ADVERTISEMENT

ಐಪಿಎಲ್‌ನಲ್ಲಿ ಆಡುವವರೆಗೂ ಆರ್‌ಸಿಬಿ ತೊರೆಯೊಲ್ಲ: ವಿರಾಟ್‌ ಕೊಹ್ಲಿ

ಡಿವಿಲಿಯರ್ಸ್‌ ಜೊತೆಗಿನ ಇನ್‌ಸ್ಟಾಗ್ರಾಮ್‌ ಸಂವಾದ

ಪಿಟಿಐ
Published 25 ಏಪ್ರಿಲ್ 2020, 19:30 IST
Last Updated 25 ಏಪ್ರಿಲ್ 2020, 19:30 IST
ಎಬಿ ಡಿವಿಲಿಯರ್ಸ್‌ (ಎಡ) ಹಾಗೂ ವಿರಾಟ್‌ ಕೊಹ್ಲಿ 
ಎಬಿ ಡಿವಿಲಿಯರ್ಸ್‌ (ಎಡ) ಹಾಗೂ ವಿರಾಟ್‌ ಕೊಹ್ಲಿ    

ನವದೆಹಲಿ: ‘ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಎಲ್ಲಿಯವರೆಗೂ ಆಡುತ್ತೇನೊ ಅಷ್ಟೂ ಕಾಲ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದಲ್ಲೇ ಇರುತ್ತೇನೆ. ಆರ್‌ಸಿಬಿ ತೊರೆಯುವ ಆಲೋಚನೆ ನನ್ನಲ್ಲಿ ಒಮ್ಮೆಯೂ ಮೂಡಿಲ್ಲ’ ಎಂದು ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಜೊತೆಗೆ ಶುಕ್ರವಾರ ರಾತ್ರಿ ನಡೆದ ಇನ್‌ಸ್ಟಾಗ್ರಾಮ್‌ ಸಂವಾದದಲ್ಲಿ ವಿರಾಟ್‌, ಹಲವು ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

‘2008ರಿಂದಲೂ ತಂಡದೊಂದಿಗೆ ಇದ್ದೇನೆ. ಈ ಪಯಣ ಅಮೋಘವಾದುದು. ಐಪಿಎಲ್‌ನಲ್ಲಿ ಪ್ರಶಸ್ತಿ ಗೆಲ್ಲುವುದು ನಮ್ಮೆಲ್ಲರ ಕನಸು. ಇದನ್ನು ಬೆನ್ನಟ್ಟಿ ಹೋಗೋಣ. ಆರ್‌ಸಿಬಿ ಸೋಲಲಿ ಅಥವಾ ಗೆಲ್ಲಲಿ. ಅಭಿಮಾನಿಗಳ ಪ್ರೋತ್ಸಾಹ ಕಿಂಚಿತ್ತೂ ಕಡಿಮೆಯಾಗಿಲ್ಲ. ಅವರ ಪ್ರೀತಿ ಕಂಡು ಮೂಕ ವಿಸ್ಮಿತನಾಗಿದ್ದೇನೆ’ ಎಂದು ಕೊಹ್ಲಿ‌ ಹೇಳಿದ್ದಾರೆ.

ADVERTISEMENT

ಕೋವಿಡ್‌ ಬಿಕ್ಕಟ್ಟು ಉಲ್ಬಣಿಸಿರುವ ಕಾರಣ ಐಪಿಎಲ್‌ 13ನೇ ಆವೃತ್ತಿಯ ಭವಿಷ್ಯ ಡೋಲಾಯಮಾನವಾಗಿದೆ. ಈ ಬಾರಿಯ ಲೀಗ್‌ ನಡೆಯಲಿದೆ ಎಂದು ವಿರಾಟ್‌ ಭರವಸೆ ವ್ಯಕ್ತಪಡಿಸಿದ್ದಾರೆ.

‘ಈ ಬಾರಿಯ ಐಪಿಎಲ್‌ ಯಾವಾಗ ನಡೆಯುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗಂತ ಪಂದ್ಯಗಳನ್ನು ಆಡುವ ಆಸೆಯನ್ನು ಕೈಬಿಟ್ಟಿಲ್ಲ’ ಎಂದಿದ್ದಾರೆ.

‘ಗ್ಯಾರಿ ಕರ್ಸ್ಟನ್‌ ಪ್ರತಿ ಬಾರಿಯೂ ಹೊಸ ಹೊಸ ಕೌಶಲಗಳನ್ನು ಕಲಿಸಿ ನನ್ನ ಆಟದ ಗುಣಮಟ್ಟ ಹೆಚ್ಚಿಸಲು ನೆರವಾಗಿದ್ದಾರೆ. ಶಾರ್ಟ್‌ ಬಾಲ್‌ಗಳ ಎದುರು ಹೇಗೆ ಆಡಬೇಕು ಎಂಬುದನ್ನು ಮಾರ್ಕ್‌ ಬೌಷರ್‌ ಹೇಳಿಕೊಟ್ಟಿದ್ದಾರೆ. ಡಂಕನ್‌ ಫ್ಲೆಚರ್ ಸೇರಿದಂತೆ ಅನೇಕರ ಸಲಹೆ ಹಾಗೂ ಮಾರ್ಗದರ್ಶನದಿಂದಲೇ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ’ ಎಂದು ಕೊಹ್ಲಿ, ಎಲ್ಲರ ಸಹಕಾರವನ್ನು ಸ್ಮರಿಸಿದ್ದಾರೆ.

‘ನಾನು ಕೂಡಾ ಬೆಂಗಳೂರಿನ ಅಭಿಮಾನಿಗಳ ಪ್ರೀತಿಗೆ ಮಾರು ಹೋಗಿದ್ದೇನೆ. ಆರ್‌ಸಿಬಿ ತಂಡವನ್ನು ಬಿಡಲು ನನಗೂ ಮನಸ್ಸಿಲ್ಲ. ಆದರೆ ಅವಕಾಶ ಸಿಕ್ಕಾಗಲೆಲ್ಲಾ ಹೆಚ್ಚು ರನ್‌ ಗಳಿಸಲು ಪ್ರಯತ್ನಿಸಬೇಕು’ ಎಂದು ಡಿವಿಲಿಯರ್ಸ್‌ ನುಡಿದಿದ್ದಾರೆ.

ದಕ್ಷಿಣ ಆಫ್ರಿಕಾದ ಎಬಿಡಿ, ಹಿಂದಿನ ಒಂಬತ್ತು ವರ್ಷಗಳಿಂದ ಬೆಂಗಳೂರಿನ ತಂಡದ ಪರ ಆಡುತ್ತಿದ್ದಾರೆ.

‘2015ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತದ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಐದನೇ ಪಂದ್ಯದಲ್ಲಿ 61 ಎಸೆತಗಳಲ್ಲಿ 119ರನ್‌ಗಳನ್ನು ಗಳಿಸಿದ್ದೆ. ಆ ಪಂದ್ಯವನ್ನು ಜಯಿಸಿ ನಾವು (ದಕ್ಷಿಣ ಆಫ್ರಿಕಾ ತಂಡ) 3–2ರಿಂದ ಸರಣಿ ಕೈವಶ ಮಾಡಿಕೊಂಡಿದ್ದೆವು. ಹೀಗಾಗಿ ಆ ಇನಿಂಗ್ಸ್‌ ನನ್ನ ಪಾಲಿಗೆ ಸ್ಮರಣೀಯವಾದುದು’ ಎಂದು ಡಿವಿಲಿಯರ್ಸ್‌ ಹೇಳಿದ್ದಾರೆ.

ಕೊಹ್ಲಿ ಮತ್ತು ಎಬಿಡಿ,ಭಾರತ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರನ್ನು ಒಳಗೊಂಡ ಏಕದಿನ ತಂಡವನ್ನು ಆಯ್ಕೆ ಮಾಡಿದ್ದಾರೆ.

ತಂಡ ಇಂತಿದೆ: ಸಚಿನ್‌ ತೆಂಡೂಲ್ಕರ್‌, ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ, ಎಬಿ ಡಿವಿಲಿಯರ್ಸ್‌, ಜಾಕ್‌ ಕಾಲಿಸ್‌, ಮಹೇಂದ್ರ ಸಿಂಗ್‌ ಧೋನಿ (ನಾಯಕ), ಯುವರಾಜ್‌ ಸಿಂಗ್‌, ಯಜುವೇಂದ್ರ ಚಾಹಲ್‌, ಡೇಲ್‌ ಸ್ಟೇಯ್ನ್‌, ಜಸ್‌ಪ್ರೀತ್‌ ಬೂಮ್ರಾ ಹಾಗೂ ಕಗಿಸೊ ರಬಾಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.