ADVERTISEMENT

ಅಫ್ಗಾನಿಸ್ತಾನ ಮೇಲೆ ದಾಳಿ: ಪಾಕಿಸ್ತಾನ ಪ್ರೀಮಿಯರ್ ಲೀಗ್ ತೊರೆಯುವರೇ ರಶೀದ್ ಖಾನ್?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2025, 2:13 IST
Last Updated 19 ಅಕ್ಟೋಬರ್ 2025, 2:13 IST
<div class="paragraphs"><p>ರಶೀದ್ ಖಾನ್</p></div>

ರಶೀದ್ ಖಾನ್

   

ಕೃಪೆ: ಪಿಟಿಐ

ಅಫ್ಗಾನಿಸ್ತಾನ – ಪಾಕಿಸ್ತಾನ ಸಂಘರ್ಷ ಮುಂದುವರಿದಿದೆ. ಪಾಕಿಸ್ತಾನ ಸೇನೆ ಶನಿವಾರ ನಡೆಸಿರುವ ವೈಮಾನಿಕ ದಾಳಿಯಲ್ಲಿ ಆಫ್ಗನ್‌ನ ಮೂವರು ಕ್ರಿಕೆಟಿಗರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ, ಅಫ್ಗಾನಿಸ್ತಾನ ಕ್ರಿಕೆಟ್‌ ತಂಡವು ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಬೇಕಿದ್ದ ತ್ರಿಕೋನ ಟಿ20 ಸರಣಿಯನ್ನು ಬಹಿಷ್ಕರಿಸಿದೆ.

ADVERTISEMENT

ನವೆಂಬರ್‌ 17ರಿಂದ 29ರ ವರೆಗೆ ನಿಗದಿಯಾಗಿರುವ ಈ ಟೂರ್ನಿಯಲ್ಲಿ, ಶ್ರೀಲಂಕಾ ತಂಡವೂ ಭಾಗವಹಿಸಬೇಕಿದೆ. ಆದರೆ, ಆಫ್ಗನ್ ನಿರ್ಧಾರದಿಂದಾಗಿ ಟೂರ್ನಿ ನಡೆಯುವುದು ಅನಿಶ್ಚಿತವಾಗಿದೆ.

ಏತನ್ಮಧ್ಯೆ, ಅಫ್ಗಾನಿಸ್ತಾನದ ಸ್ಟಾರ್ ಆಟಗಾರ ರಶೀದ್ ಖಾನ್‌ ಅವರು ಪಾಕಿಸ್ತಾನ ಪ್ರೀಮಿಯರ್‌ ಲೀಗ್‌ಗೆ (ಪಿಎಸ್‌ಎಲ್‌) ಗುಡ್‌ಬೈ ಹೇಳಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಪಿಎಸ್‌ಎಲ್‌ನಲ್ಲಿ ಲಾಹೋರ್‌ ಖಲಂದರ್ಸ್ ಪರ ಆಡುವ ರಶೀದ್‌, ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌/ಟ್ವಿಟರ್‌ನಲ್ಲಿ ತಮ್ಮ ಖಾತೆಯ ಬಯೊದಿಂದ ಫ್ರಾಂಚೈಸ್‌ ಹೆಸರನ್ನು ತೆಗೆದಿದ್ದಾರೆ. ಹೀಗಾಗಿ, ಅವರು ಪಿಎಸ್‌ಎಲ್‌ ತೊರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

2021ರಲ್ಲಿ ಲಾಹೋರ್ ತಂಡ ಸೇರಿರುವ ರಶೀದ್‌, ಈವರೆಗೆ ಮೂರು ಬಾರಿ ಪ್ರಶಸ್ತಿ ಜಯಿಸಿದ್ದಾರೆ.

'ಅಪಾರ ದುಃಖ ತಂದ ದುರಂತ'
ಪಾಕಿಸ್ತಾನ ದಾಳಿಯಿಂದ ಆಘಾತಗೊಂಡಿರುವ ರಶೀದ್‌, 'ನಾಗರಿಕರ ಸಾವು ಅಪಾರ ದುಃಖ ತಂದಿದೆ. ವಿಶ್ವ ವೇದಿಕೆಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವ ಕನಸು ಕಂಡಿದ್ದ ಯುವ ಕ್ರಿಕೆಟಿಗರು, ಮಹಿಳೆಯರು, ಮಕ್ಕಳನ್ನು ಬಲಿತೆಗೆದುಕೊಂಡ ದುರಂತವಿದು' ಎಂಬುದಾಗಿ ಟ್ವಿಟರ್‌ನಲ್ಲಿ ಕಂಬನಿ ಮಿಡಿದಿದ್ದಾರೆ.

'ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ಮಾಡುವುದು ಅನಾಗರಿಕ ನಡೆ. ಈ ಅನ್ಯಾಯ ಹಾಗೂ ಕಾನೂನುಬಾಹಿರ ಕ್ರಮವು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ತ್ರಿಕೋನ ಸರಣಿಯಿಂದ ಹಿಂದೆ ಸರಿಯುವ ಅಫ್ಗಾನಿಸ್ತಾನ ಕ್ರಿಕೆಟ್‌ ಮಂಡಳಿ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಜನರೊಂದಿಗೆ ನಿಲ್ಲುತ್ತೇನೆ. ದೇಶದ ಘನತೆ ಎಲ್ಲಕ್ಕಿಂತಲೂ ಮಿಗಿಲು' ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.