ADVERTISEMENT

ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ಪಾಕ್‌ಗೆ ಮತ್ತೆ ಮುಖಭಂಗ; 91ಕ್ಕೆ ಆಲೌಟ್, ಸೋಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮಾರ್ಚ್ 2025, 8:56 IST
Last Updated 16 ಮಾರ್ಚ್ 2025, 8:56 IST
<div class="paragraphs"><p>ನ್ಯೂಜಿಲೆಂಡ್ vs ಪಾಕಿಸ್ತಾನ</p></div>

ನ್ಯೂಜಿಲೆಂಡ್ vs ಪಾಕಿಸ್ತಾನ

   

(X@TheRealPCB)

ಕ್ರೈಸ್ಟ್‌ಚರ್ಚ್: ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ಪಾಕಿಸ್ತಾನ ಮತ್ತೆ ಮುಖಭಂಗಕ್ಕೊಳಗಾಗಿದೆ. ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಒಂಬತ್ತು ವಿಕೆಟ್ ಅಂತರದ ಹೀನಾಯ ಸೋಲು ಕಂಡಿದೆ.

ADVERTISEMENT

ಕ್ರೈಸ್ಟ್‌ಚರ್ಚ್‌ನಲ್ಲಿ ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ 18.4 ಓವರ್‌ಗಳಲ್ಲಿ 91 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ನ್ಯೂಜಿಲೆಂಡ್‌ನ ಪರ ನಿಖರ ದಾಳಿ ಸಂಘಟಿಸಿದ ಜೇಕಬ್ ಡಫಿ ನಾಲ್ಕು ಹಾಗೂ ಕೈಲ್ ಜೇಮಿಸನ್ ಮೂರು ವಿಕೆಟ್ ಗಳಿಸಿ ಮಿಂಚಿದರು.

ನಂತರ ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 10.1 ಓವರ್‌ಗಳಲ್ಲೇ ಗುರಿ ತಲುಪಿತು. ಆರಂಭಿಕರಾದ ಟಿಮ್ ಸೀಫರ್ಟ್ (44) ಹಾಗೂ ಫಿನ್ ಅಲೆನ್ (29*) ಮೊದಲ ವಿಕೆಟ್‌ಗೆ 5.5 ಓವರ್‌ಗಳಲ್ಲೇ 53 ರನ್‌ಗಳ ಜೊತೆಯಾಟ ಕಟ್ಟಿ ತಂಡದ ಗೆಲುವನ್ನು ಸುಲಭಗೊಳಿಸಿದರು. ಟಿಮ್ ರಾಬಿನ್ಸನ್ ಅಜೇಯ 18 ರನ್ ಗಳಿಸಿದರು.

ಆ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಈ ಮೊದಲು ಪಾಕಿಸ್ತಾನದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಆರಂಭಿಕರಾದ ಮೊಹಮ್ಮದ್ ಹ್ಯಾರಿಸ್ ಹಾಗೂ ಹಸನ್ ನವಾಜ್ ಖಾತೆ ತೆರೆಯುವಲ್ಲಿ ವಿಫಲರಾದರು.

ನಾಯಕ ಸಲ್ಮಾನ್ ಆಘಾ 18 ರನ್ನಿಗೆ ಔಟ್ ಆದರು. ಇರ್ಫಾನ್ ಖಾನ್ (1) ಹಾಗೂ ಶದಾಬ್ ಖಾನ್ (3) ಸಹ ನಿರಾಸೆ ಮೂಡಿಸಿದರು. ಖುಷ್‌ದಿಲ್ ಗರಿಷ್ಠ 32 ರನ್ ಗಳಿಸಿದರು.

ಇತ್ತೀಚೆಗೆ ಪಾಕಿಸ್ತಾನ ಆತಿಥ್ಯದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿಥೇಯ ತಂಡ ಗುಂಪು ಹಂತದಲ್ಲೇ ನಿರ್ಗಮಿಸಿತ್ತು.

ಈ ಸರಣಿಯಲ್ಲಿ ಪಾಕಿಸ್ತಾನ ಹೊಸಮುಖಗಳಿಗೆ ಅವಕಾಶ ನೀಡಿದೆ. ಮತ್ತೊಂದೆಡೆ ನ್ಯೂಜಿಲೆಂಡ್ ಸಹ ಪ್ರಮುಖ ಆಟಗಾರರಿಗೆ ವಿಶ್ರಾಂತಿ ಸೂಚಿಸಿದೆ.

ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತದ ವಿರುದ್ಧ ಸೋಲು ಕಂಡಿದ್ದ ನ್ಯೂಜಿಲೆಂಡ್ ರನ್ನರ್-ಅಪ್ ಎನಿಸಿಕೊಂಡಿತ್ತು.

ಸಂಕ್ಷಿಪ್ತ ಸ್ಕೋರು:

ಪಾಕಿಸ್ತಾನ: 18.4 ಓವರ್‌ಗಳಲ್ಲಿ 91 (ಸಲ್ಮಾನ್ ಆಘಾ 18, ಖುಷ್‌ದಿಲ್ ಖಾನ್ 32, ಜಹಾಂದಾದ್ ಖಾನ್ 17, ಕೈಲ್ ಜೆಮಿಸನ್ 8ಕ್ಕೆ3, ಜೇಕಬ್ ಡಫಿ 14ಕ್ಕೆ4, ಈಶ್ ಸೋಧಿ 27ಕ್ಕೆ2)

ನ್ಯೂಜಿಲೆಂಡ್: 10.1 ಓವರ್‌ಗಳಲ್ಲಿ 1 ವಿಕೆಟ್‌ಗೆ 92 (ಟಿಮ್ ಸೀಫರ್ಟ್ 44, ಫಿನ್ ಅಲೆನ್ 29, ಟಿಮ್ ರಾಬಿನ್ಸನ್ ಔಟಾಗದೇ 18, ಅಬ್ರಾರ್ ಅಹಮದ್ 15ಕ್ಕೆ1) ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 9 ವಿಕೆಟ್‌ಗಳ ಜಯ ಹಾಗೂ ಸರಣಿಯಲ್ಲಿ 1–0 ಮುನ್ನಡೆ.  ಪಂದ್ಯಶ್ರೇಷ್ಠ: ಕೈಲ್ ಜೆಮಿಸನ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.