ADVERTISEMENT

ಹೊರಗಿನವರಿಗೇನು ಗೊತ್ತು ಅಂಗಣದೊಳಗಿನ ವಿಷಯ- ಟೀಕೆಗಳಿಗೆ ವಿರಾಟ್ ಕೊಹ್ಲಿ ತಿರುಗೇಟು

ಡಿಆರ್‌ಎಸ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 4:51 IST
Last Updated 15 ಜನವರಿ 2022, 4:51 IST
ಡೀನ್ ಎಲ್ಗರ್ ಮತ್ತು ವಿರಾಟ್ ಕೊಹ್ಲಿ
ಡೀನ್ ಎಲ್ಗರ್ ಮತ್ತು ವಿರಾಟ್ ಕೊಹ್ಲಿ   

ಕೇಪ್‌ಟೌನ್: ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ವಿಕೆಟ್‌ ಬಗ್ಗೆ ಅಂಪೈರ್ತೀರ್ಪು ಮರುಪರಿಶೀಲನಾ ವ್ಯವಸ್ಥೆಯ ತೀರ್ಪಿನ ಕುರಿತು ಸ್ಥಳೀಯ ಪ್ರಸಾರಕರ ವಿರುದ್ಧ ತಮ್ಮ ತಂಡದ ಆಟಗಾರರು ನಡೆಸಿದ ವಾಗ್ದಾಳಿಯನ್ನು ವಿರಾಟ್ ಕೊಹ್ಲಿ ಸಮರ್ಥಿಸಿಕೊಂಡಿದ್ದಾರೆ.

‘ಆಟದ ಅಂಗಳದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಹೊರಗಿನವರಿಗೆ ಸ್ಪಷ್ಟವಾಗಿ ಗೊತ್ತಿರುವುದಿಲ್ಲ. ಆದರೆ ಆಟದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿರುವ ನಮಗೆ ವಿಷಯ ಆಳವಾಗಿ ಅರಿವಿರುತ್ತದೆ’ ಎಂದು ವಿರಾಟ್ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನ್ಯೂಲ್ಯಾಂಡ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದ ಮೂರನೇ ದಿನದಾಟದಲ್ಲಿ ಡೀನ್ ಎಲ್ಗರ್ ಎಲ್‌ಬಿಡಬ್ಲ್ಯು ಆಗಿದ್ದನ್ನು ಫೀಲ್ಡ್ ಅಂಪೈರ್ ಔಟ್ ನೀಡಿದ್ದರು. ಆದರೆ, ಡೀನ್ ಪಡೆದ ಡಿಆರ್‌ಎಸ್‌ನಲ್ಲಿ ನಾಟ್‌ಔಟ್ ತೀರ್ಪು ಬಂದಾಗ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ಸ್ಟಂಪ್‌ ಮೈಕ್ ಬಳಿ ಸಾಗಿ ಪ್ರಸಾರಕರನ್ನು ಟೀಕಿಸಿದ್ದರು.

ADVERTISEMENT

’11 ಆಟಗಾರರ ವಿರುದ್ಧ ಇಡೀ ದೇಶವೇ ನಿಂತಿದೆ’ ಎಂದು ರಾಹುಲ್ ಕೂಗಿದ್ದರು. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಕೊಹ್ಲಿಯ ನಡವಳಿಕೆ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.

‘ಪಂದ್ಯದ ಆ ಹಂತದಲ್ಲಿ ನಾವು ಎರಡು–ಮೂರು ವಿಕೆಟ್‌ಗಳನ್ನು ಗಳಿಸಿದ್ದರೆ ಗೆಲುವಿನ ಅವಕಾಶ ಉಳಿಯುತ್ತಿತ್ತು.ಆದರೆ ಪಂದ್ಯದ ದಿಕ್ಕು ಬದಲಿಸುವ ಆ ಅವಕಾಶ ನಮ್ಮ ಕೈತಪ್ಪಿತು’ ಎಂದರು.

ಇನಿಂಗ್ಸ್‌ನ 21ನೇ ಓವರ್‌ನಲ್ಲಿ ಅಶ್ವಿನ್ ಎಸೆತವು ಲೈನ್ ಮೇಲೆ ಪಿಚ್ ಪುಟಿದು ಎಲ್ಗರ್ ಬ್ಯಾಟ್‌ಗೆ ಸ್ಪರ್ಶಿಸದೇ ಪ್ಯಾಡ್‌ಗೆ ತಗುಲಿತ್ತು. ಅಂಪೈರ್ ಮರಾಯಸ್ ಯರ್‌ಸ್ಮಸ್ ಔಟ್ ಕೂಡ ನೀಡಿದ್ದರು. ಆದರೆ ಹಾಕ್‌ ಕೀ ತಂತ್ರಜ್ಞಾನದಲ್ಲಿ ಚೆಂಡು ಬೇಲ್ಸ್‌ಗೆ ತಗುಲದೇ ಮೇಲಿಂದ ಸಾಗುವುದು ಕಂಡುಬಂತು. ಆದ್ದರಿಂದ ನಾಟೌಟ್ ನೀಡಲಾಯಿತು.

ಹಾಕ್‌ ಕೀ ವಿಡಿಯೊ ತುಣುಕನ್ನು ಮೂರನೇ ಅಂಪೈರ್‌ಗೆ ಸರಣಿಯ ಅಧಿಕೃತ ಪ್ರಸಾರಕರು ಒದಗಿಸುತ್ತಾರೆ. ಇದಕ್ಕೆ ಐಸಿಸಿಯ ಮಾನ್ಯತೆ ಇದೆ. ಆದ್ದರಿಂದಲೇ ಕೊಹ್ಲಿ ಪಡೆಯ ಸಿಟ್ಟು ಪ್ರಸಾರಕರತ್ತ ತಿರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.