ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸಲ್ಮಾನ್ ಆಘಾ ಅವರು ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರಿಗೆ ಆಟಗಾರರ ಪಟ್ಟಿಯನ್ನು ನೀಡಿದರು
ಪಿಟಿಐ ಚಿತ್ರ
ದುಬೈ: ‘ಅವರು ಆಡ್ತಾರೆ. ಅವರು ಆಡಲ್ಲ..’ ಅತ್ತಿಂದಿತ್ತ ಶತಪಥ ಹಾಕಿದ ಪಾಕಿಸ್ತಾನ ತಂಡವು ಬುಧವಾರ ಮುಸ್ಸಂಜೆ ಯುಎಇ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ತನ್ನ ನಿರ್ಧಾರವನ್ನು ತರಾತುರಿಯಲ್ಲಿ ಬದಲಿಸಿತು. ಒಂದೊಮ್ಮೆ ಬಹಿಷ್ಕಾರದ ನಿರ್ಧಾರಕ್ಕೆ ಗಟ್ಟಿಯಾಗಿ ಅಂಟಿಕೊಂಡಿದ್ದರೆ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕ್ ತಂಡದ ಅಭಿಯಾನಕ್ಕೆ ತೆರೆಬೀಳುತ್ತಿತ್ತು.
ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ನಡೆದಿದ್ದ ‘ಹಸ್ತಲಾಘವ ನಿರಾಕರಣೆ’ ವಿವಾದದ ಹಿನ್ನೆಲೆಯಲ್ಲಿ ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸಬೇಕು ಎಂದು ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿತ್ತು. ಆದರೆ ಪಾಕ್ ಮನವಿಯನ್ನು ಐಸಿಸಿಯು ತಳ್ಳಿ ಹಾಕಿತ್ತು. ಬುಧವಾರ ಪಿಸಿಬಿಯು ಎರಡನೇ ಬಾರಿ ಪೈಕ್ರಾಫ್ಟ್ ವಿರುದ್ಧ ಮನವಿ ಸಲ್ಲಿಸಿತ್ತು. ಅದನ್ನೂ ಐಸಿಸಿಯು ತಿರಸ್ಕರಿಸಿತ್ತು. ಇದರಿಂದಾಗಿ ಪಾಕ್ ತಂಡವು ಗೊಂದಲಕ್ಕೊಳಗಾಯಿತು.
ಸ್ಥಳೀಯ ತಂಡ (ಯುಎಇ) ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ತನ್ನ ನಿರ್ಧಾರವನ್ನು ಬದಲಿಸಬೇಕೆ ಎಂಬ ಜಿಜ್ಞಾಸೆಯಲ್ಲಿ ಪಾಕ್ ತಂಡ ಹೊಯ್ದಾಡಿತು. ಏಕೆಂದರೆ ಎ ಗುಂಪಿನಿಂದ ಸೂಪರ್ ಫೋರ್ ಪ್ರವೇಶಿಸಲು ಪಾಕ್ ತಂಡವು ಈ ಪಂದ್ಯವನ್ನು ಜಯಿಸಲೇಬೇಕು. ಬಹಿಷ್ಕಾರ ಮಾಡಿದರೆ ಟೂರ್ನಿಯಿಂದ ಹೊರಬೀಳುವುದು ಖಚಿತವಾಗಿತ್ತು.
ಸ್ಥಳೀಯ ಕಾಲಮಾನ ಸಂಜೆ 6.30ಕ್ಕೆ ಪಂದ್ಯ ಆರಂಭವಾಗಬೇಕು. 5 ಗಂಟೆಯಷ್ಟೊತ್ತಿಗೆ ಯುಎಇ ತಂಡವು ಮೈದಾನಕ್ಕೆ ಆಗಮಿಸಿತ್ತು. ಆದರೆ ಆ ಹೊತ್ತಿಗೆ ಸಲ್ಮಾನ್ ಆಘಾ ನಾಯಕತ್ವದ ಪಾಕ್ ಬಳಗವು ಹೋಟೆಲ್‌ನಲ್ಲಿಯೇ ಇತ್ತು. ಪಿಸಿಬಿ ಅಧ್ಯಕ್ಷ ಮೊಹಸಿನ್ ನಕ್ವಿ ಅವರು ತಂಡವನ್ನು ಹೋಟೆಲ್‌ನಲ್ಲಿಯೇ ಇರುವಂತೆ ಸೂಚಿಸಿದ್ದರು. ಅವರು ಲಾಹೋರ್‌ನಲ್ಲಿ ಪಾಕ್ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷರಾದ ನಜಾಮ್ ಸೇಥಿ ಮತ್ತು ರಮೀಜ್ ರಾಜಾ ಅವರೊಂದಿಗೆ ಚರ್ಚೆ ನಡೆಸಿದರು.
ಸುಮಾರು 5.45ರ ಹೊತ್ತಿಗೆ ಪಂದ್ಯವು ನಡೆಯಲಿದೆ ಎಂಬ ವರ್ತಮಾನ ಹೊರಬಿತ್ತು. ಆದರೆ ನಿಗದಿತ ವೇಳೆಗಿಂತ ಒಂದು ಗಂಟೆ ತಡವಾಗಿ ಪಂದ್ಯ ಆರಂಭಿಸಲಾಗುವುದು ಎಂದೂ ಪ್ರಕಟಿಸಲಾಯಿತು. 6.30ರ ಹೊತ್ತಿಗೆ ಪಾಕ್ ತಂಡವು ಕ್ರೀಡಾಂಗಣಕ್ಕೆ ಬಂದಿಳಿಯಿತು. ಅರ್ಧ ಗಂಟೆ ನಂತರ ರೆಫರಿ ಪೈಕ್ರಾಫ್ಟ್ ಅವರು ಟಾಸ್ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಆಘಾ ಮತ್ತು ಯುಎಇ ನಾಯಕ ಕೈಕುಲುಕಿದರು. ಸ್ಥಳೀಯ ಕಾಲಮಾನ ರಾತ್ರಿ 7.30ಕ್ಕೆ (ಭಾರತೀಯ ಕಾಲಮಾನ; 9) ಪಂದ್ಯ ಆರಂಭವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.