ADVERTISEMENT

IPL 2022: ಗುಜರಾತ್ ಯಶಸ್ಸಿನ ಗುಟ್ಟು ಬಯಲು ಮಾಡಿದ ಹಾರ್ದಿಕ್ ಪಾಂಡ್ಯ

ಪಿಟಿಐ
Published 1 ಮೇ 2022, 10:49 IST
Last Updated 1 ಮೇ 2022, 10:49 IST
ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ   

ಮುಂಬೈ: ತಂಡದಲ್ಲಿ ಮೇಲು-ಕೀಳು ಭಾವನೆ ಇಲ್ಲ. ಎಲ್ಲ ಆಟಗಾರರು ಸಮಾನರು ಎಂದು ಗುಜರಾತ್ ಟೈಟನ್ಸ್ ಯಶಸ್ಸಿನ ಗುಟ್ಟನ್ನು ನಾಯಕ ಹಾರ್ದಿಕ್ ಪಾಂಡ್ಯ ಬಯಲು ಮಾಡಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿರುವ ಗುಜರಾತ್, ಆಡಿರುವ ಒಂಬತ್ತು ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದು ಒಟ್ಟು 16 ಅಂಕ ಸಂಪಾದಿಸಿದ್ದು, ಅಗ್ರಸ್ಥಾನ ಕಾಯ್ದುಕೊಂಡಿದೆ.

ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಹಾರ್ದಿಕ್ ನಾಯಕತ್ವವು ಹೆಚ್ಚಿನ ಗಮನ ಸೆಳೆದಿದೆ. ಆದರೆ ತಂಡದ ಯಶಸ್ಸಿನ ಶ್ರೇಯಸ್ಸಿಗೆ ಎಲ್ಲ ಆಟಗಾರರು ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.

'ಓರ್ವ ಆಟಗಾರನಾಗಿ, ನಾನೊಬ್ಬನೇ ಬೆಳೆಯಲು ಇಷ್ಟಪಡುವುದಿಲ್ಲ ಎಂಬುದನ್ನು ಖಾತ್ರಿಪಡಿಸುತ್ತೇನೆ. ನನ್ನ ತಂಡದ ಸಹ ಆಟಗಾರರೊಂದಿಗೆ ಬೆಳೆಯಲು ಇಷ್ಟಪಡುತ್ತೇನೆ. ಅದೇ ನಮ್ಮ ಯಶಸ್ಸಿಗೂ ಕಾರಣ. ನಾನು ನಾಯಕನಾಗಿರಬಹುದು. ಆದರೆ ಮೇಲು-ಕೀಳು ಭಾವನೆ ಇಲ್ಲ. ನಾವೆಲ್ಲರೂ ಒಂದೇ ಹಾದಿಯಲ್ಲಿದ್ದೇವೆ. ಎಲ್ಲರೂ ಒಬ್ಬರನ್ನೊಬ್ಬರು ಬೆಂಬಲಿಸುತ್ತಾರೆ' ಎಂದು ತಿಳಿಸಿದ್ದಾರೆ.

'ಹೌದು, ನಿಸ್ಸಂಶಯವಾಗಿಯೂ ಹೊಸ ಅವಕಾಶವನ್ನು ಎಲ್ಲರೂ ಆನಂದಿಸುತ್ತಿದ್ದಾರೆ. ಅತ್ಯುತ್ತಮ ಆಟಗಾರರ ಪಡೆಯೇ ಇದೆ. ಫಲಿತಾಂಶವು ನಮ್ಮ ಪರವಾಗಿರುವುದರಿಂದ ಇದಕ್ಕಿಂತಲೂ ಉತ್ತಮ ಆರಂಭವನ್ನು ಬಯಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಆರ್‌ಸಿಬಿ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲೂ ಗುಜರಾತ್ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ರಾಹುಲ್ ತೆವಾಟಿಯಾ ಹಾಗೂ ಡೇವಿಡ್ ಮಿಲ್ಲರ್ ಗೆಲುವಿನ ಜೊತೆಯಾಟ ಕಟ್ಟಿದ್ದರು.

ಈ ಮೂಲಕ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಐದು ಪಂದ್ಯಗಳಲ್ಲಿ ಗುಜರಾತ್ ತಂಡವು ಕೊನೆಯ ಓವರ್‌ನಲ್ಲಿ ಗೆಲುವು ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.