ADVERTISEMENT

ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ತಮಿಳುನಾಡಿಗೆ ರಾಜಸ್ತಾನ್ ಸವಾಲು

ಸೆಮಿಫೈನಲ್‌ ಇಂದು

ಪಿಟಿಐ
Published 28 ಜನವರಿ 2021, 13:45 IST
Last Updated 28 ಜನವರಿ 2021, 13:45 IST
ಖಲೀಲ್ ಅಹಮದ್
ಖಲೀಲ್ ಅಹಮದ್   

ಅಹಮದಾಬಾದ್: ಫೆಬ್ರುವರಿ 18ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಫ್ರ್ಯಾಂಚೈಸಿಗಳ ಗಮನ ಸೆಳೆಯಲು ಯುವ ಆಟಗಾರರು ಸಿದ್ಧರಾಗಿದ್ದಾರೆ.

ಶುಕ್ರವಾರ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯ ನಾಲ್ಕರ ಘಟ್ಟವು ಈ ಕಾರಣಕ್ಕಾಗಿಯೇ ಹೆಚ್ಚು ಕುತೂಹಲ ಕೆರಳಿಸಿದೆ.

ಮೊದಲ ಪಂದ್ಯದಲ್ಲಿ ತಮಿಳುನಾಡು ಮತ್ತು ರಾಜಸ್ಥಾನ ತಂಡಗಳು ಮುಖಾಮುಖಿಯಾಗಲಿವೆ. ಎರಡನೇ ಪಂದ್ಯದಲ್ಲಿ ಬರೋಡಾ ಮತ್ತು ಪಂಜಾಬ್ ತಂಡಗಳು ಸೆಣಸಲಿವೆ.

ADVERTISEMENT

ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ತಮಿಳು ನಾಡು ತಂಡವು ಹಿಮಾಚಲಪ್ರದೇಶ ವಿರುದ್ಧ ಜಯಿಸಲು ಬಾಬಾ ಅಪರಾಜಿತ್ ಮತ್ತು ಶಾರೂಕ್ ಖಾನ್ ಅವರ ಅಬ್ಬರದ ಬ್ಯಾಟಿಂಗ್ ನೆರವಾಗಿತ್ತು. ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ನಾಯಕತ್ವದ ತಮಿಳುನಾಡು ತಂಡದ ಬೌಲಿಂಗ್ ವಿಭಾಗವೂ ಉತ್ತಮವಾಗಿದೆ. ಸಂದೀಪ್ ವರಿಯರ್ ಮತ್ತು ಸೋನು ಯಾದವ್ ಅವರು ತಂಡದ ಬೌಲಿಂಗ್‌ನ ಬೆನ್ನೆಲುಬಾಗಿದ್ದಾರೆ. ಸ್ಪಿನ್ನರ್ ಮುರುಗನ್ ಅಶ್ವಿನ್ ಕೂಡ ಉತ್ತಮವಾಗಿ ಆಡುತ್ತಿದ್ದಾರೆ.

ಅಶೋಕ್ ಮನೇರಿಯಾ ನಾಯಕತ್ವದ ರಾಜಸ್ಥಾನ ತಂಡವು ಎಂಟರ ಘಟ್ಟದಲ್ಲಿ ಬಿಹಾರ ವಿರುದ್ಧ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನವು ಮಹಿಪಾಲ್ ಲೊಮ್ರೋರ್ ಅವರ ಅರ್ಧಶತಕದ ಬಲದಿಂದ ಹೋರಾಟದ ಮೊತ್ತ ಪೇರಿಸಿತ್ತು. ಆದರೆ ಬಿಹಾರ ತಂಡದ ಎಲ್ಲ ವಿಕೆಟ್‌ಗಳನ್ನೂ ಕಬಳಿಸುವಲ್ಲಿ ರಾಜಸ್ಥಾನ ಬೌಲರ್‌ಗಳು ಸಫಲರಾಗಲಿಲ್ಲ. ಎಡಗೈ ಮಧ್ಯಮವೇಗಿ ಖಲೀಲ್ ಅಹಮದ್, ಆಕಾಶ್ ಸಿಂಗ್, ಅನಿಕೇತ್ ಅವರು ಫಾರ್ಮ್‌ಗೆ ಮರಳಿದರೆ ತಮಿಳುನಾಡು ತಂಡಕ್ಕೆ ಕಠಿಣ ಪೈಪೋಟಿ ಎದುರಾಗಬಹುದು.

ಪಂಜಾಬ್–ಬರೋಡಾ ಹಣಾಹಣಿ
ಕಳೆದ ಎರಡು ವರ್ಷಗಳ ಚಾಂಪಿಯನ್ ಕರ್ನಾಟಕ ತಂಡವನ್ನು ಎಂಟರ ಘಟ್ಟದಲ್ಲಿ ಸೋಲಿಸಿದ್ದ ಪಂಜಾಬ್ ತಂಡವು ಎರಡನೇ ಸೆಮಿಫೈನಲ್‌ನಲ್ಲಿ ಬರೋಡಾ ಎದುರು ಸೆಣಸಲಿದೆ.

ಮನದೀಪ್ ಸಿಂಗ್ ನಾಯಕತ್ವದ ತಂಡದ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಅಲ್ಲದೇ ಸಿದ್ಧಾರ್ಥ್ ಕೌಲ್, ಸಂದೀಪ್ ಶರ್ಮಾ ಅವರಿರುವ ಬೌಲಿಂಗ್ ಬಳಗವೂ ಉತ್ತಮವಾದ ಲಯದಲ್ಲಿದೆ. ಕರ್ನಾಟಕ ತಂಡವನ್ನು ಕೇವಲ 87 ರನ್‌ಗಳಿಗೆ ಪಂಜಾಬ್ ಪಡೆಯು ಕಟ್ಟಿಹಾಕಿತ್ತು.

ಬರೋಡಾ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿ ಹರಿಯಾಣದ ಸವಾಲನ್ನು ಮೆಟ್ಟಿ ನಿಂತು ನಾಲ್ಕರ ಘಟ್ಟ ಪ್ರವೇಶಿಸಿದೆ. ವಿಷ್ಣು ಸೋಳಂಕಿ ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಬರೋಡಾ ಈ ಸಾಧನೆ ಮಾಡಿತು. ಕೇದಾರ್ ದೇವಧರ್ ನಾಯಕತ್ವದ ತಂಡವು ಟೂರ್ನಿಯಲ್ಲಿ ಇದುವರೆಗೆ ಉತ್ತಮವಾಗಿ ಆಡಿದೆ. ಅದರಿಂದಾಗಿ ಸಿಂಗ್ ಬಳಗಕ್ಕೆ ದಿಟ್ಟ ಪೈಪೋಟಿ ನೀಡುವ ಸಾಧ್ಯತೆ ದಟ್ಟವಾಗಿದೆ.

ಪಂದ್ಯಗಳ ಆರಂಭ
ತಮಿಳುನಾಡು–ರಾಜಸ್ಥಾನ (ಮಧ್ಯಾಹ್ನ 12ರಿಂದ)
ಪಂಜಾಬ್–ಬರೋಡಾ (ರಾತ್ರಿ 7ರಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.