ಮೈಸೂರು: ಮೈಸೂರು ವಾರಿಯರ್ಸ್‌ನ ಶಿಖರ್ ಶೆಟ್ಟಿ (5ಕ್ಕೆ 3) ಹಾಗೂ ಕೆ.ಗೌತಮ್ (11ಕ್ಕೆ 2) ಸ್ಪಿನ್ ಮೋಡಿ ಎದುರು ಬೆಂಗಳೂರು ಬ್ಲಾಸ್ಟರ್ಸ್ ತಂಡ ಧೂಳೀಪಟವಾಯಿತು.
ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿ ಟ್ವೆಂಟಿ– 20 ಕ್ರಿಕೆಟ್ ಟೂರ್ನಿಯ ಸೋಮವಾರದ ಪಂದ್ಯದಲ್ಲಿ ಮೈಸೂರು 39 ರನ್‌ಗಳ ಭರ್ಜರಿ ಜಯ ದಾಖಲಿಸಿತು.
ಮಳೆ ಕಾಡಿದ್ದರಿಂದ 16 ಓವರ್‌ಗೆ ಸೀಮಿತವಾದ ಪಂದ್ಯದ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಮೈಸೂರು ತಂಡದ ಸಿ.ಎ.ಕಾರ್ತಿಕ್ (20) ಮತ್ತು ಎಸ್.ಯು.ಕಾರ್ತಿಕ್ ಉತ್ತಮ ಆರಂಭ ತಂದುಕೊಟ್ಟರು. 15 ಎಸೆತದಲ್ಲಿ ಮೊದಲ ವಿಕೆಟ್‌ಗೆ 32 ರನ್ ಸೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಇಬ್ಬರನ್ನೂ ಬೆಂಗಳೂರಿನ ವಿದ್ಯಾಧರ ಪಾಟೀಲ ಹಾಗೂ ಎಂ.ಜಿ.ನವೀನ್ ಔಟ್ ಮಾಡಿದರು. ನಂತರ ಬಂದ ಹರ್ಷಿಲ್ (13), ನಾಯಕ ಮನೀಷ್ ಪಾಂಡೆ (12) ಹಾಗೂ ಕೆ.ಎಸ್.ಲಂಕೇಶ್ (15) ತಂಡದ ಸ್ಕೋರ್ 100ರ ಗಡಿ ದಾಟಿಸಲು ತಿಣುಕಾಡಿದರು.
ಈ ವೇಳೆ ಕ್ರೀಸ್‌ಗಿಳಿದ ಆಲ್‌ರೌಂಡರ್ ಯಶೋವರ್ಧನ್ ಪರಂತಾಪ್ (39; 21 ಎಸೆತ 4x2, 6x2) ಬಿರುಸಿನ ಆಟವಾಡಿದರು. ಅವರಿಗೆ ಸುಮಿತ್ ಕುಮಾರ್ (ಔಟಾಗದೇ 12) ಬೆಂಬಲ ನೀಡಿದರು. 6ನೇ ವಿಕೆಟ್‌ಗೆ ಈ ಜೋಡಿ 22 ಎಸೆತದಲ್ಲಿ 43 ರನ್ ಸೇರಿಸಿತು. ಅದರಿಂದ ಆತಿಥೇಯ ತಂಡವು 7 ವಿಕೆಟ್‌ಗೆ 136 ರನ್ ಗಳಿಸಿ ಬೆಂಗಳೂರಿಗೆ ಸವಾಲಿನ ಗುರಿ ನೀಡಿತು.
ಸ್ಪಿನ್ ಮೋಡಿ: ವಾರಿಯರ್ಸ್‌ನ ಶಿಖರ್ ಶೆಟ್ಟಿ ಅವರ ಮೊದಲ ಓವರ್‌ನ 3ನೇ ಎಸೆತದಲ್ಲಿ ಎಲ್.ಆರ್.ಚೇತನ್ (0) ಹಾಗೂ ಕೆ.ಗೌತಮ್ ಅವರ 3ನೇ ಎಸೆತದಲ್ಲಿ ನಾಯಕ ಮಯಂಕ್ ಅಗರವಾಲ್ (1) ಮನೀಷ್ ಪಾಂಡೆಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು. ಇವರಿಬ್ಬರ ಸ್ಪಿನ್ ಸುಳಿಗೆ ಬೆಂಗಳೂರು ತಂಡವು ಸಿಲುಕಿತು. ವಿಕೆಟ್‌ಗಳು ಪಟಪಟನೆ ಉದುರಿದವು. 9 ಓವರ್‌ಗಳಲ್ಲಿ 33ಕ್ಕೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮಾಧವ್ ಪಿ.ಬಜಾಜ್ (34; 20 ಎಸೆತ 4x3, 6x2) ಅಲ್ಪ ಪ್ರತಿರೋಧ ತೋರಿದರು. ಅಲ್ಲಿಗಾಗಲೇ ಪಂದ್ಯವು ಕೈ ಜಾರಿತ್ತು.
ಸಂಕ್ಷಿಪ್ತ ಸ್ಕೋರ್: ಮೈಸೂರು ವಾರಿಯರ್ಸ್ 16 ಓವರ್‌ಗಳಲ್ಲಿ 7ಕ್ಕೆ 136 (ಯಶೋವರ್ಧನ್ ಪರಂತಾಪ್ 39, ಸಿ.ಎ.ಕಾರ್ತಿಕ್ 20. ಮೊಹಸಿನ್ ಖಾನ್ 10ಕ್ಕೆ 2, ವಿದ್ಯಾಧರ ಪಾಟೀಲ 32ಕ್ಕೆ 2). ಬೆಂಗಳೂರು ಬ್ಲಾಸ್ಟರ್ಸ್ 16 ಓವರ್‌ಗಳಲ್ಲಿ 9ಕ್ಕೆ 97 ( ಮಾಧವ್ ಪಿ.ಬಜಾಜ್ 34, ಶುಭಾಂಗ್ ಹೆಗ್ಡೆ 13. ಶಿಖರ್ ಶೆಟ್ಟಿ 5ಕ್ಕೆ 3, ಕೆ.ಗೌತಮ್ 11ಕ್ಕೆ 2) ಪಂದ್ಯದ ಆಟಗಾರ: ಶಿಖರ್ ಶೆಟ್ಟಿ
ಇಂದಿನ ಪಂದ್ಯಗಳು: ಬೆಂಗಳೂರು ಬ್ಲಾಸ್ಟರ್ಸ್ v/s ಹುಬ್ಬಳ್ಳಿ ಟೈಗರ್ಸ್. ಮಧ್ಯಾಹ್ನ 3.15
ಮೈಸೂರು ವಾರಿಯರ್ಸ್ v/s ಮಂಗಳೂರು ಡ್ರ್ಯಾಗನ್ಸ್. ಸಂಜೆ 7.15
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.