ನಿಕೋಲಸ್ ಪೂರನ್
ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್‌ನ ಆಕರ್ಷಕ ಬ್ಯಾಟರ್ ನಿಕೋಲಸ್ ಪೂರನ್ ಮಂಗಳವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದರು. 29 ವರ್ಷ ಆಟಗಾರನ ನಿರ್ಧಾರ ಕ್ರಿಕೆಟ್ ವಲಯಗಳಲ್ಲಿ ಆಘಾತ ಮೂಡಿಸಿದೆ.
ಈ ನಿರ್ಧಾರಕ್ಕೆ ಅವರು ನಿರ್ದಿಷ್ಟ ಕಾರಣ ತಿಳಿಸಿಲ್ಲ. ಆದರೆ ಸಾಕಷ್ಟು ಯೋಚಿಸಿ ನಿರ್ಧಾರಕ್ಕೆ ಬಂದಿರುವುದಾಗಿ ಎಡಗೈ ಆಟಗಾರ ತಿಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಅವರು ಇತ್ತೀಚೆಗೆ ಟಿ20 ಸರಣಿಯಿಂದ ಹಿಂದೆಸರಿದಿದ್ದರು. ಟ್ರಿನಿಡಾಡಿನ ಈ ಆಟಗಾರ ವೆಸ್ಟ್ ಇಂಡೀಸ್ ಪರ ಅತಿ ಹೆಚ್ಚು, 106 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅತಿ ಹೆಚ್ಚು ರನ್ (2,275) ಗಳಿಸಿದ ಶ್ರೇಯವೂ ಅವರದಾಗಿದೆ.
2016ರಲ್ಲಿ ಅವರು ಟಿ20 ಪಂದ್ಯ ಆಡುವ ಮೂಲಕ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 61 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಸೀಮಿತ ಓವರುಗಳ ತಂಡಕ್ಕೆ ನಾಯಕರೂ ಆಗಿದ್ದರು. ಆದರೆ ಅವರು ಒಂದೂ ಟೆಸ್ಟ್ ಆಡಿಲ್ಲ.
‘ಕಡುಗೆಂಪು ಬಣ್ಣದ ಜರ್ಸಿ ಧರಿಸಿ ರಾಷ್ಟ್ರಗೀತೆಗೆ ನಿಲ್ಲುವುದು, ಫೀಲ್ಡ್‌ನಲ್ಲಿದ್ದಾಗ ನನ್ನಲ್ಲಿರುವ ಎಲ್ಲ ಆಟ ನೀಡುವುದು.... ಇದನ್ನೆಲ್ಲಾ ಪದಗಳಲ್ಲಿ ಹಿಡಿದಿಡುವುದು ಕಷ್ಟ. ತಂಡದ ನಾಯಕತ್ವ ವಹಿಸಿವುದು ಗೌರವದ ವಿಷಯ. ಇದು ನನ್ನ ಹೃದಯಕ್ಕೆ ಹತ್ತಿರವಾದುದು’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕವಾಗಿ ಬರೆದಿದ್ದಾರೆ.
2024ರಲ್ಲಿ ಅವರು ಅತಿ ಹೆಚ್ಚು ಸಿಕ್ಸರ್ (170) ಬಾರಿಸಿದ್ದರು. 2025ರ ಐಪಿಎಲ್ ಲಖನೌ ಸೂಪರ್ ಜೈಂಟ್ಸ್ ಪರ 196.25ರ ಸ್ಟ್ರೈಕ್‌ರೇಟ್‌ನಲ್ಲಿ 524 ರನ್ ಬಾರಿಸಿದ್ದರು. ಇದರಲ್ಲಿ ಐದು ಅರ್ಧ ಶತಕಗಳಿದ್ದವು.
ಅವರು 2023ರ ವಿಶ್ವಕಪ್ ಅರ್ಹತಾ ಸುತ್ತಿನಿಂದ ವೆಸ್ಟ್ ಇಂಡೀಸ್ ಹೊರಬಿದ್ದ ನಂತರ ಅವರು ಏಕದಿನ ತಂಡದಲ್ಲಿ ಆಡಿರಲಿಲ್ಲ. ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಕಿಂಗ್ಸ್‌ಟೌನ್‌ನಲ್ಲಿ ಕೊನೆಯ ಬಾರಿ ವೆಸ್ಟ್ ಇಂಡೀಸ್ ತಂಡವನ್ನು (ಟಿ20 ಸರಣಿ) ಪ್ರತಿನಿಧಿಸಿದ್ದರು.
ಕೆರೀಬಿಯನ್ ಕ್ರಿಕೆಟ್‌ಗೆ ಪೂರನ್ ಸಲ್ಲಿಸಿದ್ದ ಕಾಣಿಕೆಯನ್ನು ಕ್ರಿಕೆಟ್ ವೆಸ್ಟ್ ಇಂಡೀಸ್ ಕೊಂಡಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.