(ಜೋ ರೂಟ್)
(ಚಿತ್ರ ಕೃಪೆ: X@englandcricket)
ವೆಲ್ಲಿಂಗ್ಟನ್: ಇಂಗ್ಲೆಂಡ್‌ನ ಅನುಭವಿ ಬ್ಯಾಟರ್ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 36ನೇ ಶತಕದ ಸಾಧನೆ ಮಾಡಿದ್ದಾರೆ. ಆ ಮೂಲಕ ಭಾರತದ ದಿಗ್ಗಜ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿರುವ ಸಾರ್ವಕಾಲಿಕ ಪಟ್ಟಿಯಲ್ಲಿ ಅಗ್ರ ಐದರ ಪಟ್ಟಿಗೆ ಲಗ್ಗೆ ಇಟ್ಟಿದ್ದಾರೆ.
151ನೇ ಟೆಸ್ಟ್ ಪಂದ್ಯದಲ್ಲಿ (276 ಇನಿಂಗ್ಸ್) ರೂಟ್, 36ನೇ ಟೆಸ್ಟ್ ಶತಕ ಗಳಿಸಿದ್ದಾರೆ. ಒಟ್ಟಾರೆಯಾಗಿ 50.93ರ ಸರಾಸರಿಯಲ್ಲಿ 12,886 ರನ್ ಗಳಿಸಿದ್ದಾರೆ.
ರಾಹುಲ್ ದ್ರಾವಿಡ್ 164 ಟೆಸ್ಟ್ ಪಂದ್ಯಗಳಲ್ಲಿ 52.31ರ ಸರಾಸರಿಯಲ್ಲಿ 13,288 ರನ್ ಗಳಿಸಿದ್ದರು.
ನ್ಯೂಜಿಲೆಂಡ್ ನೆಲದಲ್ಲಿ ಇಂಗ್ಲೆಂಡ್‌ಗೆ ಸ್ಮರಣೀಯ ಸರಣಿ ಗೆಲುವು...
ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 323 ರನ್ ಅಂತರದ ಬೃಹತ್ ಗೆಲುವು ದಾಖಲಿಸಿದೆ.
ಮೊದಲ ಇನಿಂಗ್ಸ್‌ನಲ್ಲಿ 157 ರನ್‌ಗಳ ಮುನ್ನಡೆ ಪಡೆದಿದ್ದ ಪ್ರವಾಸಿ ತಂಡವು ಎರಡನೇ ಇನಿಂಗ್ಸ್‌ನಲ್ಲಿ ರೂಟ್, ಬೆನ್ ಡಕೆಟ್ (92;112ಎ) ಮತ್ತು ಜೇಕಬ್ ಬೆಥೆಲ್ (96;118) ಅವರ ಬ್ಯಾಟಿಂಗ್ ನೆರವಿನಿಂದ 82.3 ಓವರ್‌ಗಳಲ್ಲಿ 6 ವಿಕೆಟ್‌ಗೆ 427 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಗೆಲುವಿಗೆ 583 ರನ್‌ಗಳ ಕಠಿಣ ಗುರಿಯನ್ನು ಪಡೆದ ಆತಿಥೇಯ ತಂಡವು 54.2 ಓವರ್‌ಗಳಲ್ಲಿ 259 ರನ್ ಗಳಿಸಿ ಹೋರಾಟ ಮುಗಿಸಿತು. ಕಿವೀಸ್ ಪರ ವಿಕೆಟ್ ಕೀಪರ್ ಟಾಮ್ ಬ್ಲಂಡೆಲ್ (115;102ಎ, 4x13, 6x5) ಏಕಾಂಗಿ ಹೋರಾಟ ನಡೆಸಿದರೂ ಗೆಲುವಿಗೆ ಸಾಕಾಗಲಿಲ್ಲ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೂರು ವಿಕೆಟ್ ಪಡೆದು ಮಿಂಚಿದರು.
ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0ರ ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.
ಅಲ್ಲದೆ 2008ರ ಬಳಿಕ ನ್ಯೂಜಿಲೆಂಡ್ ನೆಲದಲ್ಲಿ ಸ್ಮರಣೀಯ ಟೆಸ್ಟ್ ಸರಣಿ ಗೆಲುವಿನ ಸಿಹಿ ಅನುಭವಿಸಿದೆ. 2008ರಲ್ಲಿ ನ್ಯೂಜಿಲೆಂಡ್ ವಿರುದ್ಧ 2-1ರ ಅಂತರದ ಜಯ ಗಳಿಸಿತ್ತು.
ಮತ್ತೊಂದೆಡೆ ತವರಿನಲ್ಲಿ ನ್ಯೂಜಿಲೆಂಡ್ ಸತತ ನಾಲ್ಕು ಪಂದ್ಯಗಳ ಸೋಲಿನ ಮುಖಭಂಗಕ್ಕೊಳಗಾಗಿದೆ.
ಇದೇ ಪಂದ್ಯದಲ್ಲಿ ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಶತಕ (123) ಗಳಿಸಿದ್ದರೆ ಗಸ್ ಅಟ್ಕಿನ್ಸನ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು.
ಸಂಕ್ಷಿಪ್ತ ಸ್ಕೋರ್ ಪಟ್ಟಿ:
ಇಂಗ್ಲೆಂಡ್ ಮೊದಲ ಇನಿಂಗ್ಸ್: 280ಕ್ಕೆ ಆಲೌಟ್ (ಹ್ಯಾರಿ ಬ್ರೂಕ್ 123, ನೇಥನ್ ಸ್ಮಿತ್ 86/4)
ನ್ಯೂಜಿಲೆಂಡ್ ಮೊದಲ ಇನಿಂಗ್ಸ್: 125ಕ್ಕೆ ಆಲೌಟ್ (ಕೇನ್ ವಿಲಿಯಮ್ಸನ್ 37, ಅಟ್ಕಿನ್ಸನ್ 31/4)
ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್: 427/6 ಡಿಕ್ಲೇರ್ (ಜೋ ಹೂತ್ 106, ಟಿಮ್ ಸೌಥಿ 72/2)
ನ್ಯೂಜಿಲೆಂಡ್ ದ್ವಿತೀಯ ಇನಿಂಗ್ಸ್: 259ಕ್ಕೆ ಆಲೌಟ್ (ಟಾಮ್ ಬ್ಲಂಡೆಲ್ 115, ಬೆನ್ ಸ್ಟೋಕ್ಸ್ 5/3)
ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಸಾಧಕರು:
ಸಚಿನ್ ತೆಂಡೂಲ್ಕರ್: 51
ಜಾಕ್ ಕಾಲಿಸ್: 45
ರಿಕಿ ಪಾಂಟಿಂಗ್: 41
ಕುಮಾರ ಸಂಗಕ್ಕರ: 38
ಜೋ ರೂಟ್: 36
ರಾಹುಲ್ ದ್ರಾವಿಡ್: 36
ಸರಣಿಯ ಕೊನೆಯ ಟೆಸ್ಟ್ ಪಂದ್ಯ ಹ್ಯಾಮಿಲ್ಟನ್‌ನಲ್ಲಿ ಶನಿವಾರ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.