ದುಬೈ: ಮೊಹಮ್ಮದ್ ಹ್ಯಾರಿಸ್ (66, 43ಎ) ಅವರ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ತಂಡ, ಏಷ್ಯಾ ಕಪ್ ಟಿ20 ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಅನನುಭವಿ ಒಮಾನ್ ವಿರುದ್ಧ 93 ರನ್‌ಗಳ ನಿರಾಯಾಸದ ಗೆಲುವು ಸಾಧಿಸಿತು.
ಪಾಕಿಸ್ತಾನ ನೀಡಿದ್ದ 161 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಒಮಾನ್ ತಂಡವು 16.4 ಓವರ್‌ಗಳಲ್ಲಿ 67 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಹಮದ್ ಮಿರ್ಜಾ (27) ಹೊರತುಪಡಿಸಿ ಉಳಿದವರು ಬೇಗನೆ ಪೆವಿಲಿಯನ್ ಸೇರಿಕೊಂಡರು. ಪಾಕ್‌ನ ಸಯ್ಯದ್ ಅಯೂಬ್, ಸೂಫಿಯಾನ್ ಮುಖೀಮ್ ಮತ್ತು ಫಹೀಮ್ ಅಶ್ರಫ್ ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟ್ ಮಾಡಲು ನಿರ್ಧರಿಸಿದ ಪಾಕ್ ತಂಡವು ಆರಂಭ ಆಟಗಾರ ಸಯಿಮ್ ಅಯೂಬ್ (0) ಅವರನ್ನು ಬೇಗನೇ ಕಳೆದುಕೊಂಡಿತು. ನಂತರ ಹ್ಯಾರಿಸ್ ಮತ್ತು ಸಾಹಿಬ್‌ಝಾದಾ ಪರ್ಹಾನ್ (29, 29ಎ) ಎರಡನೇ ವಿಕೆಟ್‌ಗೆ 85 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.
ಈ ಹಂತದಲ್ಲಿ ಎಡಗೈ ಸ್ಪಿನ್ನರ್ ಅಮೀರ್ ಕಲೀಮ್ (31ಕ್ಕೆ3) ಪಾಕಿಸ್ತಾನ ತಂಡವನ್ನು ಕಟ್ಟಿಹಾಕಿದರು. 11ನೇ ಓವರಿನಲ್ಲಿ ಪರ್ಹಾನ್ ರಿವರ್ಸ್ ಸ್ವೀಪ್ ಯತ್ನದಲ್ಲಿ ಬೌಲ್ಡ್ ಆದರು. ನಾಯಕ ಸಲ್ಮಾನ್ ಆಘಾ ಫುಲ್ಟಾಸ್ ಎಸೆತದಲ್ಲಿ ಹಮದ್ ಮಿರ್ಜಾ ಅವರಿಗೆ ಕ್ಯಾಚಿತ್ತರು. ಕಲೀಮ್ ತಮ್ಮ ಮುಂದಿನ ಓವರಿನಲ್ಲಿ ಹ್ಯಾರಿಸ್ ಅವರ ವಿಕೆಟ್ ಕೂಡ ಪಡೆದು ಮಿಂಚಿದರು.
ಎಡಗೈ ವೇಗಿ ಶಾ ಫೈಸಲ್ (34ಕ್ಕೆ3) ಅವರು ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಮೂರು ವಿಕೆಟ್‌ಗಳನ್ನು ಪಡೆದರು. ಪಾಕ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 160 ರನ್ ಗಳಿಸಿತು.
ಸ್ಕೋರುಗಳು:
ಪಾಕಿಸ್ತಾನ: 20 ಓವರುಗಳಲ್ಲಿ 7ಕ್ಕೆ 160 (ಸಾಹಿಬ್‌ಝಾದ ಪರ್ಹಾನ್ 29, ಮೊಹಮ್ಮದ್ ಹ್ಯಾರಿಸ್ 66, ಫಖರ್ ಜಮಾನ್ ಔಟಾಗದೇ 23, ಶಾ ಫೈಸಲ್ 34ಕ್ಕೆ3, ಆಮೀರ್ ಕಲೀಮ್ 31ಕ್ಕೆ3).
ಒಮಾನ್: 16.4 ಓವರ್‌ಗಳಲ್ಲಿ 67 (ಹಮ್ಮದ್ ಮಿರ್ಜಾ 27; ಸಯ್ಯದ್ ಅಯೂಬ್ 8ಕ್ಕೆ 2, ಸೂಫಿಯಾನ್ ಮುಖೀಮ್ 7ಕ್ಕೆ 2, ಫಹೀಮ್ ಅಶ್ರಫ್ 6ಕ್ಕೆ 2). ಫಲಿತಾಂಶ: ಪಾಕಿಸ್ತಾನಕ್ಕೆ 93 ರನ್‌ಗಳ ಜಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.