
ಪಂದ್ಯದ ಬಳಿಕ ಪರಸ್ಪರ ಅಭಿನಂದಿಸಿದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡದ ಆಟಗಾರ್ತಿಯರು
ಕೃಪೆ: ಪಿಟಿಐ
ಬೆಂಗಳೂರು: ತವರಿನಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಈ ಬಾರಿ ಚಾಂಪಿಯನ್ ಪಟ್ಟಕ್ಕೇರುವ ಕನಸು ಕಂಡಿರುವ ಭಾರತ ತಂಡಕ್ಕೆ, ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಮೂರು ವಿಕೆಟ್ ಅಂತರದ ಸೋಲು ಎದುರಾಗಿದೆ.
ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ, 49.5 ಓವರ್‌ಗಳಲ್ಲಿ 251 ರನ್ ಕಲೆಹಾಕಿ ಆಲೌಟ್ ಆಯಿತು. ಕೇವಲ 102 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ರಿಚಾ ಘೋಷ್ (94) ಮತ್ತು ಸ್ನೇಹ ರಾಣಾ (33 ರನ್) ಕೊನೇ ಹಂತದಲ್ಲಿ ಚೇತರಿಕೆ ನೀಡಿದರು. ಹೀಗಾಗಿ, ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಯಿತು.
ಈ ಗುರಿ ಬೆನ್ನತ್ತಿದ್ದ ಆಫ್ರಿಕಾ ತಂಡವೂ ಆರಂಭಿಕ ಆಘಾತಕ್ಕೆ ಒಳಗಾಯಿತು. ಇನಿಂಗ್ಸ್ ಆರಂಭಿಸಿದ ನಾಯಕಿ ಲಾರಾ ವೊಲ್ವಾರ್ಟ್ (70 ರನ್) ಹೊರತುಪಡಿಸಿ ಅಗ್ರಕ್ರಮಾಂಕದ ಯಾರೊಬ್ಬರೂ ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. ತಂಡದ ಗಳಿಕೆ 81 ರನ್ ಗಳಿಸುವಷ್ಟರಲ್ಲೇ ಪ್ರಮುಖ ಐದು ವಿಕೆಟ್‌ಗಳು ಉರುಳಿದ್ದವು. 35.5 ಓವರ್‌ಗಳಲ್ಲಿ ಮೊತ್ತ 142ಕ್ಕೆ ತಲುಪುವಷ್ಟರಲ್ಲಿ ಲಾರಾ ಕೂಡ ಪೆವಿಲಿಯನ್ ಸೇರಿಕೊಂಡರು.
ಗೆಲ್ಲಲು 85 ಎಸೆತಗಳಲ್ಲಿ ಉಳಿದ ನಾಲ್ಕು ವಿಕೆಟ್‌ಗಳಿಂದ ಇನ್ನೂ 110 ರನ್ ಬೇಕಿತ್ತು. ಹೀಗಾಗಿ, ಹರ್ಮನ್‌ಪ್ರೀತ್ ಕೌರ್ ಬಳಗ ಸುಲಭ ಜಯದ ನಿರೀಕ್ಷೆಯಲ್ಲಿತ್ತು. ಅದನ್ನು, ನದೀನ್ ಡಿ ಕ್ಲರ್ಕ್ (ಅಜೇಯ 89 ರನ್) ಮತ್ತು ಕ್ಲೊಯೆ ಟ್ರಯಾನ್ (49 ರನ್) ತಲೆಕೆಳಗಾಗಿಸಿದರು. ಈ ಜೋಡಿ, 7ನೇ ವಿಕೆಟ್‌ಗೆ 69 ರನ್ ಸೇರಿಸಿತು.
ಟ್ರಯಾನ್ ಔಟಾದ ನಂತರವೂ ಗುಡುಗಿದ ಕ್ಲರ್ಕ್, ಅಯೊಬಂಗಾ ಖಾಕಾ ಜೊತೆಗೂಡಿ ಮುರಿಯದ 8ನೇ ವಿಕೆಟ್ ಪಾಲುದಾರಿಕೆಯಲ್ಲಿ 41 ರನ್ ಕೂಡಿಸಿ ಭಾರತದ ಕೈಯಿಂದ ಜಯ ಕಸಿದುಕೊಂಡರು. ಇದರಲ್ಲಿ, ಖಾಕಾ ಗಳಿಕೆ ಕೇವಲ 1 ರನ್!
ಜಯದ ಹಾದಿಯಲ್ಲಿದ್ದಾಗ ಎದುರಾದ ಸೋಲು ಟೀಂ ಇಂಡಿಯಾಗೆ ಆಘಾತ ನೀಡಿದೆ.
ರೌಂಡ್ ರಾಬಿನ್ ಮಾದರಿಯ ಗುಂಪು ಹಂತದಲ್ಲಿ ಮೂರು ಪಂದ್ಯ ಆಡಿರುವ ಭಾರತ ಎರಡು ಜಯ ಹಾಗೂ ಒಂದು ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಲಾ ಎರಡು ಜಯ ಸಾಧಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ. ದಕ್ಷಿಣ ಆಫ್ರಿಕಾ ನಾಲ್ಕರಲ್ಲಿದೆ.
2011ರಲ್ಲೂ ಆಫ್ರಿಕಾ ಎದುರು ಸೋಲು...
2011ರಲ್ಲಿ ತವರಿನಲ್ಲಿ ನಡೆದ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯ ಹಂತದ ಪಂದ್ಯದಲ್ಲೂ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸಿತ್ತು. ಉಭಯ ತಂಡಗಳು 'ಬಿ' ಗುಂಪಿನಲ್ಲಿ ಆಡಿದ್ದವು.
ವಿಶೇಷವೆಂದರೆ, ಆ ಪಂದ್ಯದಲ್ಲಿಯೂ ಮೂರು ವಿಕೆಟ್ ಅಂತರದ ಸೋಲು ಎದುರಾಗಿತ್ತು. ಬಳಿಕ ಚೇತರಿಕೆಯ ಆಟವಾಡಿದ್ದ ಮಹೇಂದ್ರ ಸಿಂಗ್ ಧೋನಿ ಪಡೆ, ಚಾಂಪಿಯನ್‌ಪಟ್ಟಕ್ಕೇರಿತ್ತು.
ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಅವರು, 2011ರ ಸೋಲನ್ನು ಉಲ್ಲೇಖಿಸಿ ಟ್ವೀಟ್ ಮಾಡುವ ಮೂಲಕ ಮಹಿಳಾ ತಂಡಕ್ಕೆ ಸ್ಫೂರ್ತಿ ತುಂಬಿದ್ದಾರೆ.
'ಕಠಿಣವಾದ ಸೋಲು ಎದುರಾಗಿದೆ. ಆದರೆ, ಧೈರ್ಯ ಕಳೆದುಕೊಳ್ಳದಿರಿ. 2011ರಲ್ಲಿ ತವರಿನಲ್ಲಿ ಕಪ್ ಎತ್ತಿಹಿಡಿದ ಭಾರತ ತಂಡವೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿತ್ತು. ಒಂದು ಸೋಲು, ಇಡೀ ಪ್ರಯಾಣ ಹೇಗಿರುತ್ತದೆ ಎಂಬುದನ್ನು ಹೇಳುವುದಿಲ್ಲ. ನಂಬಿಕೆ ಇಡಿ, ಹೋರಾಟ ಮುಂದುವರಿಸಿ' ಎಂದು ಹರ್ಮನ್ ಪಡೆಗೆ ಸಲಹೆ ನೀಡಿದ್ದಾರೆ. ಹಾಗೆಯೇ, ದಕ್ಷಿಣ ಆಫ್ರಿಕಾ ಉತ್ತಮ ಪ್ರದರ್ಶನ ನೀಡಿತು. ನದೀನ್ ಡಿ ಕ್ಲರ್ಕ್ ಅಸಾಧಾರಣ ಆಟವಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.