
ಅಡಿಲೇಡ್: ನೇಥನ್ ಲಯನ್ ಅವರ ಚುರುಕಾದ ದಾಳಿಯ ಬಲದಿಂದ ಆಸ್ಟ್ರೇಲಿಯಾ ತಂಡವು ಆ್ಯಷಸ್ ಟೆಸ್ಟ್ ಸರಣಿ ಜಯದ ಸನಿಹ ಬಂದು ನಿಂತಿದೆ.
ಇಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ 435 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ನಾಲ್ಕನೇ ದಿನದಾಟದ ಮುಕ್ತಾಯಕ್ಕೆ 63 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 207 ರನ್ ಗಳಿಸಿದೆ. ಪಂದ್ಯದ ಕೊನೆಯ ದಿನವಾದ ಭಾನುವಾರ ಜಯಗಳಿಸಲು ಇಂಗ್ಲೆಂಡ್‌ಗೆ 228 ರನ್‌ಗಳ ಅಗತ್ಯವಿದೆ. ಕ್ರೀಸ್‌ನಲ್ಲಿ ಜೆಮಿ ಸ್ಮಿತ್ (ಬ್ಯಾಟಿಂಗ್ 2) ಮತ್ತು ವಿಲ್ ಜ್ಯಾಕ್ಸ್ (ಬ್ಯಾಟಿಂಗ್ 11) ಇದ್ದಾರೆ. ಆತಿಥೇಯ ತಂಡವು ಐದು ಪಂದ್ಯಗಳ ಸರಣಿಯಲ್ಲಿ 2–0ಯಿಂದ ಮುಂದಿದೆ.
ಬೃಹತ್ ಮೊತ್ತವನ್ನು ಬೆನ್ನಟ್ಟಿ ಗೆದ್ದು ವಿಶ್ವದಾಖಲೆ ನಿರ್ಮಿಸುವ ಭರದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಬ್ಯಾಟರ್ ಜಾಕ್ ಕ್ರಾಲಿ (85; 151ಎ, 4X8) ಆತ್ಮವಿಶ್ವಾಸ ಮೂಡಿಸಿದ್ದರು. ಆದರೆ ಬೆನ್ ಡಕೆಟ್ ಹಾಗೂ ಒಲಿ ಪೋಪ್ ಬೇಗನೆ ನಿರ್ಗಮಿಸಿದರು. ಪ್ಯಾಟ್ ಕಮಿನ್ಸ್ ಅವರ ದಾಳಿಯಲ್ಲಿ ಇಬ್ಬರೂ ವಿಕೆಟ್ ಒಪ್ಪಿಸಿದರು.
ಜೋ ರೂಟ್ (39; 63ಎ, 4X5) ಅವರು ಕ್ರಾಲಿ ಜೊತೆಗೂಡಿ ಮೂರನೇ ವಿಕೆಟ್ ಜೊತೆಯಾಟದಲ್ಲಿ 78 ರನ್ ಸೇರಿಸಿದರು. ಈ ಜೊತೆಯಾಟವನ್ನೂ ರೂಟ್ ವಿಕೆಟ್ ಪಡೆದ ಕಮಿನ್ಸ್ ಮುರಿದರು.
ಇದರ ನಂತರವೂ ಕ್ರಾಲಿ ಅವರು ಹ್ಯಾರಿ ಬ್ರೂಕ್ ಜೊತೆಗೆ ಸೇರಿ ಇನಿಂಗ್ಸ್‌ಗೆ ಸ್ಥಿರತೆ ಒದಗಿಸಿದರು. 68 ರನ್ ಸೇರಿಸಿದರು.
ಆದರೆ ಸ್ಪಿನ್ ಮೋಡಿ ಮೆರೆದ ಲಯನ್ ಅವರು ಬ್ರೂಕ್ (30; 56ಎ), ಬೆನ್ ಸ್ಟೋಕ್ಸ್ (5 ರನ್) ಮತ್ತು ಶತಕದತ್ತ ದಾಪುಗಾಲಿಟ್ಟಿದ್ದ ಕ್ರಾಲಿ ಅವರ ವಿಕೆಟ್‌ಗಳನ್ನು ಕಬಳಿಸಿದರು. ಇದರಿಂದಾಗಿ ಇಂಗ್ಲೆಂಡ್ ತಂಡದ ಗೆಲುವಿನ ವಿಶ್ವಾಸ ಮಂಕಾಗಿದೆ.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 91.2 ಓವರ್‌ಗಳಲ್ಲಿ 371. ಇಂಗ್ಲೆಂಡ್: 87.2 ಓವರ್‌ಗಳಲ್ಲಿ 286. ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ: 84.4 ಓವರ್‌ಗಳಲ್ಲಿ 349 (ಅಲೆಕ್ಸ್ ಕ್ಯಾರಿ 72, ಬ್ರೈಡನ್ ಕಾರ್ಸ್ 80ಕ್ಕೆ3, ಜೋಶ್ ಇಂಗ್ಲಿಸ್ 70ಕ್ಕೆ4) ಇಂಗ್ಲೆಂಡ್: 63 ಓವರ್‌ಗಳಲ್ಲಿ 6ಕ್ಕೆ207 (ಜಾಕ್ ಕ್ರಾಲಿ 85, ಜೋ ರೂಟ್ 39, ಹ್ಯಾರಿ ಬ್ರೂಕ್ 30, ವಿಲ್ ಜ್ಯಾಕ್ಸ್ ಬ್ಯಾಟಿಂಗ್ 11, ಜೆಮಿ ಸ್ಮಿತ್ ಬ್ಯಾಟಿಂಗ್ 2, ಪ್ಯಾಟ್ ಕಮಿನ್ಸ್ 24ಕ್ಕೆ3, ನೇಥನ್ ಲಯನ್ 64ಕ್ಕೆ3)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.