ADVERTISEMENT

ಏಕದಿನ ವಿಶ್ವಕಪ್–2019 | ಸೆಮಿಫೈನಲ್‌ನಲ್ಲಿ ಸೋತು ಭಾರತ ಹೊರಬಿದ್ದದ್ದು ಇದೇ ದಿನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜುಲೈ 2020, 11:34 IST
Last Updated 10 ಜುಲೈ 2020, 11:34 IST
ಸೆಮಿಫೈನಲ್‌ ಪಂದ್ಯದಲ್ಲಿ ಮಹೇಂದ್ರ ಧೋನಿ ರನೌಟ್‌ ಆದ ಸಂದರ್ಭ
ಸೆಮಿಫೈನಲ್‌ ಪಂದ್ಯದಲ್ಲಿ ಮಹೇಂದ್ರ ಧೋನಿ ರನೌಟ್‌ ಆದ ಸಂದರ್ಭ   

ಸರಿಯಾಗಿ ಒಂದು ವರ್ಷದ ಹಿಂದೆ (ಜುಲೈ 10 2019ರಂದ)ಭಾರತ ಕ್ರಿಕೆಟ್‌ ತಂಡವು 2019ರ ಏಕದಿನ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋತು ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿತ್ತು.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದಿದ್ದ ಕಿವೀಸ್‌ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 239 ರನ್‌ ಗಳಿಸಿತ್ತು. ಹೆನ್ರಿ ನಿಕೋಲಸ್‌ ಜೊತೆಗೆ ಇನಿಂಗ್ಸ್‌ ಆರಂಭಿಸಿದ್ದ ಮಾರ್ಟಿನ್‌ ಗಪ್ಟಿಲ್‌ ಕೇವಲ 1 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು.

ಬಳಿಕ ಕ್ರೀಸ್‌ಗಿಳಿದ ನಾಯಕ ಕೇನ್‌ ವಿಲಿಯಮ್ಸನ್ ಕೋಲಸ್‌ ಜೊತೆಗೂಡಿಎರಡನೇ ವಿಕೆಟ್‌ಗೆ 68ರನ್‌ ಸೇರಿಸಿ ಚೇತರಿಕೆ ನೀಡಿದರು. ನಂತರ ಬಂದ ಅನುಭವಿ ರಾಸ್‌ ಟೇಲರ್‌ (74) ಅರ್ಧಶತಕ ಸಿಡಿಸಿ ನೆರವಾದರು. ವಿಲಿಯಮ್ಸನ್‌(67) ಹಾಗೂ ಟೇಲರ್‌ ಗಳಿಸಿದ ಅರ್ಧಶತಕಗಳ ಬಲದಿಂದ ಕಿವೀಸ್‌ ಪಡೆ ಸಾಧಾರಣ ಮೊತ್ತ ಗಳಿಸಿತ್ತು.

ADVERTISEMENT

ವೇಗಿ ಭುವನೇಶ್ವರ್‌ ಕುಮಾರ್‌ ಮೂರು ವಿಕೆಟ್‌ ಪಡೆದು ಮಿಂಚಿದರೆ, ಅವರಿಗೆ ಉತ್ತಮ ಬೆಂಬಲ ನೀಡಿದ ಜಸ್‌ಪ್ರೀತ್‌ ಬೂಮ್ರಾ, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಯಜುವೇಂದ್ರ ಚಾಹಲ್‌ ತಲಾ ಒಂದು ವಿಕೆಟ್ ಹಂಚಿಕೊಂಡಿದ್ದರು.

ಭಾರತಕ್ಕೆ ಆರಂಭಿಕ ಆಘಾತ
240 ರನ್‌ಗಳ ಗುರಿ ಬೆನ್ನತ್ತಿದ ಭಾರತ ಕೇವಲ 24 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆರಂಭಿಕರಾದ ಕೆ.ಎಲ್‌.ರಾಹುಲ್‌, ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ತಲಾ ಒಂದೊಂದು ರನ್‌ ಗಳಿಸಿ ನಿರಾಸೆ ಮೂಡಿಸಿದ್ದರು. ದಿನೇಶ್‌ ಕಾರ್ತಿಕ್‌ 6 ರನ್‌ಗಳಿಸಿ ನಿರ್ಗಮಿಸಿದ್ದರು.

ಭರವಸೆ ಮೂಡಿಸಿದ ಧೋನಿ–ಜಡೇಜಾ
ಅಲ್ಪಮೊತ್ತಕ್ಕೆ ಕುಸಿಯುವ ಆತಂಕದಲ್ಲಿದ್ದ ಭಾರತದ ವಿಕೆಟ್‌ ಪತನಕ್ಕೆ ಯುವ ಆಟಗಾರ ರಿಷಭ್‌ ಪಂತ್‌ ಹಾಗೂ ಹಾರ್ದಿಕ್‌ ಪಾಂಡ್ಯ ತಡೆಯೊಡ್ಡಿದ್ದರು. ತಾಳ್ಮೆಯಿಂದ ಆಡಿದ ಈ ಇಬ್ಬರೂ ಐದನೇ ವಿಕೆಟ್‌ ಜೊತೆಯಾಟದಲ್ಲಿ47 ರನ್‌ ಗಳಿಸಿ ಅಲ್ಪ ಚೇತರಿಕೆ ನೀಡಿದ್ದರು. ಆದರೆ, ಪಾಂಡ್ಯ ಹಾಗೂ ಪಂತ್‌ ತಲಾ 32 ರನ್‌ ಗಳಿಸಿ ಒಬ್ಬರ ಹಿಂದೆ ಒಬ್ಬರುವಿಕೆಟ್‌ ಒಪ್ಪಿಸಿದಾಗ ತಂಡದ ಮೊತ್ತ 92ಕ್ಕೆ 6.

ಈ ವೇಳೆ ಜೊತೆಯಾದ ಮಾಜಿ ನಾಯಕ ಎಂಎಸ್‌ ಧೋನಿ ಹಾಗೂ ಆಲ್ರೌಂಡರ್‌ ರವೀಂದ್ರ ಜಡೇಜಾ ಟೀಂ ಇಂಡಿಯಾ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. 7ನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಈ ಜೋಡಿ ಕೇನ್‌ ಪಡೆಗೆ ನಡುಕ ಹುಟ್ಟಿಸಿತ್ತು.

ಆದರೆ, ತಂಡದ ಮೊತ್ತ 208 ಆಗಿದ್ದಾಗ ಜಡೇಜಾ 7ನೇ ವಿಕೆಟ್‌ ರೂಪದಲ್ಲಿ ವಿಕೆಟ್‌ ಒಪ್ಪಿಸಿದ್ದರು. ಗೆಲುವಿಗೆ ಕೇವಲ 24ರನ್‌ ಬೇಕಿದ್ದಾಗ ಧೋನಿ ರನೌಟ್‌ ಆದರು. ಜಡೇಜಾ ಕೇವಲ 59 ಎಸೆತಗಳಲ್ಲಿ 77 ರನ್‌ ಭಾರಿಸಿದರೆ,ಧೋನಿ 72 ಎಸೆತಗಳಲ್ಲಿ 50 ರನ್‌ ಗಳಿಸಿದ್ದರು. ಮಹತ್ವದ ಘಟ್ಟದಲ್ಲಿ ಪ್ರಮುಖ ಎರಡು ವಿಕೆಟ್‌ ಕಳೆದುಕೊಂಡದ್ದು ಕೊಹ್ಲಿ ಪಡೆಗೆ ದುಬಾರಿಯಾಯಿತು.ಇದರೊಂದಿಗೆ ಭಾರತದ ಗೆಲುವಿನ ಆಸೆಯೂ ಕಮರಿತು.

ಅಂತಿಮವಾಗಿ 49.3 ಓವರ್‌ಗಳಲ್ಲಿ 221 ರನ್‌ ಗಳಿಸಿದ ಭಾರತ, ಕೇವಲ 18 ರನ್‌ ಅಂತರದಿಂದ ಸೋಲೊಪ್ಪಿಕೊಂಡಿತು.

ಭಾರತವನ್ನು ಮಣಿಸಿ ಸತತ ಎರಡನೇ ಬಾರಿಗೆ ಫೈನಲ್‌ ತಲುಪಿದ ಕಿವೀಸ್‌ ಮತ್ತೊಮ್ಮೆ ಎಡವಿತು. ಫೈನಲ್‌ನಲ್ಲಿ ಗೆಲುವಿನ ನಗೆ ಬೀರಿದಇಂಗ್ಲೆಂಡ್‌, ಮೊದಲ ಸಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.