ADVERTISEMENT

‘ಪಿತೃವಿಯೋಗದ ನೋವಿನಲ್ಲಿ ಅರಳಿದ ಪ್ರತಿಭೆ ಮೊಹಮ್ಮದ್ ಸಿರಾಜ್’

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 15:26 IST
Last Updated 18 ಆಗಸ್ಟ್ 2021, 15:26 IST
ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್   

ನವದೆಹಲಿ: ಹೋದ ನವೆಂಬರ್‌ ತಿಂಗಳಿನಲ್ಲಿ ಆಸ್ಟ್ರೇಲಿಯಾದ ಆ ಹೋಟೆಲ್‌ನಲ್ಲಿ ಕಟ್ಟುನಿಟ್ಟಾದ ‘ಗೃಹಬಂಧನ’ದಲ್ಲಿದ್ದಾಗಲೇ ಬಂದಪ್ಪಳಿಸಿದ ಪಿತೃವಿಯೋಗದ ಸಂಗತಿ ಆ ಹುಡುಗನ ಮನಸ್ಸನ್ನು ಜರ್ಜರಿತಗೊಳಿಸಿತ್ತು. ಮನದುಂಬಿ ಅತ್ತುಬಿಡಬೇಕೆಂದರೆ ಗೆಳೆಯರ ಭುಜದಾಸರೆಯೂ ಸಿಗದಂತಹ ಆ ವಾತಾವರಣದಲ್ಲಿಯೇ ಛಲದಂಕಮಲ್ಲನಾಗಿ ಅರಳಿದ ಆ ಹುಡುಗನೇ ಮೊಹಮ್ಮದ್ ಸಿರಾಜ್.

ಕೋವಿಡ್ ಕಾಲಘಟ್ಟದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಭಾರತವು ಐತಿಹಾಸಿಕ ಜಯ ಸಾಧಿಸುವಲ್ಲಿ ಹೈದರಾಬಾದ್ ಮಧ್ಯಮವೇಗಿ ಸಿರಾಜ್ ಮಹತ್ವದ ಪಾತ್ರ ವಹಿಸಿದ್ದರು. ಆ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸಿರಾಜ್ ಅವರ ನಂತರದ ಜೀವನವೇ ಯಶೋಗಾಥೆಯಾಗಿ ಮಾರ್ಪಟ್ಟಿದೆ. ಎರಡು ದಿನಗಳ ಹಿಂದೆ ಲಾರ್ಡ್ಸ್‌ನಲ್ಲಿಯೂ ಇಂಗ್ಲೆಂಡ್‌ ತಂಡಕ್ಕೆ ಸಿಂಹಸ್ವಪ್ನರಾದರು.

ಅವರ ಯಶೋಗಾಥೆಯು ‘ಮಿಷನ್ ಡಾಮಿನೇಷನ್: ಯಾನ್ ಅನ್‌ಫಿನಿಷ್ಡ್‌ ಕ್ವೆಸ್ಟ್‌’ ಪುಸ್ತಕದಲ್ಲಿ ದಾಖಲಾಗಿದೆ. ಕ್ರೀಡಾ ಬರಹಗಾರ ಬೊರಿಯಾ ಮುಜುಂದಾರ್ ಮತ್ತು ಕುಶಾನ್ ಸರ್ಕಾರ್ ಈ ಪುಸ್ತಕವನ್ನು ಬರೆದಿದ್ದಾರೆ.

ADVERTISEMENT

‘ಆಸ್ಟ್ರೇಲಿಯಾದಲ್ಲಿ ಸಿರಾಜ್ 14 ದಿನಗಳ ಕಡ್ಡಾಯ ಕ್ವಾರಂಟೈನ್‌ನಲ್ಲಿದ್ದಾಗ ಅವರ ತಂದೆ ಹೈದರಾಬಾದ್‌ನಲ್ಲಿ ಹೃದಯಸ್ತಂಭನದಿಂದ ನಿಧನರಾಗಿದ್ದರು. ಸಿರಾಜ್ ಟೆಸ್ಟ್ ಆಡಬೇಕೆಂಬುದು ಅಪ್ಪನ ಕನಸಾಗಿತ್ತು. ತಂಡವನ್ನು ಬಿಟ್ಟು ತವರಿಗೆ ಮರಳುವುದೋ, ಅಲ್ಲಿಯೇ ಇದ್ದು ಸರಣಿಯಲ್ಲಿ ಆಡುವುದೋ ಎಂಬ ಗೊಂದಲದಲ್ಲಿತ್ತು. ಪ್ರತಿಯೊಬ್ಬ ಆಟಗಾರನಿಗೂ ಪ್ರತ್ಯೇಕ ಕೋಣೆಯಿತ್ತು. ಸಹ ಆಟಗಾರರು ಸಿರಾಜ್ ಬಳಿ ತೆರಳಿ ಸಂತೈಸುವ ಅವಕಾಶವೂ ಅಲ್ಲಿ ಇರಲಿಲ್ಲ. ಪ್ರತಿಯೊಂದು ಕೋಣೆಗೂ ಪೊಲೀಸ್ ಕಾವಲು ಇತ್ತು.ಪಕ್ಕದ ಕೋಣೆಯಲ್ಲಿದ್ದವರೆಲ್ಲರೂ ವಿಡಿಯೊ ಕಾಲ್‌ ಮೂಲಕವೇ ಸಂತೈಸುತ್ತಿದ್ದರು. ಎಲ್ಲರ ಕೋಣೆಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಹೋಗುವ ಅವಕಾಶ ಫಿಸಿಯೊಗೆ ಮಾತ್ರ ಇತ್ತು. ಫಿಸಿಯೊ ನಿತಿನ್ ಪಟೇಲ್ ಈ ಅವಕಾಶವನ್ನು ಬಳಸಿಕೊಂಡು ಸಿರಾಜ್‌ ಬಳಿ ಹೋಗಿ ಸಂತೈಸುತ್ತಿದ್ದರು. ಕುಸಿದುಹೋಗಿದ್ದ ಹುಡುಗನಲ್ಲಿ ಧೈರ್ಯ ತುಂಬುತ್ತಿದ್ದರು’ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

‘ಗಟ್ಟಿ ಮನೋಬಲದೊಂದಿಗೆ ಕಣಕ್ಕಿಳಿದ ಹೈದರಾಬಾದ್ ಹುಡುಗ ಇಡೀ ದೇಶದ ಕಣ್ಮಣಿಯಾದರು. ಇದು ಎಲ್ಲರಿಗೂ ಪ್ರೇರಣಾದಾಯಕ ಕತೆ’ ಎಂದು ಲೇಖಕರು ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.