ADVERTISEMENT

ಐರೀ ಅರ್ಧಶತಕ; ನೇಪಾಳಕ್ಕೆ ಮಣಿದ ಸ್ಕಾಟ್ಲೆಂಡ್‌

ಪಿಟಿಐ
Published 17 ಫೆಬ್ರುವರಿ 2026, 23:30 IST
Last Updated 17 ಫೆಬ್ರುವರಿ 2026, 23:30 IST
ದೀಪೇಂದ್ರ ಸಿಂಗ್‌ ಐರೀ ಎಎಫ್‌ಪಿ ಚಿತ್ರ
ದೀಪೇಂದ್ರ ಸಿಂಗ್‌ ಐರೀ ಎಎಫ್‌ಪಿ ಚಿತ್ರ   

ಮುಂಬೈ: ಆಲ್‌ರೌಂಡರ್‌ ದೀಪೇಂದ್ರ ಸಿಂಗ್‌ ಐರೀ ಅವರ ಮಿಂಚಿನ ಅರ್ಧಶತಕದ ಬಲದಿಂದ ನೇಪಾಳ ತಂಡವು ಸಿ ಗುಂಪಿನ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸ್ಕಾಟ್ಲೆಂಡ್‌ ತಂಡವನ್ನು ಮಣಿಸಿತು. ಅದರೊಂದಿಗೆ, 12 ವರ್ಷಗಳ ನಂತರ ಟಿ20 ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ನೇಪಾಳ ಫೀಲ್ಡಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ ಇಳಿದ ಸ್ಕಾಟ್ಲೆಂಡ್‌ ತಂಡಕ್ಕೆ ಆರಂಭಿಕ ಜೋಡಿ ಮೈಕೆಲ್ ಜೋನ್ಸ್ (71; 45ಎ, 4x8, 6x3) ಹಾಗೂ ಜಾರ್ಜ್ ಮುನ್ಸೆ (27, 29ಎ) ಉತ್ತಮ ಅಡಿಪಾಯ ಹಾಕಿಕೊಟ್ಟಿತು. ಮೊದಲ ವಿಕೆಟ್‌ ಜೊತೆಯಾಟದಲ್ಲಿ 80 ರನ್‌ ಪೇರಿಸಿತು.

ಮೂರನೇ ಕ್ರಮಾಂಕದಲ್ಲಿ ಬಂದ ಬ್ರಾಂಡನ್ ಮೆಕ್‌ಮುಲ್ಲೆನ್ (25) ಉಪಯುಕ್ತ ಕಾಣಿಕೆ ನೀಡಿದರು. ಇದರಿಂದಾಗಿ, ಸ್ಕಾಟ್ಲೆಂಡ್‌ ತಂಡವು 7 ವಿಕೆಟ್‌ಗೆ 170 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತು. ಬೌಲಿಂಗ್‌ನಲ್ಲಿ ಸೋಂಪಾಲ್ ಕಮಿ (25ಕ್ಕೆ3) ಹಾಗೂ ನಂದನ್‌ ಯಾದವ್‌ (34ಕ್ಕೆ2) ಪರಿಣಾಮಕಾರಿ ಎನಿಸಿದರು.

ADVERTISEMENT

ಗುರಿ ಬೆನ್ನಟ್ಟಿದ ನೇಪಾಳ ತಂಡದ ಕುಶಾಲ್‌ ಭುರ್ತೆಲ್‌ (43; 35ಎ) ಹಾಗೂ ಆಸೀಫ್‌ ಶೇಕ್‌ (33; 27ಎ) ಮೊದಲ ವಿಕೆಟ್‌ ಜೊತೆಯಾಟದಲ್ಲಿ 9.1 ಓವರ್‌ಗಳಲ್ಲಿ 74 ರನ್‌ ಸೇರಿಸಿದರು. ನಂತರ, ಐರೀ ಅವರು 23 ಎಸೆತಗಳಲ್ಲಿ 50 ರನ್‌ ಸಿಡಿಸಿ ತಂಡವನ್ನು ಗುರಿಮುಟ್ಟಿಸಿದರು. ಅವರ ಇನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ ಇದ್ದವು. ಅವರಿಗೆ, ಗುಲ್ಶನ್‌ ಝಾ (ಔಟಾಗದೇ 24; 17ಎ) ಜೊತೆ ನೀಡಿದರು. ನೇಪಾಳ ತಂಡವು 19.2 ಓವರ್‌ಗಳಲ್ಲಿ 3 ವಿಕೆಟ್‌ಗೆ 171 ರನ್‌ ಗಳಿಸಿ, ಗೆಲುವಿನೊಂದಿಗೆ ವಿಶ್ವಕಪ್‌ ಅಭಿಯಾನವನ್ನು ಮುಗಿಸಿತು.

ಎರಡೂ ತಂಡಗಳು ಸೂಪರ್ 8ರ ಸ್ಪರ್ಧೆಯಿಂದ ಈಗಾಗಲೇ ಹೊರಬಿದ್ದಿವೆ. ಹೀಗಾಗಿ, ಈ ಪಂದ್ಯ ಹೆಚ್ಚಿನ ಮಹತ್ವ ಪಡೆದಿಲ್ಲ. ಈ ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆದಿರುವ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಸೂಪರ್‌ 8ಕ್ಕೆ ಪ್ರವೇಶಿಸಿವೆ.

ನೇಪಾಳ ತಂಡವು 2014ರ ಟಿ20 ವಿಶ್ವಕಪ್‌ ಟೂರ್ನಿಯ ಗುಂಪು ಹಂತದಲ್ಲಿ ಅಫ್ಗಾನಿಸ್ತಾನ ಹಾಗೂ ನೆದರ್ಲೆಂಡ್ಸ್‌ ತಂಡಗಳನ್ನು ಸೋಲಿಸಿತ್ತು. 

ಸಂಕ್ಷಿಪ್ತ ಸ್ಕೋರು: ಸ್ಕಾಟ್ಲೆಂಡ್‌: 7 ವಿಕೆಟ್‌ಗೆ 170 (ಜಾರ್ಜ್ ಮುನ್ಸೆ 27, ಮೈಕೆಲ್ ಜೋನ್ಸ್ 71, ಬ್ರಾಂಡನ್ ಮೆಕ್‌ಮುಲ್ಲೆನ್ 25; ಸೋಂಪಾಲ್ ಕಮಿ 25ಕ್ಕೆ3, ನಂದನ್‌ ಯಾದವ್‌ 34ಕ್ಕೆ2) ನೇಪಾಳ: 19.2 ಓವರ್‌ಗಳಲ್ಲಿ 3 ವಿಕೆಟ್‌ಗೆ 171 (ಕುಶಾಲ್‌ ಭುರ್ತೆಲ್‌ 43, ಆಸೀಫ್‌ ಶೇಕ್‌ 33, ದೀಪೇಂದ್ರ ಸಿಂಗ್‌ ಐರೀ ಔಟಾಗದೇ 50; ಮೈಕೆಲ್‌ ಲೀಸ್ಕ್‌ 30ಕ್ಕೆ3). ಪಂದ್ಯದ ಆಟಗಾರ: ದೀಪೇಂದ್ರ ಸಿಂಗ್‌ ಐರೀ.

ಮೈಕೆಲ್ ಜೋನ್ಸ್ –ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.