
ಪಲೆಕೆಲೆ: ಶನಿವಾರ ಇಲ್ಲಿ ಸುರಿದ ಮಳೆಯು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳಿಗೆ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಾದಿಯನ್ನು ಜಟಿಲಗೊಳಿಸಿತು.
ಇಲ್ಲಿ ನಡೆಯಲಿದ್ದ ಸೂಪರ್ 8 ಹಂತದ ಎರಡನೇ ಗುಂಪಿನ ಮೊದಲ ಪಂದ್ಯವು ಮಳೆಯಲ್ಲಿ ಕೊಚ್ಚಿಹೋಯಿತು. ಇದರಿಂದಾಗಿ ಉಭಯ ತಂಡಗಳೂ ತಲಾ ಒಂದು ಅಂಕ ಹಂಚಿಕೊಂಡಿವೆ. 7 ಗಂಟೆಯ ಸುಮಾರು ಮಳೆ ಕಡಿಮೆಯಾಗಿದ್ದ ಕಾರಣ ಟಾಸ್ ಮಾಡಲಾಯಿತು. ಅದರಲ್ಲಿ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹನ್ನೊಂದರ ಬಳಗವನ್ನು ಪ್ರಕಟಿಸಿತ್ತು.
ಕಿವೀಸ್ ಮತ್ತು ಪಾಕ್ ತಂಡಗಳಿಗೆ ಗುಂಪಿನಲ್ಲಿ ತಲಾ ಎರಡು ಪಂದ್ಯಗಳನ್ನು ಆಡಬೇಕಿದ್ದು, ಅದರಲ್ಲಿ ಯಾವುದಾದರೂ ಹಣಾಹಣಿಯು ಮಳೆಯಿಂದಾಗಿ ರದ್ದಾದರೆ ತಂಡದ ನಿರ್ಗಮನ ಖಚಿತ. ಯಾಕೆಂದರೆ; ಶ್ರೀಲಂಕಾದ ಪ್ರಸ್ತುತ ಹವಾಮಾನ ಮುನ್ಸೂಚನೆಯ ವರದಿಗಳ ಪ್ರಕಾರ ಮುಂಬರುವ ದಿನಗಳಲ್ಲಿ ಮಳೆ ಸುರಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಪಾಕ್ ತಂಡವು 24ರಂದು ಇಂಗ್ಲೆಂಡ್ ಮತ್ತು ಕಿವೀಸ್ ಬಳಗವು 25ರಂದು ಕೊಲಂಬೊದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿವೆ.
ಒಂದೊಮ್ಮೆ ಪಾಕ್ ಅಥವಾ ನ್ಯೂಜಿಲೆಂಡ್ ತಂಡಗಳು ತಮ್ಮ ಪಾಲಿನಲ್ಲಿ ಉಳಿದಿರುವ ಇನ್ನೆರಡು ಪಂದ್ಯಗಳಲ್ಲಿ ಒಂದರಲ್ಲಿ ಸೋತರೂ ಸೆಮಿಫೈನಲ್ ಅವಕಾಶ ಕೈತಪ್ಪುವ ಸಾಧ್ಯತೆ ಇದೆ. ಅದರಿಂದಾಗಿ ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲ್ಲಬೇಕಾದ ಒತ್ತಡವೂ ಇದೆ.
ಇದೇ ಗುಂಪಿನಲ್ಲಿರುವ ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಬೇಕಿದೆ. ಈ ಪೈಕಿ ಎರಡೂ ತಂಡಗಳ ನಡುವಣ ಮೊದಲ ಪಂದ್ಯವು ಭಾನುವಾರ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.