ADVERTISEMENT

T20 WC | ಲಂಕಾ ವಿರುದ್ಧ ಗೆದ್ದರೂ ನಾಕೌಟ್‌ಗೇರದ ಪಾಕ್: ನ್ಯೂಜಿಲೆಂಡ್‌ ಸೆಮಿಗೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 18:24 IST
Last Updated 28 ಫೆಬ್ರುವರಿ 2026, 18:24 IST
<div class="paragraphs"><p>ಸಾಹಿಬ್‌ಝಾದಾ ಫರ್ಹಾನ್ (ಬಲ) ಮತ್ತು ಫಖರ್ ಜಮಾನ್ </p></div>

ಸಾಹಿಬ್‌ಝಾದಾ ಫರ್ಹಾನ್ (ಬಲ) ಮತ್ತು ಫಖರ್ ಜಮಾನ್

   

ಪಲ್ಲೆಕೆಲೆ: ಆರಂಭ ಆಟಗಾರರಾದ ಸಾಹಿಬ್‌ಝಾದಾ ಫರ್ಹಾನ್ (100) ಮತ್ತು ಫಖರ್ ಜಮಾನ್ (84) ಅವರ ದಾಖಲೆಯ ಜೊತೆಯಾಟದ ನೆರವಿನಿಂದ ಪಾಕಿಸ್ತಾನ ತಂಡವು ಶನಿವಾರ ಟಿ20 ವಿಶ್ವಕಪ್‌ನ ಸೂಪರ್ ಎಂಟರ ತನ್ನ ಕೊನೆಯ ಪಂದ್ಯದಲ್ಲಿ 5 ರನ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು. ಆದರೆ, ಈ ರೋಚಕ ಪಂದ್ಯದಲ್ಲಿ ಗೆದ್ದರೂ ಪಾಕ್‌ನ ನಾಕೌಟ್‌ ಕನಸು ಸಾಕಾರಗೊಳ್ಳಲಿಲ್ಲ. 

ಪಾಕಿಸ್ತಾನ ತಂಡವು ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಆತಿಥೇಯ ತಂಡವನ್ನು 147 ರನ್‌ಗಳ ಒಳಗೆ ನಿಯಂತ್ರಿಸಬೇಕಿತ್ತು. ಆದರೆ, 213 ರನ್‌ಗಳ ಗುರಿ ಎದುರಿಸಿದ ಲಂಕಾ ತಂಡವು ಕೊನೆಯಲ್ಲಿ ತೀವ್ರ ಹೋರಾಟ ನಡೆಸಿದರೂ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 207 ರನ್‌ ಗಳಿಸಲಷ್ಟೇ ಶಕ್ತವಾಯಿತು.

ADVERTISEMENT

ಆತಿಥೇಯರ ಗೆಲುವಿಗೆ ಕೊನೆಯ ಓವರ್‌ನಲ್ಲಿ 28 ರನ್‌ ಬೇಕಿತ್ತು. ವೇಗಿ ಶಾಹೀನ್‌ ಶಾ ಅಫ್ರಿದಿ ಹಾಕಿದ ಓವರ್‌ನ ಮೊದಲ ನಾಲ್ಕು ಎಸೆತಗಳಲ್ಲಿ ನಾಯಕ ದಸೂನ್‌ ಶನಕ (ಔಟಾಗದೇ 76;31ಎ) ಅವರು ಹ್ಯಾಟ್ರಿಕ್‌ ಸಿಕ್ಸರ್‌ ಸೇರಿ 22 ರನ್‌ ಬಾಚಿದರು. ಆದರೆ, ನಂತರದ ಎರಡು ಎಸೆತಗಳಲ್ಲಿ ರನ್‌ ಬರಲಿಲ್ಲ. ಹೀಗಾಗಿ ಲಂಕಾ ನಿರಾಸೆಯೊಂದಿಗೆ ಅಭಿಯಾನ ಮುಗಿಸಿತು. 

ಎರಡನೇ ಗುಂಪಿನಲ್ಲಿ ನ್ಯೂಜಿಲೆಂಡ್‌ ತಂಡವು ನೆಟ್‌ ರನ್‌ರೇಟ್‌ ಆಧಾರದಲ್ಲಿ ಎರಡನೇ ಸ್ಥಾನ ಪಡೆದು ಸೆಮಿಫೈನಲ್‌ಗೆ ಮುನ್ನಡೆಯಿತು. ಇದೇ ಗುಂಪಿನಿಂದ ಇಂಗ್ಲೆಂಡ್‌ ತಂಡವು ಹ್ಯಾಟ್ರಿಕ್‌ ಗೆಲುವಿನೊಂದಿಗೆ ಈ ಮೊದಲೇ ನಾಕೌಟ್‌ ಪ್ರವೇಶಿಸಿದೆ. 

ಲಂಕಾ ತಂಡವು ಎರಡನೇ ಓವರ್‌ನಲ್ಲೇ ಆರಂಭಿಕ ಆಟಗಾರ ಪಥುಮ್‌ ನಿಸಾಂಕ (3) ಅವರನ್ನು ಕಳೆದುಕೊಂಡಿತು. ನಂತರದಲ್ಲೂ ಅಬ್ರಾರ್‌ ಅಹ್ಮದ್‌ (23ಕ್ಕೆ 3) ದಾಳಿಗೆ ನಿಯಮಿತವಾಗಿ ವಿಕೆಟ್‌ಗಳು ಉರುಳಿದವು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಪವನ್ ರಥನಾಯಕೆ (58;37ಎ, 4x4, 6x3) ಮತ್ತು ಕೆಳ ಕ್ರಮಾಂಕದಲ್ಲಿ ಶನಕ ದಿಟ್ಟ ಪ್ರತಿರೋಧ ತೋರಿದರು. ಎರಡು ಬೌಂಡರಿ ಮತ್ತು ಎಂಟು ಭರ್ಜರಿ ಸಿಕ್ಸರ್‌ ಬಾರಿಸಿದ ಶನಕ ಕೊನೆಯ 12 ಎಸೆತಗಳಲ್ಲಿ 40 ರನ್‌ ಸೂರೆಗೈದು, ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ, ಅಲ್ಪ ಅಂತರದಿಂದ ಸೋತಿತು. 

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕ್‌ ತಂಡವು ಭರ್ಜರಿ ಆರಂಭ ಪಡೆಯಿತು. ಉತ್ತಮ ಮೊತ್ತ ಗಳಿಸಲು ಆರಂಭದಿಂದಲೇ ಬೀಸಾಟಕ್ಕಿಳಿದ ಫರ್ಹಾನ್ ಮತ್ತು ಜಮಾನ್ ಮೊದಲ ವಿಕೆಟ್‌ಗೆ ದಾಖಲೆಯ 176 ರನ್‌ ಸೇರಿಸಿದರು. ಅದರಿಂದಾಗಿ  8 ವಿಕೆಟ್‌ಗೆ 212 ರನ್‌ ಗಳಿಸಿತು.

ರನ್‌ಗಾಗಿ ಓಡಿದ ಫಖರ್ ಜಮಾನ್ ಮತ್ತು ಸಾಹಿಬ್‌ಝಾದಾ ಫರ್ಹಾನ್ 

ಎಡಗೈ ಬ್ಯಾಟರ್ ಜಮಾನ್ 16ನೇ ಓವರಿನಲ್ಲಿ ಆಫ್‌ಸ್ಟಂಪ್‌ನಾಚೆ ಇದ್ದ ಚೆಂಡನ್ನು ಹೊಡೆಯಲು ಹೋಗಿ ಸ್ಟಂಪ್ಸ್‌ಗೆ ಎಳೆದುಕೊಂಡರು. ಅವರಿಗೆ ಎರಡು ಜೀವದಾನಗಳೂ ದೊರಕಿದ್ದವು. ಈ ಅವಕಾಶಗಳನ್ನು ಜಮಾನ್ ಚೆನ್ನಾಗಿಯೇ ಬಳಸಿಕೊಂಡು 42 ಎಸೆತಗಳಲ್ಲಿ 84 ರನ್ (4x9, 6x4) ಸಿಡಿಸಿದರು.

ಇನ್ನೊಂದು ಕಡೆ ಫರ್ಹಾನ್ ಉತ್ತಮವಾಗಿಯೇ ಆಡಿದರು. ಓವರಿಗೆ ಹತ್ತು ರನ್‌ಗಳ ವೇಗವನ್ನು ಪಾಕ್‌ ಕೊನೆಯವರೆಗೂ ಕಾಪಾಡಿಕೊಂಡು ಬಂದಿತು. ಫರ್ಹಾನ್ ಅವರ 60 ಎಸೆತಗಳ ಇನಿಂಗ್ಸ್‌ನಲ್ಲಿ 9 ಬೌಂಡರಿಗಳ ಜೊತೆ ಐದು ಸಿಕ್ಸರ್‌ಗಳಿದ್ದವು. ಇದು ಅವರಿಗೆ ಈ ವಿಶ್ವಕಪ್‌ನಲ್ಲಿ ಎರಡನೇ ಶತಕ. ಅವರು (323) ಒಂದೇ ಅವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ತಾರೆ ವಿರಾಟ್‌ ಕೊಹ್ಲಿ (319 ರನ್) ದಾಖಲೆ ಮುರಿದರು.

ಜಮಾನ್ ನಿರ್ಗಮನದ ನಂತರ ವಿಕೆಟ್‌ಗಳು ಉದುರಿದವು. ಎಂಟು ವಿಕೆಟ್‌ಗಳು 36 ರನ್ ಅಂತರದಲ್ಲಿ ಉರುಳಿದವು. ಜಮಾನ್– ಫರ್ಹಾನ್‌ ಬಿಟ್ಟರೆ ಉಳಿದ ಯಾರೂ ಎರಡಂಕಿ ಮೊತ್ತ ಗಳಿಸಲಿಲ್ಲ. ಲಂಕಾ ಕಡೆ ಮಧುಶಂಕಾ 33 ರನ್ನಿಗೆ 3 ವಿಕೆಟ್ ಪಡೆದರು.

ಹೊಡೆತವೊಂದನ್ನು ಬಾರಿಸಿದ ಸಾಹಿಬ್‌ಝಾದಾ ಫರ್ಹಾನ್‌ 

ಸ್ಕೋರುಗಳು:

ಪಾಕಿಸ್ತಾನ: 20 ಓವರುಗಳಲ್ಲಿ 8 ವಿಕೆಟ್‌ಗೆ 212 (ಸಾಹಿಬ್‌ಝಾದ ಫರ್ಹಾನ್ 100, ಫಖರ್ ಜಮಾನ್ 84; ಮಧುಶಂಕ 33ಕ್ಕೆ3, ಶನಕ 42ಕ್ಕೆ2). ಶ್ರೀಲಂಕಾ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 207 (ಪವನ್ ರಥನಾಯಕೆ 58, ದಸೂನ್‌ ಶನಕ ಔಟಾಗದೇ 76; ಅಬ್ರಾರ್‌ ಅಹ್ಮದ್‌ 23ಕ್ಕೆ 3). ಪಂದ್ಯದ ಆಟಗಾರ: ಸಾಹಿಬ್‌ಝಾದ ಫರ್ಹಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.