ADVERTISEMENT

ಕ್ವಿಂಟನ್ ಅರ್ಧಶತಕ; ಮುಂಬೈ ಜಯದ ಓಟ

ಡೇವಿಡ್ ವಾರ್ನರ್ ಅರ್ಧಶತಕ ವ್ಯರ್ಥ; ಮುಂಬೈ ಬೌಲರ್‌ಗಳ ಬಿಗಿ ದಾಳಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 14:41 IST
Last Updated 4 ಅಕ್ಟೋಬರ್ 2020, 14:41 IST
ಮುಂಬೈಇಂಡಿಯನ್ಸ್ ತಂಡದ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ –ಪಿಟಿಐ ಚಿತ್ರ
ಮುಂಬೈಇಂಡಿಯನ್ಸ್ ತಂಡದ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ –ಪಿಟಿಐ ಚಿತ್ರ   

ಶಾರ್ಜಾ(ಪಿಟಿಐ): ಕ್ವಿಂಟನ್ ಡಿ ಕಾಕ್ ಮತ್ತು ಡೇವಿಡ್ ವಾರ್ನರ್ ಅವರು ಭಾನುವಾರ ಸುಂದರವಾದ ಅರ್ಧಶತಕಗಳನ್ನು ದಾಖಲಿಸಿದರು. ಆದರೆ ಜಯ ಒಲಿದಿದ್ದು ಮಾತ್ರ ಕ್ವಿಂಟನ್ ಆಡುವ ಮುಂಬೈ ಇಂಡಿಯನ್ಸ್ ಬಳಗಕ್ಕೆ.

ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ 34 ರನ್‌ಗಳಿಂದ ಗೆದ್ದ ರೋಹಿತ್ ಶರ್ಮಾ ಪಡೆಯು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಮಧ್ಯಾಹ್ನ ಟಾಸ್ ಗೆದ್ದ ಮುಂಬೈ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರೋಹಿತ್ ಶರ್ಮಾ ಮೊದಲ ಓವರ್‌ನಲ್ಲಿಯೇ ಔಟಾದರು. ಈ ಹಂತದಲ್ಲಿ ಹೊಣೆ ಹೊತ್ತ ಕ್ವಿಂಟನ್ (67; 39ಎಸೆತ, 4ಬೌಂಡರಿ, 4ಸಿಕ್ಸರ್) ಅವರ ಅಟದ ಬಲದಿಂದ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 208 ರನ್ ಗಳಿಸಿತು. ಇದಕ್ಕುತ್ತರವಾಗಿ ಹೈದರಾಬಾದ್ ತಂಡವು 20 ಓವರ್‌ಗಳಲ್ಲಿ 7ಕ್ಕೆ174 ರನ್ ಗಳಿಸಿತು.

ಹೈದರಾಬಾದ್ ತಂಡದ ನಾಯಕ, ಆರಂಭಿಕ ಬ್ಯಾಟ್ಸ್‌ಮನ್ ವಾರ್ನರ್ (60; 44ಎ, 5ಬೌಂ, 2ಸಿ) ಮತ್ತು ಮನೀಷ್ ಪಾಂಡೆ (30;19ಎ) ಎರಡನೇ ವಿಕೆಟ್ ಜೊತೆಯಾಟದಲ್ಲಿ 80 ರನ್‌ ಗಳಿಸಿದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ಅಬ್ಬರಿಸದಂತೆ ಮುಂಬೈ ತಂಡದ ಟ್ರೆಂಟ್ ಬೌಲ್ಟ್, ಜೇಮ್ಸ್ ಪ್ಯಾಟಿನ್ಸನ್ ಮತ್ತು ಜಸ್‌ಪ್ರೀತ್ ಬೂಮ್ರಾ ನೋಡಿಕೊಂಡರು. ಮೂವರೂ ತಲಾ ಎರಡು ವಿಕೆಟ್ ಕಬಳಿಸಿದರು.

ADVERTISEMENT

ಗಾಯಗೊಂಡಿರುವ ಭುವನೇಶ್ವರ್ ಕುಮಾರ್ ಕಣಕ್ಕಿಳಿಯದಿರುವುದು ಸನ್‌ರೈಸರ್ಸ್‌ ತಂಡದ ಹಿನ್ನಡೆಗೆ ಕಾರಣವಾಯಿತು. ಮುಂಬೈ ತಂಡದ ಕ್ವಿಂಟನ್ ಅವರಿಗೆ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ , ಕೀರನ್ ಪೊಲಾರ್ಡ್ ಮತ್ತು ಪಾಂಡ್ಯ ಸಹೋದರರು ಉತ್ತಮ ಬೆಂಬಲ ನೀಡಿ ತಂಡದ ಮೊತ್ತವು ‘ದ್ವಿಶತಕ’ ದಾಟಲು ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.