ADVERTISEMENT

Ranji Trophy Semifinals: ಮುಂಬೈಗೆ ಸೋಲಿನ ಭೀತಿ; ಗುಜರಾತ್–ಕೇರಳ ರೋಚಕ ಹಣಾಹಣಿ

ಪಿಟಿಐ
Published 20 ಫೆಬ್ರುವರಿ 2025, 14:32 IST
Last Updated 20 ಫೆಬ್ರುವರಿ 2025, 14:32 IST
<div class="paragraphs"><p>ವಿದರ್ಭ ತಂಡದ ಯಶ್ ರಾಥೋಡ್ ಶತಕ ಸಂಭ್ರಮ&nbsp; </p></div>

ವಿದರ್ಭ ತಂಡದ ಯಶ್ ರಾಥೋಡ್ ಶತಕ ಸಂಭ್ರಮ 

   

–ಪಿಟಿಐ ಚಿತ್ರ

ನಾಗಪುರ: ರಣಜಿ ಟ್ರೋಫಿ ಕ್ರಿಕೆಟ್ ಇತಿಹಾಸದಲ್ಲಿ 42 ಬಾರಿ ಚಾಂಪಿಯನ್ ಆಗಿರುವ ಮುಂಬೈ ತಂಡವು ಈ ಬಾರಿ ಸೆಮಿಫೈನಲ್‌ ಹಂತದಲ್ಲಿಯೇ ಸೋತು ಹೊರಬೀಳುವ ಆತಂಕದಲ್ಲಿದೆ. 

ADVERTISEMENT

ವಿದರ್ಭ ಕ್ರಿಕೆಟ್ ಸಂಸ್ಥೆ (ವಿಸಿಎ) ಕ್ರೀಡಾಂಗಣದಲ್ಲಿ  ನಡೆಯುತ್ತಿರುವ ನಾಲ್ಕರ ಘಟ್ಟದ ಪಂದ್ಯದ ನಾಲ್ಕನೇ ದಿನವಾದ ಗುರುವಾರ  ವಿದರ್ಭ ತಂಡವು ಒಡ್ಡಿರುವ 406 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಮುಂಬೈ 83 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಉಳಿದಿರುವ ಕೊನೆಯ ದಿನದಾಟದಲ್ಲಿ ಗೆಲ್ಲಲು 323 ರನ್‌ಗಳನ್ನು ಗಳಿಸಬೇಕಿದೆ.  ಒಂದೊಮ್ಮೆ ಡ್ರಾ ಮಾಡಿಕೊಂಡರೂ ವಿದರ್ಭ ತಂಡವು ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಫೈನಲ್ ಪ್ರವೇಶಿಸಲಿದೆ. ಪ್ರಥಮ ಇನಿಂಗ್ಸ್‌ನಲ್ಲಿ ವಿದರ್ಭ ತಂಡವು 113 ರನ್‌ ಮುನ್ನಡೆ ಸಾಧಿಸಿತ್ತು. 

ಎರಡನೇ ಇನಿಂಗ್ಸ್‌ನಲ್ಲಿ ಯಶ್ ರಾಥೋಡ್ (151; 252ಎ, 4X11) ಅವರ ಅಮೋಘ ಶತಕ ಮತ್ತು ನಾಯಕ ಅಕ್ಷಯ್ ವಾಡಕರ್ (52; 202ಎ, 4X5) ಅವರ ಅರ್ಧಶತಕದಿಂದಾಗಿ ವಿದರ್ಭ 292 ರನ್ ಗಳಿಸಿತು. 

ಬೃಹತ್ ಗುರಿ ಬೆನ್ನಟ್ಟಿದ ಮುಂಬೈ ತಂಡದ ಬ್ಯಾಟರ್‌ ಗಳಾದ ಆಯುಷ್ ಮಾತ್ರೆ (18 ರನ್), ಸಿದ್ಧೇಶ್ ಲಾಡ್ (2 ರನ್) ಮತ್ತು ನಾಯಕ ಅಜಿಂಕ್ಯ ರಹಾನೆ (12 ರನ್) ಅವರು ಸ್ಪಿನ್ ಬೌಲಿಂಗ್ ಮುಂದೆ ಮಂಡಿಯೂರಿದರು. ಇದರಿಂದಾಗಿ ಮುಂಬೈ ತಂಡಕ್ಕೆ ಆರಂಭದಲ್ಲಿಯೇ ಪೆಟ್ಟು ಬಿತ್ತು.  ಆದರೆ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಆಕಾಶ್ ಆನಂದ್ (ಬ್ಯಾಟಿಂಗ್ 27) ಮತ್ತು ಶಿವಂ ದುಬೆ (ಬ್ಯಾಟಿಂಗ್ 12) ಕ್ರೀಸ್‌ನಲ್ಲಿದ್ದಾರೆ. 

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್:

ವಿದರ್ಭ: 107.5 ಓವರ್‌ಗಳಲ್ಲಿ 383.

ಮುಂಬೈ: 92 ಓವರ್‌ಗಳಲ್ಲಿ 270.

ಎರಡನೇ ಇನಿಂಗ್ಸ್:

ವಿದರ್ಭ: 110.1 ಓವರ್‌ಗಳಲ್ಲಿ 292 (ಯಶ್ ರಾಥೋಡ್ 151, ಅಕ್ಷಯ್ ವಾಡಕರ್ 52, ಪಾರ್ಥ್ ರೇಖಡೆ 20, ಶಮ್ಸ್ ಮುಲಾನಿ 85ಕ್ಕೆ6, ತನುಷ್ ಕೋಟ್ಯಾನ್ 81ಕ್ಕೆ3)

ಮುಂಬೈ: 31 ಓವರ್‌ಗಳಲ್ಲಿ 3ಕ್ಕೆ83 (ಆಕಾಶ್ ಆನಂದ್ ಬ್ಯಾಟಿಂಗ್ 27, ಶಿವಂ ದುಬೆ ಬ್ಯಾಟಿಂಗ್ 12, ಹರ್ಷ ದುಬೆ 26ಕ್ಕೆ2) 

ರೋಚಕ ಘಟ್ಟದಲ್ಲಿ ಗುಜರಾತ್–ಕೇರಳ ಹಣಾಹಣಿ

ಅಹಮದಾಬಾದ್: ಗುಜರಾತ್ ತಂಡವು ಶುಕ್ರವಾರ 28 ರನ್‌ ಗಳಿಸುವ ಮುನ್ನವೇ ಕೇರಳದ ಬೌಲರ್‌ಗಳು 3 ವಿಕೆಟ್‌ಗಳನ್ನು ಕಬಳಿಸಿದರೆ ಫೈನಲ್ ಪ್ರವೇಶ ಗಿಟ್ಟಿಸಲಿದ್ದಾರೆ. 

ಹೌದು; ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್ ಪಂದ್ಯದ ನಾಲ್ಕನೇ ದಿನವಾದ ಗುರುವಾರದ ಅಂತ್ಯಕ್ಕೆ ಉಳಿದ ಕುತೂಹಲದ ಸಂಗತಿ ಇದು. ಈ ಪಂದ್ಯವು ಡ್ರಾ ಆಗುವುದು ಖಚಿತ. ಆದರೆ ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯುವ ತಂಡವು ಪ್ರಶಸ್ತಿ ಸುತ್ತಿಗೆ ತೆರಳುವುದು.  ಕೇರಳ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿರುವ 457 ರನ್‌ಗಳಿಗೆ ಉತ್ತರವಾಗಿ ಗುಜರಾತ್ ಎರಡು ದಿನ ಬ್ಯಾಟಿಂಗ್ ಮಾಡಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ 154 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 429 ರನ್ ಗಳಿಸಿದೆ. 

ಆರನೇ ಕ್ರಮಾಂಕದ ಬ್ಯಾಟರ್ ಜಯಮೀತ್ ಪಟೇಲ್ (ಬ್ಯಾಟಿಂಗ್ 74; 161) ಅವರ ತಾಳ್ಮೆಯ ಅರ್ಧಶತಕದಿಂದಾಗಿ ಗುಜರಾತ್ ತಂಡದ ಫೈನಲ್ ಪ್ರವೇಶದ ಅವಕಾಶ ಇನ್ನೂ ಜೀವಂತವಾಗಿದೆ.  ಆರಂಭಿಕ ಬ್ಯಾಟರ್‌ ಪ್ರಿಯಾಂಕ್ ಪಾಂಚಾಲ್ ಶತಕ (148; 237ಎ 4X18 6X1) ಮತ್ತು ಆರ್ಯಾ ದೇಸಾಯಿ (73; 118ಎ 4X11 6X1) ಮೊದಲ ವಿಕೆಟ್ ಜೊತೆಯಾಟದಲ್ಲಿ 131 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿದರು. ಆದರೆ ಮಧ್ಯಮ ಹಂತದ ಬ್ಯಾಟರ್‌ಗಳು ದೀರ್ಘ ಇನಿಂಗ್ಸ್ ಆಡಲಿಲ್ಲ. ಆದರೆ ಇದರ ಕೊರೆಯನ್ನು ಪಟೇಲ್ ನೀಗಿಸಿದರು. ಅವರ ಆಟದಲ್ಲಿ ಕೇವಲ 2 ಬೌಂಡರಿಗಳಿದ್ದವು. ಅವರಿಗೆ ಸಿದ್ಧಾರ್ಥ್ ದೇಸಾಯಿ (ಬ್ಯಾಟಿಂಗ್ 24; 134ಎ) ಉತ್ತಮ ಜೊತೆ ನೀಡಿದರು.

ಶುಕ್ರವಾರ ಬೆಳಿಗ್ಗೆ ಇವರಿಬ್ಬರ ಮೇಲೆ ತಂಡವನ್ನು ಮುನ್ನಡೆಯತ್ತ ಕೊಂಡೊಯ್ಯುವ ಒತ್ತಡ ಹೆಚ್ಚಿದೆ.   ಕೇರಳದ ಬೌಲಿಂಗ್ ಪಡೆಯು ಬೆಳಗಿನ ವಾತಾವರಣದಲ್ಲಿ ಗುಜರಾತ್ ಆಸೆಗೆ ತಣ್ಣೀರೆರಚುವ ಛಲದಲ್ಲಿದೆ. ಜಲಜ್ ಸಕ್ಸೇನಾ (137ಕ್ಕೆ4) ಹಾಗೂ ತಲಾ ಒಂದು ವಿಕೆಟ್ ಗಳಿಸಿರುವ ನಿಧಿಶ್ ಬಾಸಿಲ್ ಮತ್ತು ಆದಿತ್ಯ ಸರವಟೆ ಅವರು ತಮ್ಮ ಸಾಮರ್ಥ್ಯ ಮೆರೆಯಲು ಸಿದ್ಧರಾಗಿದ್ದಾರೆ.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್:

ಕೇರಳ: 457.

ಗುಜರಾತ್: 154 ಓವರ್‌ಗಳಲ್ಲಿ 7ಕ್ಕೆ429 ( ಪ್ರಿಯಾಂಕ್ ಪಾಂಚಾಲ್ 148 ಜಯಮೀತ್ ಪಟೇಲ್ ಬ್ಯಾಟಿಂಗ್ 74 ಆರ್ಯಾ ದೇಸಾಯಿ 73 ಸಿದ್ಧಾರ್ಥ್ ದೇಸಾಯಿ ಬ್ಯಾಟಿಂಗ್ 24 ಜಲಜ್ ಸಕ್ಸೆನಾ 137ಕ್ಕೆ4) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.