ADVERTISEMENT

ಮುಷ್ಫಿಕುರ್ ಶತಕ; ಕುತೂಹಲ ಘಟ್ಟದಲ್ಲಿ ಟೆಸ್ಟ್

ಶ್ರಿಲಂಕಾ ವಿರುದ್ಧ ಬಾಂಗ್ಲಾದೇಶಕ್ಕೆ ಇನ್ನಿಂಗ್ಸ್ ಮುನ್ನಡೆ; 4 ವಿಕೆಟ್ ಗಳಿಸಿದ ಕಾಸುನ್ ರಜಿತ

ಏಜೆನ್ಸೀಸ್
Published 18 ಮೇ 2022, 13:58 IST
Last Updated 18 ಮೇ 2022, 13:58 IST
ಶತಕ ಗಳಿಸಿದ ನಂತರ ಸಂಭ್ರಮಿಸಿದ ಮುಷ್ಫಿಕುರ್ ರಹೀಮ್ –ಎಎಫ್‌ಪಿ ಚಿತ್ರ
ಶತಕ ಗಳಿಸಿದ ನಂತರ ಸಂಭ್ರಮಿಸಿದ ಮುಷ್ಫಿಕುರ್ ರಹೀಮ್ –ಎಎಫ್‌ಪಿ ಚಿತ್ರ   

ಚಿತ್ತಗಾಂಗ್‌: ಐದನೇ ಕ್ರಮಾಂಕದ ಬ್ಯಾಟರ್ ಮುಷ್ಫಿಕುರ್ ರಹೀಮ್ ಅವರ ಅಮೋಘ ಶತಕಮತ್ತು ಲಿಟನ್ ದಾಸ್ ಜೊತೆಗೂಡಿ ಅವರು ಸೇರಿಸಿದ 165 ರನ್‌ಗಳ ಬಲದಿಂದ ಬಾಂಗ್ಲಾದೇಶ ತಂಡ ಶ್ರೀಲಂಕಾ ಎದುರಿನ ಮೊದಲ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದೆ.

ಶ್ರೀಲಂಕಾದ ಮೊದಲ ಇನಿಂಗ್ಸ್ ಮೊತ್ತವಾದ 397 ರನ್‌ಗಳಿಗೆ ಉತ್ತರಿಸಿದ ಆತಿಥೇಯರು 465 ರನ್‌ ಗಳಿಸಿದರು. ಗಾಯಗೊಂಡಿದ್ದ ಕಾರಣ10ನೇ ಕ್ರಮಾಂಕದ ಬ್ಯಾಟರ್ ಷೊರಿಫುಲ್ ಇಸ್ಲಾಂ ಕ್ರೀಸ್‌ಗೆ ಇಳಿದಿರಲಿಲ್ಲ. 68 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಶ್ರೀಲಂಕಾ 4ನೇ ದಿನವಾದ ಬುಧವಾರದ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 39 ರನ್‌ ಗಳಿಸಿದೆ.

ಮಹಮ್ಮದುಲ್ ಹಸನ್ ಮತ್ತು ತಮೀಮ್ ಇಕ್ಬಾಲ್ ಅವರ 162 ರನ್‌ಗಳ ಮೊದಲ ವಿಕೆಟ್ ಜೊತೆಯಾಟದ ಮೂಲಕ ಉತ್ತಮ ಆರಂಭ ಕಂಡಿದ್ದ ಬಾಂಗ್ಲಾದೇಶ ನಂತರ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಮುಷ್ಫಿಕುರ್ ಮತ್ತು ಲಿಟನ್ ಆಸರೆಯಾದರು.

ADVERTISEMENT

ವೈಯಕ್ತಿಕ ಎಂಟನೇ ಶತಕ ಸಿಡಿಸಿದ ಮುಷ್ಫಿಕುರ್ ರಹೀಮ್ ಟೆಸ್ಟ್ ಕ್ರಿಕೆಟ್‌ನಲ್ಲಿ 5,000 ರನ್ ದಾಟಿದ ಬಾಂಗ್ಲಾದೇಶದ ಮೊದಲ ಬ್ಯಾಟರ್ ಎನಿಸಿಕೊಂಡರು. ನಾಲ್ಕು ಬೌಂಡರಿಗಳೊಂದಿಗೆ 282 ಎಸೆತಗಳಲ್ಲಿ 105 ರನ್ ಗಳಿಸಿದ ಅವರು ಲಸಿತ್ ಎಂಬುಲ್ದೇನಿಯ ಎಸೆತದಲ್ಲಿ ಬೌಲ್ಡ್ ಆಗಿ ಮರಳಿದರು. ಲಿಟನ್‌ 189 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 88 ರನ್ ಕಲೆ ಹಾಕಿದರು.

ಕಂಕಷನ್‌ಗೆ ಒಳಗಾಗಿರುವ ವಿಶ್ವ ಫರ್ನಾಂಡೊ ಬದಲಿಗೆ ಆಡುತ್ತಿರುವ ಕಾಸುನ್ ರಜಿತ 60ಕ್ಕೆ 4 ವಿಕೆಟ್ ಕಬಳಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಶ್ರೀಲಂಕಾ: 397; ಶ್ರೀಲಂಕಾ (ಮಂಗಳವಾರ 107 ಓವರ್‌ಗಳಲ್ಲಿ 3ಕ್ಕೆ 318): 170.1 ಓವರ್‌ಗಳಲ್ಲಿ 465 (ಮುಷ್ಫಿಕುರ್ ರಹೀಮ್ 105, ಲಿಟನ್ ದಾಸ್ 88, ಶಕೀಬ್ ಅಲ್ ಹಸನ್26, ತಮೀಮ್ ಇಕ್ಬಾಲ್ 20; ಅಸಿತ ಫರ್ನಾಂಡೊ 72ಕ್ಕೆ‌3, ಲಸಿತ್ ಎಂಬುಲ್ದೇನಿಯ 104ಕ್ಕೆ1, ಧನಂಜಯ ಡಿಸಿಲ್ವಾ 48ಕ್ಕೆ1, ಕಾಸುನ್ ರಜಿತ 60ಕ್ಕೆ4); ಎರಡನೇ ಇನಿಂಗ್ಸ್‌: ಶ್ರೀಲಂಕಾ: 17.1 ಓವರ್‌ಗಳಲ್ಲಿ 2ಕ್ಕೆ 39 (ಒಶಾಡ ಫರ್ನಾಂಡೊ 19, ದಿಮುತ್ ಕರುಣರತ್ನೆ ಔಟಾಗದೆ 18, ಲಸಿತ್ ಎಂಬುಲ್ದೇನಿಯ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.