ADVERTISEMENT

ದಶಕಗಳ ಬಳಿಕ ಪಾಕಿಸ್ತಾನದಲ್ಲಿ ಟೆಸ್ಟ್: ಚಾರಿತ್ರಿಕ ಪಂದ್ಯಕ್ಕೆ ಮಳೆ ಅಡ್ಡಿ

ಪಂದ್ಯ ಆರಂಭವಾಗಿ ನಾಲ್ಕು ದಿನವಾದರೂ, ನಡೆದದ್ದು 91.5 ಓವರ್‌ಗಳ ಆಟವಷ್ಟೇ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 11:40 IST
Last Updated 14 ಡಿಸೆಂಬರ್ 2019, 11:40 IST
ಸ್ಕೋರ್‌ ಬೋರ್ಡ್‌ನಲ್ಲಿ ಪಂದ್ಯ ರದ್ದಾದ ಬಗ್ಗೆ ಮಾಹಿತಿ ಪ್ರಕಟಿಸಲಾಯಿತು. (ಒಳಚಿತ್ರದಲ್ಲಿ.. ಮೈದಾನದಲ್ಲಿ ನಿಂತಿರುವ ನೀರನ್ನು ಹೊರಹಾಕುತ್ತಿರುವ ಸಿಬ್ಬಂದಿ)
ಸ್ಕೋರ್‌ ಬೋರ್ಡ್‌ನಲ್ಲಿ ಪಂದ್ಯ ರದ್ದಾದ ಬಗ್ಗೆ ಮಾಹಿತಿ ಪ್ರಕಟಿಸಲಾಯಿತು. (ಒಳಚಿತ್ರದಲ್ಲಿ.. ಮೈದಾನದಲ್ಲಿ ನಿಂತಿರುವ ನೀರನ್ನು ಹೊರಹಾಕುತ್ತಿರುವ ಸಿಬ್ಬಂದಿ)   

ರಾವಲ್ಪಿಂಡಿ: ದಶಕದ ಬಳಿಕ ಪಾಕಿಸ್ತಾನ ‌ನೆಲದಲ್ಲಿ ಆರಂಭವಾಗಿರುವ ಐತಿಹಾಸಿಕ ಟೆಸ್ಟ್‌ನ ನಾಲ್ಕನೇ ದಿನದಾಟವನ್ನುಮಳೆಯಿಂದಾಗಿ ರದ್ದು ಮಾಡಲಾಗಿದೆ. ಎರಡು ಮತ್ತು ಮೂರನೇ ದಿನದಾಟಕ್ಕೂ ಮಳೆ ಅಡ್ಡಿಪಡಿಸಿದ್ದರಿಂದ ಬಹುತೇಕ ಪಂದ್ಯವೇ ಕೊಚ್ಚಿಹೋದಂತಾಗಿದೆ.

ಇಲ್ಲಿ ಬುಧವಾರ ಆರಂಭವಾದ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಂಭಿಸಿದ ಪ್ರವಾಸಿ ಶ್ರೀಲಂಕಾ ತಂಡ ಮೊದಲ ದಿನ68.1 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ202 ರನ್‌ ಗಳಿಸಿತ್ತು. ಎರಡನೇ ದಿನದಿಂದಾಚೆಗೆ ಮಳೆಯ ಆಟ ಶುರುವಾಯಿತು. 2ನೇ ದಿನ ಕೇವಲ 18.2 ಓವರ್‌ ಆಟ ಮಾತ್ರವೇ ನಡೆಯಿತು. ಮೂರನೇ ದಿನ ಹವಾಮಾನ ವೈಪರೀತ್ಯದಿಂದಾಗಿ ಕೇವಲ 5.2 ಓವರ್‌ಗಳ ಆಟವಷ್ಟೇ ಸಾಧ್ಯವಾಗಿತ್ತು.

ಶುಕ್ರವಾರ ರಾತ್ರಿ ಭಾರೀ ಮಳೆ ಸುರಿದ ಪರಿಣಾಮ ಮೈದಾನದಲ್ಲಿ ನೀರು ನಿಂತಿದ್ದು, ನಾಲ್ಕನೇ ದಿನದಾಟವನ್ನು ರದ್ದುಪಡಿಸಲಾಗಿದೆ. ಹೀಗಾಗಿ ಕೇವಲ 91.5 ಓವರ್‌ಗಳ ಆಟವಷ್ಟೇ ನಡೆದಿದೆ.

ADVERTISEMENT

2009ರಲ್ಲಿ ಶ್ರೀಲಂಕಾ ತಂಡದ ಆಟಗಾರರಿದ್ದ ಬಸ್‌ ಮೇಲೆ ಇಸ್ಲಾಮಾಬಾದ್‌ನಲ್ಲಿ ಉಗ್ರರು ದಾಳಿ ನಡೆಸಿದ್ದರು. ಆ ಬಳಿಕ ಪಾಕ್‌ ಪ್ರವಾಸ ಕೈಗೊಳ್ಳಲು ಬೇರೆ ದೇಶದ ಆಟಗಾರರು ಹಿಂದೇಟು ಹಾಕಿದ್ದರು. ಹೀಗಾಗಿ ಇಲ್ಲಿ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳು ಆಯೋಜನೆಯಾಗಿರಲಿಲ್ಲ. ಪಾಕಿಸ್ತಾನ ತಂಡವೂ ತಟಸ್ಥ ಸ್ಥಳಗಳಲ್ಲಿಯೇ ಪಂದ್ಯ ಆಡಬೇಕಾಗಿತ್ತು.

ಎರಡನೇ ಹಾಗೂ ಅಂತಿಮ ಪಂದ್ಯವು ಡಿ. 19–13ರವರೆಗೆಕರಾಚಿಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.