ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್, ನಾಯಕ ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ
–ಪಿಟಿಐ ಚಿತ್ರ
ಮುಂಬೈ: ರಜತ್ ಪಾಟೀದಾರ್ ನಾಯಕತ್ವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐದು ಸಲ ಐಪಿಎಲ್ ಟ್ರೋಫಿ ಜಯಿಸಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಸೋಮವಾರ ಎದುರಿಸಲಿದೆ.
ಆತಿಥೇಯ ತಂಡವು ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಸೋತಿದೆ. ಅಲ್ಲದೇ ಬ್ಯಾಟಿಂಗ್ ವಿಭಾಗದಲ್ಲಿ ಇರುವ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿಲ್ಲ. ಇದರಿಂದಾಗಿ ತಂಡಕ್ಕೆ ಹಿನ್ನಡೆಯಾಗುತ್ತಿದೆ. ಈ ಪರಿಸ್ಥಿತಿಯ ಲಾಭ ಪಡೆದು ಜಯ ಸಾಧಿಸುವತ್ತ ಆರ್‌ಸಿಬಿ ಚಿತ್ತ ನೆಟ್ಟಿದೆ. ಇದೀಗ ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಜಸ್‌ಪ್ರೀತ್ ಬೂಮ್ರಾ ಮುಂಬೈ ತಂಡಕ್ಕೆ ಮರಳಿದ್ದಾರೆ. ಅವರು ಪಂದ್ಯದಲ್ಲಿ ಆಡುವ ಕುರಿತು ಇನ್ನೂ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಒಂದೊಮ್ಮೆ ಅವರು ಕಣಕ್ಕಿಳಿದರೆ ಮುಂಬೈ ಬೌಲಿಂಗ್ ಪಡೆಯ ಬಲ ಮತ್ತಷ್ಟು ಹೆಚ್ಚುವುದು ಖಚಿತ. ಅವರನ್ನು ಎದುರಿಸಲು ಬೆಂಗಳೂರು ತಂಡದ ಬ್ಯಾಟರ್‌ಗಳು ಸಿದ್ಧರಾಗಬೇಕಿದೆ.
ರಜತ್ ಬಳಗವು ಟೂರ್ನಿಯಲ್ಲಿ ಆಡಿದ ಮೊದಲೆರಡೂ ಪಂದ್ಯಗಳಲ್ಲಿ ಜಯಸಿತ್ತು. ಆದರೆ ಈಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು ಮುಗ್ಗರಿಸಿತ್ತು. ಅದರಿಂದಾಗಿ ಜಯದ ಹಾದಿಗೆ ಮರಳುವ ಒತ್ತಡವೂ ತಂಡದ ಮೇಲೆ ಇದೆ. ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಸ್ಫೋಟಕ ಮತ್ತು ಅನುಭವಿ ಬ್ಯಾಟರ್‌ಗಳಿದ್ದಾರೆ. ಆದರೆ ಬೆಂಗಳೂರಿನಲ್ಲಿ ಗುಜರಾತ್ ಬೌಲರ್‌ಗಳ ಎದುರು ಅಗ್ರಕ್ರಮಾಂಕದ ಬ್ಯಾಟರ್‌ಗಳು ವಿಫಲರಾಗಿದ್ದರು.
ಅನುಭವಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ನಾಯಕ ರಜತ್ ಅವರು ದೇವದತ್ತ ಪಡಿಕ್ಕಲ್ ತಮ್ಮ ಲಯಕ್ಕೆ ಮರಳಿದರೆ ದೊಡ್ಡ ಮೊತ್ತ ಗಳಿಸುವುದು ಸುಲಭವಾಗಲಿದೆ. ಮಧ್ಯಮ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಟಿಮ್ ಡೇವಿಡ್ ಅವರ ಮೇಲೆ ವಿಶ್ವಾಸವಿಡಬಹುದು. ಬೆಂಗಳೂರಿನ ಪಂದ್ಯದಲ್ಲಿಯೂ ಈ ಮೂವರು ಆಟಗಾರರೇ ತಂಡವು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದ್ದರು. ಮುಂಬೈ ತಂಡದ ನಾಯಕ ಹಾರ್ದಿಕ್ ಕಳೆದ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಗಳಿಸಿದ್ದರು. ಅದೇ ಲಯವನ್ನು ಇಲ್ಲಿಯೂ ಮುಂದುವರಿಸುವ ಛಲದ್ಲಿದ್ದಾರೆ. ಯುವ ಸ್ಪಿನ್ನರ್ ವಿಘ್ನೇಶ್ ಪುತ್ತೂರ್, ವೇಗಿ ಅಶ್ವಿನಿ ಕುಮಾರ್ ಅವರೂ ಪರಿಣಾಮಕಾರಿಯಾಗಿದ್ದಾರೆ.
ಆರ್‌ಸಿಬಿ ಬೌಲಿಂಗ್‌ನಲ್ಲಿ ಜೋಷ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಮತ್ತು ಸ್ಪಿನ್ನರ್ ಕೃಣಾಲ್ ಪಾಂಡ್ಯ ಅವರ ಮುಂದೆ ಮುಂಬೈ ತಂಡದ ಯಶಸ್ವಿ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಕಟ್ಟಿಹಾಕುವ ಸವಾಲು ಇದೆ. ಇದುವರೆಗೆ ಟೂರ್ನಿಯಲ್ಲಿ ಒಟ್ಟು 177 ರನ್ ಸೇರಿಸುವ ಸೂರ್ಯ ಉತ್ತಮ ಲಯದಲ್ಲಿದ್ದಾರೆ. ರೋಹಿತ್ ಶರ್ಮಾ ಗಾಯದ ಕಾರಣದಿಂದಾಗಿ ಕಳೆದ ಪಂದ್ಯದಲ್ಲಿ ಆಡಿರಲಿಲ್ಲ. ಈ ಪಂದ್ಯಕ್ಕೆ ಮರಳುವುದೂ ಅನುಮಾನ.
ತಿಲಕ್ ವರ್ಮಾ, ರಿಯಾನ್ ರಿಕೆಲ್ಟನ್, ನಮನ್ ಧೀರ್ ಅವರು ಕಳೆದ ಪಂದ್ಯಗಳಲ್ಲಿ ರನ್‌ಗಳನ್ನು ಗಳಿಸಿದ್ದಾರೆ. ಆದರೆ ತಂಡವನ್ನು ಗೆಲುವಿನ ದಡ ಸೇರಿಸುವ ಸಾಮರ್ಥ್ಯವನ್ನು ಅವರು ತೋರಬೇಕಿದೆ. ಉಭಯ ತಂಡಗಳಿಗೂ ಜಯದ ಹಳಿಗೆ ಮರಳುವ ಛಲ ಇರುವುದರಿಂದ ರೋಚಕ ಹಣಾಹಣಿಯ ನಿರೀಕ್ಷೆ ಗರಿಗೆದರಿದೆ. ಅಲ್ಲದೇ ಹೋದ ವರ್ಷ ಇಲ್ಲಿಯೇ ನಡೆದಿದ್ದ ಪಂದ್ಯದಲ್ಲಿ ಮುಂಬೈ ಎದುರು ಸೋತಿದ್ದ ಆರ್‌ಸಿಬಿ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿದೆ.
ಪಂದ್ಯ;33
ಆರ್‌ಸಿಬಿ ಜಯ;14
ಮುಂಬೈ ಜಯ;19
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.