ಆಸ್ಟ್ರೇಲಿಯಾ ತಂಡದ ಆಟಗಾರರು ಹಾಗೂ ಡೇವಿಡ್ ವಾರ್ನರ್
ಮೆಲ್ಬರ್ನ್: ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಭಾರತದ 'ಸೂಪರ್‌ಸ್ಟಾರ್' ವಿರಾಟ್ ಕೊಹ್ಲಿ ಅವರೊಂದಿಗೆ ವಾಗ್ವಾದ ನಡೆಸಿದ್ದ ಆಸ್ಟ್ರೇಲಿಯಾದ ಸ್ಯಾಮ್ ಕೋನ್‌ಸ್ಟಾಸ್ ಅವರ ಬಗ್ಗೆ ಡೇವಿಡ್ ವಾರ್ನರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ಪರ 112 ಟೆಸ್ಟ್, 161 ಏಕದಿನ ಮತ್ತು 110 ಟಿ20 ಪಂದ್ಯ ಆಡಿರುವ ವಾರ್ನರ್, ಜಸ್‌ಪ್ರೀತ್ ಬೂಮ್ರಾ ಅವರಂತಹ ಶ್ರೇಷ್ಠ ವೇಗಿಯನ್ನು ಎದುರಿಸಲು ಆಕ್ರಮಣಕಾರಿ ಆಟದ ಮೊರೆಹೋದ ಕೋನ್‌ಸ್ಟಾಸ್ ಮನಸ್ಥಿತಿಯನ್ನು ಹಿರಿಯ ಆಟಗಾರರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಬೂಮ್ರಾ ಅವರ ಎಸೆತಗಳನ್ನು ಸ್ಕೂಪ್, ರಿವರ್ಸ್ ಹೊಡೆತಗಳ ಮೂಲಕ ಬೌಂಡರಿ ಗೆರೆ ದಾಟಿಸಿದ್ದ 19 ವರ್ಷ ಕೋನ್‌ಸ್ಟಾಸ್ ಮೆಲ್ಬರ್ನ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 65 ಎಸೆತಗಳಲ್ಲಿ 60 ರನ್ ಬಾರಿಸಿದ್ದರು. ಆ ಪಂದ್ಯವನ್ನು ಆಸ್ಟ್ರೇಲಿಯಾ 184 ರನ್‌ಗಳಿಂದ ಗೆದ್ದುಕೊಂಡಿದೆ.
ಯುವ ಆಟಗಾರರ ಬ್ಯಾಟಿಂಗ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ವಾರ್ನರ್, 'ಅದು (ಕೋನ್‌ಸ್ಟಾಸ್ ಇನಿಂಗ್ಸ್) ವಿಶೇಷವಾಗಿತ್ತು. ಜನರು ಅವರನ್ನೂ ಟೀಕಿಸಲು ಹೊರಟಿದ್ದಾರೆ. ಆದರೆ, ಕೋನ್‌ಸ್ಟಾಸ್ ಆಡುವುದೇ ಆಕ್ರಮಣಕಾರಿ ಶೈಲಿಯಲ್ಲಿ' ಎಂದು ಹೇಳಿದ್ದಾರೆ.
'ಬೂಮ್ರಾ ಅವರಂತಹ ಆಟಗಾರರು ಬೌಲಿಂಗ್ ಮಾಡುವಾಗ, ಅವುಗಳನ್ನು ಎದುರಿಸಲು ಹೇಗಾದರೂ ಪ್ರಯತ್ನ ಮಾಡಬೇಕು ಮತ್ತು ಆ ಪ್ರಯತ್ನಗಳನ್ನು ಕಾರ್ಯಗತಗೊಳಿಸಬೇಕು' ಎಂದಿದ್ದಾರೆ.
ಕ್ಯಾನ್‌ಬೆರಾದಲ್ಲಿ ನಡೆದ ಪ್ರಧಾನಿಮಂತ್ರಿಗಳ ಇಲವೆನ್ ಹಾಗೂ ಭಾರತ ತಂಡ ಸೆಣಸಿದ್ದ ಅಭ್ಯಾಸ ಪಂದ್ಯದಲ್ಲಿ ಆಡಿದ್ದ ಕೋನ್‌ಸ್ಟಾಸ್, 97 ಎಸೆತಗಳಲ್ಲಿ 107 ರನ್ ಬಾರಿಸಿದ್ದರು. ಮೆಲ್ಬರ್ನ್‌ನಲ್ಲಿ ಭಾರತದ 'ಎ' ತಂಡದ ವಿರುದ್ಧ ಅಜೇಯ 73 ರನ್ ಗಳಿಸಿದ್ದರು.
'ಪ್ರಧಾನಿಮಂತ್ರಿಗಳ ಇಲವೆನ್ ಪರ ಆಡಿದ್ದ ಆಟವು, ಆತನ ಪ್ರತಿಭೆಯನ್ನು ಪ್ರದರ್ಶಿಸಿತ್ತು. ಅಷ್ಟೇ ಅಲ್ಲ ಆತನ ಎದೆಗಾರಿಕೆಯನ್ನೂ ತೋರಿಸಿತ್ತು' ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ಟೀವ್ ಸ್ಮಿತ್ ಸಾಕಷ್ಟು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಆಟದ ವೇಗಕ್ಕೆ ಕುದುರಿಕೊಳ್ಳಲು ಧೈರ್ಯ ತೋರಬೇಕಾಗುತ್ತದೆ. ನಿಮಗೆ ಅಗ್ರ ಕ್ರಮಾಂಕದಲ್ಲಿ ಆಡಿದ ಅನುಭವವಿದೆ. ಎಲ್ಲ ಕ್ರಮಾಂಕಗಳಲ್ಲಿಯೂ ಆಡಬಲ್ಲಿರಿ ಎಂದು ಹೇಳಿದ್ದಾರೆ.
'ಅಡಿಲೇಡ್ ಟೆಸ್ಟ್‌ನಲ್ಲಿ ಅಮೋಘ ಶತಕ ಬಾರಿಸುವ ಮೂಲಕ ಟ್ರಾವಿಸ್ ಹೆಡ್ ಪಂದ್ಯವನ್ನು ಭಾರತದಿಂದ ದೂರಕ್ಕೆ ಕೊಂಡೊಯ್ದರು. ಹಾಗೆ ಆಡಲು ಅವರನ್ನಷ್ಟೇ ನೆಚ್ಚಿಕೊಳ್ಳಬಾರದು. ಆಸ್ಟ್ರೇಲಿಯನ್ನರು ಆಡಿಕೊಂಡು ಬಂದಿರುವ ರೀತಿ ಅದು ನ(ಟ್ರಾವಿಸ್ ಹೆಡ್ ಅವರಂತೆ). ಎಲ್ಲರೂ, ಧೈರ್ಯವಾಗಿ ಆಡಬೇಕು' ಎಂದು ಕಿವಿಮಾತು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.