ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂದಾನ ಬ್ಯಾಟಿಂಗ್
–ಪಿಟಿಐ ಚಿತ್ರ
ಮುಂಬೈ: ನಾಯಕಿ ಸ್ಮೃತಿ ಮಂದಾನ ಸೇರಿದಂತೆ ಬ್ಯಾಟರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಂಗಳವಾರ ಮಹಿಳಾ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ 11 ರನ್‌ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿತು.
ಸತತ ಐದು ಪಂದ್ಯಗಳನ್ನು ಸೋತು ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದ್ದ ಸ್ಮೃತಿ ಮಂದಾನ ಪಡೆಗೆ ಲೀಗ್‌ನ ಈ ಕೊನೆಯ ಪಂದ್ಯ ಔಪಚಾರಿಕವಾಗಿತ್ತು. ಇನ್ನೊಂದೆಡೆ ಮುಂಬೈಗೆ ಈ ಪಂದ್ಯ ಮಹತ್ವದ್ದಾಗಿದ್ದು, ಇಲ್ಲಿ ಗೆದ್ದಿದ್ದರೆ ಅಗ್ರಸ್ಥಾನದೊಡನೆ ಫೈನಲ್‌ಗೆ ನೇರ ಪ್ರವೇಶ ಪಡೆಯುವ ಅವಕಾಶವಿತ್ತು.
ಹೀಗಾಗಿ 10 ಅಂಕ ಗಳಿಸಿ, ಉತ್ತಮ ನೆಟ್ ರನ್‌ರೇಟ್ ಹೊಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಗ್ರಸ್ಥಾನದೊಂದಿಗೆ ಫೈನಲ್ ತಲುಪಿತು. ಮುಂಬೈ ತಂಡವು (10 ಅಂಕ) ಪ್ಲೇ ಆಫ್ ಸುತ್ತಿನಲ್ಲಿ ಗುರುವಾರ ಗುಜರಾತ್ ಜೈಂಟ್ಸ್ (8 ಅಂಕ) ವಿರುದ್ಧ ಆಡಬೇಕಾಗಿದೆ.
ಮೊದಲು ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ಆರ್‌ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 199 ರನ್‌ಗಳ ಸವಾಲಿನ ಮೊತ್ತ ಪೇರಿಸಿ ಮುಂಬೈ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಗುರಿ ಬೆನ್ನಟ್ಟಿದ ಹರ್ಮನ್‌ಪ್ರೀತ್ ಕೌರ್ ಪಡೆ ಹೋರಾಟ ತೋರಿದರೂ 9 ವಿಕೆಟ್‌ಗೆ 188 ರನ್ ಗಳಿಸಿ ಹೋರಾಟವನ್ನು ಮುಗಿಸಿತು.
ಮುಂಬೈ ಪರ ನಾಟ್ ಶಿವರ್ ಬ್ರಂಟ್ (69;35, 4x9, 6x2) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು. ಸ್ನೇಹ ರಾಣಾ (26ಕ್ಕೆ 3) ಮತ್ತು ಕಿಮ್ ಗಾರ್ಥ್ (33ಕ್ಕೆ 2) ಇಂಡಿಯನ್ಸ್‌ಗೆ ಕಡಿವಾಣ ಹಾಕಿದರು.
ಮಂದಾನ ಅರ್ಧಶತಕ: ಕೆಲ ಪಂದ್ಯಗಳಲ್ಲಿ ವಿಫಲರಾದ ಬಳಿಕ ನಾಯಕಿ ಸ್ಮೃತಿ ಮಂದಾನ (53, 37ಎ, 4x6, 6x3) ಈ ಪಂದ್ಯದಲ್ಲಿ ಸೊಗಸಾದ ಅರ್ಧ ಶತಕ ಬಾರಿಸಿದರು.
ನಂತರ ಎಲಿಸ್ ಪೆರಿ (ಔಟಾಗದೇ 49;38ಎ, 4x5, 6x1), ರಿಚಾ ಘೋಷ್ (36;22ಎ) ಮತ್ತು ಜಾರ್ಜಿಯಾ ವೇರ್ಹ್ಯಾಮ್ (31;10ಎ) ಅವರ ಆಕ್ರಮಣಕಾರಿ ಆಟದ ನೆರವಿನಿಂದ ಕೊನೆಯ ಐದು ಓವರುಗಳಲ್ಲಿ 70 ರನ್‌ಗಳು ಹರಿದುಬಂದವು.
ಸಂಕ್ಷಿಪ್ತ ಸ್ಕೋರು: ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರುಗಳಲ್ಲಿ 3ಕ್ಕೆ 199 (ಸಬ್ಬಿನೇನಿ ಮೇಘನಾ 26, ಸ್ಮೃತಿ ಮಂದಾನ 54, ಎಲಿಸ್ ಪೆರಿ ಔಟಾಗದೇ 49, ರಿಚಾ ಘೋಷ್ 36, ಜಾರ್ಜಿಯಾ ವೇರ್ಹ್ಯಾಮ್ ಔಟಾಗದೇ 31; ಹೇಯ್ಲಿ ಮ್ಯಾಥ್ಯೂಸ್ 47ಕ್ಕೆ2) ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 9ಕ್ಕೆ 188 (ನಾಟ್ ಶಿವರ್ ಬ್ರಂಟ್ 69, ಸಜೀವನ್ ಸಜನಾ 23; ಕಿಮ್ ಗಾರ್ಥ್ 33ಕ್ಕೆ 2, ಎಲಿಸ್ ಪೆರಿ 53ಕ್ಕೆ 2, ಸ್ನೇಹ ರಾಣಾ 26ಕ್ಕೆ 3). ಪಂದ್ಯದ ಆಟಗಾರ್ತಿ: ಸ್ನೇಹಾ ರಾಣಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.