ADVERTISEMENT

ಲಖನೌ ತಂಡಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ; ದುಬಾರಿ ನಾಯಕರ ಮುಖಾಮುಖಿ ಇಂದು

ಲಯಕ್ಕೆ ಮರಳುವ ಒತ್ತಡದಲ್ಲಿ ಪಂತ್

ಪಿಟಿಐ
Published 3 ಮೇ 2025, 22:30 IST
Last Updated 3 ಮೇ 2025, 22:30 IST
<div class="paragraphs"><p>ಲಖನೌ</p></div>

ಲಖನೌ

   

ಚಿತ್ರ: ಪಿಟಿಐ

ಧರ್ಮಶಾಲಾ: ಈ ಸಲದ ಐಪಿಎಲ್ ಮೆಗಾ ಹರಾಜಿನಲ್ಲಿ ಅತ್ಯಂತ ದುಬಾರಿ ಮೌಲ್ಯ ಪಡೆದ ಇಬ್ಬರು ಆಟಗಾರರಾದ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ತಂಡಗಳು ಭಾನುವಾರ ಮುಖಾಮುಖಿಯಾಗಲಿವೆ. 

ADVERTISEMENT

ರಿಷಭ್ ಪಂತ್ ನಾಯಕತ್ವದ ಲಖನೌ ಸೂಪರ್‌ ಜೈಂಟ್ಸ್‌ ತಂಡಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ ಇದಾಗಿದೆ. ಅದೇ ಶ್ರೇಯಸ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಸದ್ಯ ನಾಲ್ಕನೇ ಸ್ಥಾನದಲ್ಲಿದ್ದು ತನ್ನ ಪಾಲಿಗೆ ಉಳಿದಿರುವ ನಾಲ್ಕು ಪಂದ್ಯಗಳ ಪೈಕಿ  ಇನ್ನೆರಡರಲ್ಲಿ ಜಯಿಸಿದರೂ ಪ್ಲೇ ಆಫ್ ಹಾದಿ ಸುಗಮ. 

ಹೋದ ವರ್ಷ ಕೋಲ್ಕತ್ತ ನೈಟ್‌ರೈಡರ್ಸ್ ತಂಡವು ಶ್ರೇಯಸ್ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು. ಅವರು ಈ ಬಾರಿ ₹26.75 ಕೋಟಿ ಮೌಲ್ಯದೊಂದಿಗೆ ಪಂಜಾಬ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬ್ಯಾಟಿಂಗ್‌ನಲ್ಲಿಯೂ ಅಮೋಘ ಲಯದಲ್ಲಿದ್ದಾರೆ. ರನ್‌ಗಳನ್ನು ಹರಿಸಿ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ. ಶಾರ್ಟ್‌ ಪಿಚ್ ಎಸೆತಗಳಿಗೆ ಔಟಾಗುವ ತಮ್ಮ ದೌರ್ಬಲ್ಯವನ್ನು ಸರಿಪಡಿಸಿಕೊಂಡಿರುವ ಶ್ರೇಯಸ್ ಆಟದಲ್ಲಿ ಆತ್ಮವಿಶ್ವಾಸ ಮರುಕಳಿಸಿದೆ. ಬೌಲರ್‌ಗಳಿಗೆ ನಡುಕ ಮೂಡಿಸುತ್ತಿದ್ದಾರೆ. ಇದೀಗ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವುದರಿಂದ ಶ್ರೇಯಸ್ ಅವರ ಮೇಲೆ ಹೊಣೆ ಹೆಚ್ಚಿದೆ.  ಹೊಸ ಪ್ರತಿಭೆಗಳಾದ ಆ್ಯರನ್ ಹಾರ್ಡಿ ಮತ್ತು ಝೇವಿಯರ್ ಬಾರ್ಟಲೆಟ್ ಅವರಲ್ಲಿ  ಒಬ್ಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಉಳಿದಂತೆ ತಂಡದಲ್ಲಿ ಪ್ರಿಯಾಂಶ್ ಆಯರ್, ನೆಹಲ್ ವಧೇರಾ ಮತ್ತು ಶಶಾಂಕ್ ಸಿಂಗ್ ಅವರು ಉತ್ತಮ ಲಯದಲ್ಲಿದ್ದಾರೆ. ಯಜುವೇಂದ್ರ ಚಾಹಲ್ ಅಮೋಘ ಲಯದಲ್ಲಿರುವುದರಿಂದ ಪಂಜಾಬ್ ತಂಡದ ಬಲ ದುಪ್ಪಟ್ಟಾಗಿದೆ. 

ಆದರೆ ₹ 27 ಕೋಟಿ ಮೌಲ್ಯ ಪಡೆದು ಲಖನೌ ತಂಡವನ್ನು ಸೇರಿರುವ ರಿಷಭ್ ಬ್ಯಾಟಿಂಗ್ ಮಾತ್ರ ರಂಗೇರಿಲ್ಲ. ಇಡೀ ಟೂರ್ನಿಯಲ್ಲಿ ಅವರು ಒಂದು ಅರ್ಧಶತಕ ಮಾತ್ರ ಹೊಡೆದಿದ್ದಾರೆ. ಅವರ ನಾಯಕತ್ವದ ತಂಡವು ಆಡಿರುವ ಹತ್ತು ಪಂದ್ಯಗಳಲ್ಲಿ ಸಿಹಿ–ಕಹಿಯನ್ನು ಸಮಪ್ರಮಾಣದಲ್ಲಿ ಉಂಡಿದೆ. 

ಈಗ ಉಳಿದಿರುವ ನಾಲ್ಕು ಪಂದ್ಯಗಳಲ್ಲಿ ಸತತ ಜಯ ಸಾಧಿಸಿ ಪ್ಲೇ ಆಫ್‌ ಸ್ಥಾನ ಪಡೆಯಬೇಕು. ರಿಷಭ್ ಲಯಕ್ಕೂ ಮರಳಬೇಕು. ತಂಡದಲ್ಲಿರುವ ನಿಕೊಲಸ್ ಪೂರನ್‌ (377 ರನ್), ಮಿಚೆಲ್ ಮಾರ್ಷ್ (344) ಮತ್ತು ಏಡನ್ ಮರ್ಕರಂ (326) ಅವರು ತಮ್ಮ ಅಬ್ಬರ ಮುಂದುವರಿಸಿದರೆ ಮಾತ್ರ ದೊಡ್ಡ ಮೊತ್ತ ಸಾಧ್ಯವಾಗಲಿದೆ. 

ವೇಗಿ ಆವೇಶ್ ಖಾನ್ ಅವರು ಸತತವಾಗಿ ತಂಡಕ್ಕೆ ನೆರವಾಗುತ್ತಿದ್ದಾರೆ. ಮಯಂಕ್ ಯಾದವ್ ಅವರ ಎಸೆತಗಳಲ್ಲಿ ಮೊದಲಿನ ವೇಗವಿಲ್ಲ. ಆದರೆ ಮುಂಬೈ ಎದುರಿನ ಪಂದ್ಯದಲ್ಲಿ 2 ವಿಕೆಟ್ ಗಳಿಸಿದ್ದು ಭರವಸೆ ಮೂಡಿಸಿದ್ದಾರೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್

ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್‌  –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.