ನು ನೀಡುತ್ತಿದ್ದಾರೆ. ಆದರೂ ಮುಂಬೈ ತಂಡದ ಬೌಲಿಂಗ್ ಪಡೆಯನ್ನು ಎದುರಿಸಿನಿಲ್ಲುವುದು ಸುಲಭವಲ್ಲ. ವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಟ್ರೆಂಟ್ ಬೌಲ್ಟ್ ಅವರು ಅಮೋಘ ಫಾರ್ಮ್‌ನಲ್ಲಿದ್ದಾರೆ. ಅಲ್ಲದೇ ಆಲ್‌ರೌಂಡರ್ ವಿಲ್ ಜ್ಯಾಕ್ಸ್, ಕರ್ಣ ಶರ್ಮಾ ಮತ್ತು ನಾಯಕ ಹಾರ್ದಿಕ್ ಕೂಡ ಮಿಂಚುತ್ತಿದ್ದಾರೆ.
ಬ್ಯಾಟಿಂಗ್ ವಿಭಾಗದಲ್ಲಿಯೂ ಮುಂಬೈಗೆ ರೋಹಿತ್, ರಿಯಾನ್ ರಿಕೆಲ್ಟನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಹಾಗೂ ನಮನ್ ಧೀರ್ ಅವರ ಆಟದ ಬಲವಿದೆ. ಆದ್ದರಿಂದ ಕಿಂಗ್ಸ್ ಗೆಲುವಿನ ಹಾದಿ ತುಸು ಕಠಿಣವೇ ಆಗಿದೆ.
ಪಂದ್ಯ ಆರಂಭ; ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.