ಗೌತಮ್ ಗಂಭೀರ್
(ಪಿಟಿಐ ಚಿತ್ರ)
ದುಬೈ: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ದಾಖಲಾದ ಗೆಲುವಿನ ಬಳಿಕ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್, 'ನಾವು ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಸಂತ್ರಸ್ತ ಕುಟುಂಬಗಳ ಪರ ನಿಲ್ಲುತ್ತೇವೆ' ಎಂದು ಹೇಳಿದ್ದಾರೆ.
ಅದೇ ಹೊತ್ತಿಗೆ ಪಾಕಿಸ್ತಾನ ವಿರುದ್ಧ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿದ ಭಾರತೀಯ ಸಶಸ್ತ್ರ ಪಡೆಯನ್ನು ಗಂಭೀರ್ ಶ್ಲಾಘಿಸಿದ್ದಾರೆ.
ಪಹಲ್ಗಾಮ್ ಭಯೋತ್ಪದನಾ ದಾಳಿಯ ವಿರುದ್ಧ ಭಾರತ ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದ ಮೊದಲ ಪಂದ್ಯ ಇದಾಗಿತ್ತು.
ದುಬೈಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತು. ಆದರೆ ಪಾಕಿಸ್ತಾನ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ಭಾರತೀಯ ಆಟಗಾರರು ನಿರಾಕರಿಸಿದ್ದರು.
'ಇದೊಂದು ಉತ್ತಮ ಗೆಲುವುವಾಗಿದೆ. ಆದರೂ ಟೂರ್ನಿಯಲ್ಲಿ ಇನ್ನು ಸಾಕಷ್ಟು ಕ್ರಿಕೆಟ್ ಬಾಕಿ ಇದೆ. ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಸಂತ್ರಸ್ತ ಕುಟುಂಬಗಳ ಜೊತೆ ನಿಲ್ಲುವುದಕ್ಕಾಗಿ ಈ ಪಂದ್ಯವು ಅತ್ಯಂತ ಮಹತ್ವಪೂರ್ಣವೆನಿಸಿತ್ತು. 'ಆಪರೇಷನ್ ಸಿಂಧೂರ' ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನಾಪಡೆಗಳಿಗೂ ನಾವು ಧನ್ಯವಾದಗಳನ್ನು ಸಲ್ಲಿಸುತ್ತೇವೆ. ನಾವೆಲ್ಲರೂ ನಮ್ಮ ದೇಶವನ್ನು ಹೆಮ್ಮೆಪಟ್ಟುಕೊಳ್ಳುವಂತೆ ಮಾಡಲಿದ್ದೇವೆ' ಎಂದು ಗಂಭೀರ್ ಹೇಳಿದ್ದಾರೆ.
ಈ ಮೊದಲು ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡದಿರುವ ಟೀಮ್ ಇಂಡಿಯಾದ ನಿರ್ಧಾರವನ್ನು ನಾಯಕ ಸೂರ್ಯಕುಮಾರ್ ಯಾದವ್ ಸಮರ್ಥಿಸಿಕೊಂಡಿದ್ದರು.
'ಇದು ತಂಡದ ಒಮ್ಮತದ ನಿರ್ಧಾರವಾಗಿತ್ತು. ನಾವಿಲ್ಲಿ ಆಡಲು ಮಾತ್ರ ಬಂದಿದ್ದೇವೆ. ನಾವು ಅವರಿಗೆ ಉತ್ತರವನ್ನು ನೀಡಿದ್ದೇವೆ. ಕೆಲವೊಂದು ವಿಷಯಗಳು ಕ್ರೀಡಾ ಸ್ಫೂರ್ತಿಗಿಂತಲೂ ಮಿಗಿಲಾಗಿದೆ. ನಾವು ನಮ್ಮ ಗೆಲವುನ್ನು 'ಆಪರೇಷನ್ ಸಿಂಧೂರ'ದಲ್ಲಿ ಭಾಗಿಯಾದ ಸೇನಾ ಪಡೆಗಳಿಗೆ ಹಾಗೂ ಪಹಲ್ಗಾಮ್ ಉಗ್ರದಾಳಿಯಲ್ಲಿ ಮೃತಪಟ್ಟ ಸಂತ್ರಸ್ತ ಕುಟುಂಬಗಳಿಗೆ ಅರ್ಪಿಸುತ್ತೇವೆ' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.