ADVERTISEMENT

ಭಾರತೀಯ ಕ್ರಿಕೆಟಿಗರನ್ನು ಪಾಕ್ ಅಭಿಮಾನಿಗಳು ಇಷ್ಟಪಡುತ್ತಾರೆ: ಅಖ್ತರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಅಕ್ಟೋಬರ್ 2021, 11:11 IST
Last Updated 22 ಅಕ್ಟೋಬರ್ 2021, 11:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದುಬೈ: ಪಾಕಿಸ್ತಾನದಲ್ಲಿರುವ ಕ್ರಿಕೆಟ್ ಅಭಿಮಾನಿಗಳು ಭಾರತದ ಬ್ಯಾಟರ್‌ಗಳನ್ನು ಇಷ್ಟಪಡುತ್ತಾರೆ ಎಂದು ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಹೇಳಿಕೆ ನೀಡಿದ್ದಾರೆ.

ಈ ಕುರಿತು 'ಜೀ ನ್ಯೂಸ್‌'ಗೆ ಪ್ರತಿಕ್ರಿಯೆ ನೀಡಿರುವ ಅಖ್ತರ್, ಪಾಕಿಸ್ತಾನದ ಅಭಿಮಾನಿಗಳು ಹೇಗೆ ಭಾರತೀಯ ಕ್ರಿಕೆಟ್ ಅನ್ನು ಮೆಚ್ಚುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

'ವಿರಾಟ್ ಕೊಹ್ಲಿ ಅವರನ್ನು ಪಾಕಿಸ್ತಾನ ಅಭಿಮಾನಿಗಳು ಮೆಚ್ಚುತ್ತಿದ್ದಾರೆ. ಭಾರತದ ಇನ್ನೊಬ್ಬ ಆಟಗಾರನನ್ನು ನಾಯಕನಿಗಿಂತಲೂ ಶ್ರೇಷ್ಠರೆಂದು ಪರಿಗಣಿಸುತ್ತಾರೆ' ಎಂದು ಹೇಳಿದರು.

'ಇಂದು ಭಾರತ ಅತ್ಯುತ್ತಮ ತಂಡ ಹೊಂದಿಲ್ಲ ಎಂದು ಹೇಳುವ ಪಾಕಿಸ್ತಾನಿಯರು ಇಲ್ಲ. ಅವರು ಬಹಿರಂಗವಾಗಿಯೇ ಪ್ರಶಂಸಿಸುತ್ತಾರೆ. ವಿರಾಟ್ ಕೊಹ್ಲಿ ಅವರನ್ನು ಶ್ರೇಷ್ಠ ಆಟಗಾರ ಮತ್ತು ರೋಹಿತ್ ಶರ್ಮಾ ಅವರನ್ನು ವಿರಾಟ್‌ಗಿಂತಲೂ ಶ್ರೇಷ್ಠ ಎಂದು ಪರಿಗಣಿಸುತ್ತಾರೆ. ಪಾಕಿಸ್ತಾನದ ಜನರು ಅವರನ್ನು 'ಭಾರತದ ಇಂಜಮಾಮ್ ಉಲ್ ಹಕ್' ಎಂದು ಹೇಳುತ್ತಾರೆ. ಆಸ್ಟ್ರೇಲಿಯಾದಲ್ಲಿ ರಿಷಭ್ ಪಂತ್ ಆಡಿದ ರೀತಿಗೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಸೂರ್ಯ ಕುಮಾರ್ ಅವರಂತಹ ಆಟಗಾರರನ್ನು ಪ್ರಶಂಸಿಸುತ್ತಾರೆ. ಹಾಗಾಗಿ ಭಾರತದ ಬಗ್ಗೆ ಪಾಕಿಸ್ತಾನಿಯರಿಗೆ ಉತ್ತಮ ಅಭಿಪ್ರಾಯವಿದೆ' ಎಂದು ವಿವರಿಸಿದರು.

'ಜನರು ನಾನು ದುಡ್ಡಿಗಾಗಿ ಭಾರತದ ಪರ ಹೇಳಿಕೆಗಳನ್ನು ನೀಡುತ್ತೇನೆ ಎಂದು ಹೇಳುತ್ತಾರೆ. ಆದರೆ ಅದು ನಿಜವಲ್ಲ. ನನಗೆ ಭಾರತದಲ್ಲಿ ತುಂಬಾ ಅಭಿಮಾನಿಗಳಿದ್ದಾರೆ. ನಾನು ಭಾರತೀಯರು ಪ್ರೀತಿಸುವ ಅದೃಷ್ಟವಂತ ಪಾಕಿಸ್ತಾನಿ. ಅದರಲ್ಲಿ ಯಾವುದೇ ಸಂದೇಹವಿಲ್ಲ. ನಾನು ನನ್ನ ಅಥವಾ ಅವರ (ಭಾರತೀಯರ) ಭಾವನೆಗಳಿಗೆ ಧಕ್ಕೆ ತರಲು ಬಯಸುವುದಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.