ADVERTISEMENT

ಭಾರತ ವಿರುದ್ಧ ಪಂದ್ಯ ಬಹಿಷ್ಕರಿಸಲು ಪಾಕ್ ತೀರ್ಮಾನ: ಭಾಗೀದಾರರಿಗೆ ಭಾರಿ ನಷ್ಟ

ಪಿಟಿಐ
Published 2 ಫೆಬ್ರುವರಿ 2026, 15:59 IST
Last Updated 2 ಫೆಬ್ರುವರಿ 2026, 15:59 IST
<div class="paragraphs"><p>ಭಾರತ–ಪಾಕಿಸ್ತಾನ</p></div>

ಭಾರತ–ಪಾಕಿಸ್ತಾನ

   

– ಗೆಟ್ಟಿ ಚಿತ್ರ

ನವದೆಹಲಿ: ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಐಸಿಸಿ ಟೂರ್ನಿಗಳಲ್ಲಿ ನಡೆಯುವ ಪಂದ್ಯವು ಚಿನ್ನದ ಮೊಟ್ಟೆಯಿಡುವ ಕೋಳಿಯಿದ್ದಂತೆ. ಪ್ರತಿ ಪಂದ್ಯವು ₹2,220 ಕೋಟಿಗೂ (250 ದಶಲಕ್ಷ ಡಾಲರ್) ಹೆಚ್ಚು ವರಮಾನ ತಂದುಕೊಡುತ್ತದೆ ಎಂದು ಕೆಲವು ಅಂದಾಜುಗಳು ಹೇಳುತ್ತವೆ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಇತ್ತಂಡಗಳ ನಡುವಣ ಪಂದ್ಯ ನಡೆಯದೇ ಹೋದಲ್ಲಿ ಭಾಗೀದಾರರಿಗೆ ಅಪಾರ ನಷ್ಟವಾಗಲಿದೆ.

ADVERTISEMENT

ಎರಡು ದೇಶಗಳ ಬಾಂಧವ್ಯ ಹಳಸಿರುವ ಕಾರಣ ಸಾಂಪ್ರದಾಯಿಕ ಎದುರಾಳಿಗಳು ದ್ವಿಪಕ್ಷೀಯ ಸರಣಿಗಳಲ್ಲಿ ಆಡುತ್ತಿಲ್ಲ. ಬಹುತಂಡಗಳ ಟೂರ್ನಿಯಲ್ಲಿ ಮಾತ್ರ ಆಡುತ್ತಿವೆ. ಐಸಿಸಿ ಸಹ ಪ್ರತಿಷ್ಠಿತ ಟೂರ್ನಿಗಳಲ್ಲಿ ಇವೆರಡು ತಂಡಗಳು ಒಂದೇ ಗುಂಪಿನಲ್ಲಿರುವಂತೆ ನೋಡಿಕೊಳ್ಳುತ್ತದೆ.

ಭಾರತ ವಿರುದ್ಧ ಕೊಲಂಬೊದಲ್ಲಿ ಫೆಬ್ರುವರಿ 15ರಂದು ನಡೆಯುವ ವಿಶ್ವಕಪ್ ಗುಂಪು ಹಂತದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಸರ್ಕಾರ ಭಾನುವಾರ ಪ್ರಕಟಿಸಿದೆ. ಪಾಕಿಸ್ತಾನವು ತನ್ನ ನಿಲುವಿಗೆ ಅಂಟಿಕೊಂಡಲ್ಲಿ ಆ ದೇಶಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಲಿದೆ. ಐಸಿಸಿ ಬೊಕ್ಕಸಕ್ಕೂ ಭಾರಿ ಪ್ರಮಾಣದಲ್ಲಿ ನಷ್ಟವಾಗಲಿದೆ.

ಮಾಧ್ಯಮ ಪ್ರಸಾರದ ಹಕ್ಕು ಪಡೆದಿರುವ ಜಿಯೊಸ್ಟಾರ್, ಐಸಿಸಿ ಜೊತೆ ₹2.74 ಲಕ್ಷ ಕೋಟಿ (3 ಶತಕೋಟಿ ಡಾಲರ್) ಮೊತ್ತದ ಒಪ್ಪಂದ ಮಾಡಿಕೊಳ್ಳಲು ಮಾತುಕತೆಯನ್ನೂ ಆರಂಭಿಸಿತ್ತು.

ಪ್ರಸಾರ ಸಂಸ್ಥೆಯು, ಈ ಪಂದ್ಯಕ್ಕೆ ಜಾಹೀರಾತುಗಳಿಂದ ಬರುವ ₹200 ರಿಂದ 250 ಕೋಟಿ ವರಮಾನ ಕಳೆದುಕೊಳ್ಳಲಿದೆ. 10 ಸೆಕೆಂಡುಗಳ ವಾಣಿಜ್ಯ ಜಾಹೀರಾತು ಸ್ಲಾಟ್‌ಗೆ ಪ್ರಸಾರಸಂಸ್ಥೆಯು ₹40 ಲಕ್ಷದವರೆಗೆ ದರ ನಿಗದಿಪಡಿಸುತ್ತದೆ.

ವಾಕ್‌ಓವರ್‌ನಿಂದ ಭಾರತಕ್ಕೆ ಎರಡು ಪೂರ್ಣ ಪಾಯಿಂಟ್‌ಗಳು ದೊರೆಯಲಿದೆ. ಐಸಿಸಿಯು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಭಾರಿ ಮೊತ್ತದ ದಂಡವನ್ನು ವಿಧಿಸುವ ಅಧಿಕಾರವನ್ನೂ ಹೊಂದಿದೆ.

ಭಾರತ– ಪಾಕಿಸ್ತಾನ ನಡುವಣ ಪ್ರತಿ ಪಂದ್ಯವು ₹2,200 ಕೋಟಿಗೂ ಹೆಚ್ಚು ಮೌಲ್ಯ ಹೊಂದಿದೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆಯು ಉದ್ಯಮದ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

‘ನಿರ್ಬಂಧ ಅಥವಾ ನಷ್ಟದ ಅಂದಾಜು ತೆಗೆದುಕೊಂಡರೆ, ಪಂದ್ಯ ನಡೆಯದೇ ಹೋದಲ್ಲಿ ಸುಮಾರು ₹2,200 ಕೋಟಿ ನಷ್ಟವಾಗಲಿದೆ. ಪಾಕಿಸ್ತಾನ ವಾರ್ಷಿಕ ಆದಾಯ ಸುಮಾರು 995 ಕೋಟಿ (ಪಾಕ್‌ ರೂಪಾಯಿ ಲೆಕ್ಕಾಚಾರದಲ್ಲಿ). ಇದು ದೊಡ್ಡ ನಷ್ಟವಾಗಲಿದ್ದು ಆಗಾಧ ಪರಿಣಾಮ ಬೀರಲಿದೆ’ ಎಂದು ಐಸಿಸಿ ಹಾಗೂ ಪಿಸಿಬಿಯ ಸಂವಹನ ವಿಭಾಗದ ಮಾಜಿ ಮುಖ್ಯಸ್ಥ ಸಮಿ–ಉಲ್–ಹಸನ್ ಬರ್ನಿ ಅವರು ಲೆಕ್ಕಾಚಾರ ತೆರೆದಿಟ್ಟರು.

‘ಐಸಿಸಿ ಟೂರ್ನಿಗಳು ಕ್ರೀಡಾ ವಿಶ್ವಾಸಾರ್ಹತೆ, ಪೈಪೋಟಿ, ನ್ಯಾಯಪರತೆ– ಇವುಗಳ ಬಲದಲ್ಲಿ ನಿಂತಿವೆ. ತಂಡವೊಂದು ಪಂದ್ಯಗಳನ್ನು ಆಯ್ದು ಆಡಿದರೆ, ಅದರಿಂದ ಕ್ರೀಡೆಯ ಸ್ಪೂರ್ತಿ ಮತ್ತು ಪಾವಿತ್ರ್ಯತೆಗೆ ಧಕ್ಕೆಯಾಗುತ್ತದೆ’ ಎಂದು ಐಸಿಸಿ ಹೇಳಿದೆ.

ಈ ಎಲ್ಲ ನಾಟಕೀಯ ಬೆಳವಣಿಗೆಗಳ ನಡುವೆ ಪಾಕಿಸ್ತಾನ ತಂಡ ಸೋಮವಾರ ಕೊಲಂಬೊಕ್ಕೆ ತೆರಳಿತು. ಟಿ20ವಿಶ್ವಕಪ್ ಟೂರ್ನಿ ಫೆ. 7ರಂದು ಆರಂಭವಾಗಲಿದೆ.

ಐಸಿಸಿ, ಪಿಸಿಬಿ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು 2027ರವರೆಗೆ ಭಾರತ–ಪಾಕಿಸ್ತಾನ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ಆಡಲು ಒಪ್ಪಿರುವ ಕಾರಣ, ಈ (ಆಯ್ದ ಪಂದ್ಯಗಳನ್ನು ಆಡುವ) ನಡೆಯನ್ನು ಸಮರ್ಥಿಸಿಕೊಳ್ಳುವುದು ಪಾಕ್ ಮಂಡಳಿಗೆ ಕಠಿಣವಾಗಲಿದೆ.

ವೇಗಿ ಮುಸ್ತಫಿಝುರ್ ರೆಹಮಾನ್ ಅವರನ್ನು ಬಿಸಿಸಿಐ ಸೂಚನೆ ಮೇರೆಗೆ ಐಪಿಎಲ್‌ನಿಂದ ಹೊರಗಿಟ್ಟ ಮರುದಿನವೇ ಬಾಂಗ್ಲಾದೇಶವು ಭಾರತದಲ್ಲಿ ತನ್ನ ಪಂದ್ಯಗಳನ್ನು ಆಡುವುದಿಲ್ಲ ಎಂದು ಹಠ ಹಿಡಿಯಿತು. ಆ ತಂಡವನ್ನು ವಿಶ್ವಕಪ್‌ನಿಂದ ಹೊರಗಿಟ್ಟ ಐಸಿಸಿ ಕ್ರಮವನ್ನು ಪಾಕಿಸ್ತಾನ ಆಕ್ಷೇಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.