ADVERTISEMENT

ತಂಡದಲ್ಲಿ ಸ್ಥಾನಕ್ಕಾಗಿ ₹ 80 ಲಕ್ಷ ತೆತ್ತರು!

ಮೂರು ರಾಜ್ಯಗಳ ರಣಜಿ ತಂಡಗಳಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿ ಮೋಸ

ಪಿಟಿಐ
Published 14 ಮಾರ್ಚ್ 2019, 20:03 IST
Last Updated 14 ಮಾರ್ಚ್ 2019, 20:03 IST
   

ನವದೆಹಲಿ: ರಣಜಿ ತಂಡಗಳಲ್ಲಿ ಸ್ಥಾನ ನೀಡುವ ಭರವಸೆ ನೀಡಿ ದೆಹಲಿಯ ಮೂವರು ಆಟಗಾರರಿಂದ ಒಟ್ಟು ₹ 80 ಲಕ್ಷ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಬಿಸಿಸಿಐ ಪೊಲೀಸರಿಗೆ ದೂರು ಸಲ್ಲಿಸಿದೆ.

ಕನಿಷ್ಕ್‌ ಗೌರ್‌, ಕಿಶನ್ ಅತ್ರಿ ಮತ್ತು ಶಿವಂ ಶರ್ಮಾ ಅವರಿಗೆ ಆಮಿಷ ಒಡ್ಡಲಾಗಿದ್ದು ಹಣ ಪಡೆದ ನಂತರ ನಕಲಿ ಆಯ್ಕೆ ಪತ್ರವನ್ನೂ ನೀಡಲಾಗಿದೆ. ನಾಗಾಲ್ಯಾಂಡ್‌, ಮಣಿಪುರ ಮತ್ತು ಜಾರ್ಖಂಡ್‌ ತಂಡಗಳಲ್ಲಿ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಈ ಕುರಿತು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಪ್ರಾದೇಶಿಕ ವ್ಯವಸ್ಥಾಪಕ ಅಂಶುಮನ್ ಉಪಾಧ್ಯಾಯ ದೂರು ದಾಖಲಿಸಿದ್ದಾರೆ.

ಕೋಚ್‌ ಒಬ್ಬರು ತನ್ನನ್ನು ಸಂಪರ್ಕಿಸಿ ನಾಗಾಲ್ಯಾಂಡ್ ತಂಡದಲ್ಲಿ ಅತಿಥಿ ಆಟಗಾರನಾಗಿ ಆಡಲು ಅವಕಾಶ ನೀಡುವುದಾಗಿ ಹೇಳಿದ್ದರು. ನಂತರ ನಾಗಾಲ್ಯಾಂಡ್‌ ತಂಡದ ಕೊಚ್‌ಗೆ ಪರಿಚಯ ಮಾಡಿಸಿ ಐದು ಪಂದ್ಯಗಳಲ್ಲಿ ಆಡಲು ₹ 15 ಲಕ್ಷ ಪಡೆದುಕೊಂಡರು ಎಂದು ಕನಿಷ್ಕ್‌ ಗೌರ್‌ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ADVERTISEMENT

‘19 ವರ್ಷದೊಳಗಿನವರ ತಂಡದಲ್ಲಿ ಎರಡು ಪಂದ್ಯಗಳನ್ನು ಆಡಿದ ನಂತರ ಆಯ್ಕೆ ಪತ್ರ ನಕಲಿ ಎಂದು ಹೇಳಿ ವಾಪಸ್ ಕಳುಹಿಸಲಾಯಿತು ಎಂದು ಗೌರ್‌ ಹೇಳಿಕೆ ನೀಡಿದ್ದಾರೆ. ಕೋಚ್‌ ಒಳಗೊಂಡು 11 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.