ADVERTISEMENT

NZ vs ENG: ವಿದಾಯ ಟೆಸ್ಟ್ ಪಂದ್ಯದಲ್ಲಿ ಗೇಲ್ ದಾಖಲೆ ಸರಿಗಟ್ಟಿದ ಟಿಮ್ ಸೌಥಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಡಿಸೆಂಬರ್ 2024, 10:21 IST
Last Updated 14 ಡಿಸೆಂಬರ್ 2024, 10:21 IST
<div class="paragraphs"><p>ಟಿಮ್ ಸೌಥಿ</p></div>

ಟಿಮ್ ಸೌಥಿ

   

(ರಾಯಿಟರ್ಸ್ ಸಂಗ್ರಹ ಚಿತ್ರ)

ಹ್ಯಾಮಿಲ್ಟನ್: ಟೆಸ್ಟ್ ವೃತ್ತಿ ಜೀವನದ ಅಂತಿಮ ಪಂದ್ಯ ಆಡುತ್ತಿರುವ ನ್ಯೂಜಿಲೆಂಡ್‌ನ ಆಟಗಾರ ಟಿಮ್ ಸೌಥಿ, ವೆಸ್ಟ್‌ಇಂಡೀಸ್‌ನ ದಿಗ್ಗಜ ಕ್ರಿಸ್ ಗೇಲ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ADVERTISEMENT

ಹ್ಯಾಮಿಲ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಸೌಥಿ ಮೂರು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 98 ಸಿಕ್ಸರ್‌ಗಳನ್ನು ಗಳಿಸಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಬ್ಯಾಟರ್‌ಗಳ ಪೈಕಿ ಗೇಲ್ ಜತೆ ಜಂಟಿ ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಈಗಾಗಲೇ ವಿದಾಯ ಘೋಷಿಸಿರುವ ಟಿಮ್ ಸೌಥಿ ಕೇವಲ 10 ಎಸೆತಗಳಲ್ಲಿ 23 ರನ್ ಗಳಿಸಿ ಗಮನ ಸೆಳೆದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿ:

ಬೆನ್ ಸ್ಟೋಕ್ಸ್: 133

ಬ್ರೆಂಡನ್ ಮೆಕಲಮ್: 107

ಆ್ಯಡಂ ಗಿಲ್‌ಕ್ರಿಸ್ಟ್: 100

ಟಿಮ್ ಸೌಥಿ: 98

ಕ್ರಿಸ್ ಗೇಲ್: 98

ಸೌಥಿ ವಿದಾಯ...

ನ್ಯೂಜಿಲೆಂಡ್‌ನ ಆಲ್‌ರೌಂಡರ್ 36 ವರ್ಷದ ಟಿಮ್ ಸೌಥಿ, ಕೊನೆಯ ಟೆಸ್ಟ್ ಪಂದ್ಯ ಆಡುತ್ತಿದ್ದಾರೆ. ಕುಟುಂಬ ಸಮೇತ ಮೈದಾನಕ್ಕೆ ಆಗಮಿಸಿದ ಸೌಥಿಗೆ ಆಟಗಾರರು 'ಗಾರ್ಡ್ ಆಫ್ ಹಾನರ್' ನೀಡಿದರು.

ಈವರೆಗೆ 107 ಟೆಸ್ಟ್ ಪಂದ್ಯಗಳಲ್ಲಿ 389 ವಿಕೆಟ್ ಹಾಗೂ 2,243 ರನ್ ಗಳಿಸಿದ್ದಾರೆ. 64ಕ್ಕೆ 7 ವಿಕೆಟ್ ಗಳಿಸಿರುವುದು ಜೀವನಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ. ಹಾಗೆಯೇ ಏಳು ಅರ್ಧಶತಕಗಳನ್ನು ಗಳಿಸಿದ್ದಾರೆ.

ನ್ಯೂಜಿಲೆಂಡ್ 315/9

ಮೊದಲ ದಿನದಂತ್ಯಕ್ಕೆ ನ್ಯೂಜಿಲೆಂಡ್ ಒಂಬತ್ತು ವಿಕೆಟ್ ನಷ್ಟಕ್ಕೆ 315 ರನ್ ಗಳಿಸಿದೆ. ನಾಯಕ ಟಾಮ್ ಲೇಥಮ್ 63, ವಿಲ್ ಯಂಗ್ 42, ಕೇನ್ ವಿಲಿಯಮ್ಸನ್ 44 ಮತ್ತು ಮಿಚೆಲ್ ಸ್ಯಾಂಟ್ನರ್ ಅಜೇಯ 50 ರನ್ ಗಳಿಸಿದರು. ಇಂಗ್ಲೆಂಡ್ ಪರ ಮ್ಯಾಥ್ಯೂ ಪಾಟ್ಸ್ ಮತ್ತು ಗಸ್ ಅಟ್ಕಿನ್ಸನ್ ತಲಾ ಮೂರು ವಿಕೆಟ್ ಗಳಿಸಿದರು.

ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಇಂಗ್ಲೆಂಡ್ 2-0ರ ಅಂತರದಲ್ಲಿ ವಶಪಡಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಎಂಟು ವಿಕೆಟ್ ಮತ್ತು ಎರಡನೇ ಪಂದ್ಯದಲ್ಲಿ 332 ರನ್ ಅಂತರದ ಜಯ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.