ADVERTISEMENT

ಕಡಿಮೆ ಅವಕಾಶಗಳಲ್ಲಿ ಹೆಚ್ಚು ಸಾಧನೆ: ವಿರಾಟ್ ಕಿವಿಮಾತು

ಧರ್ಮಶಾಲಾದಲ್ಲಿ ಮಳೆಯಲ್ಲಿ ಮುಳುಗಿದ ಮೊದಲ ಪಂದ್ಯ

ಪಿಟಿಐ
Published 15 ಸೆಪ್ಟೆಂಬರ್ 2019, 20:01 IST
Last Updated 15 ಸೆಪ್ಟೆಂಬರ್ 2019, 20:01 IST
   

ಧರ್ಮಶಾಲಾ: ಮುಂದಿನ ವರ್ಷ ಟ್ವೆಂಟಿ–20 ವಿಶ್ವಕಪ್ ಟೂರ್ನಿ ನಡೆಯಲಿದೆ. ಆದ್ದರಿಂದ ಇದೀಗ ತಂಡದಲ್ಲಿ ಸ್ಥಾನ ಪಡೆದಿರುವ ಯುವ ಆಟಗಾರರು ತಮಗೆ ಸಿಗುವ 4–5 ಅವಕಾಶಗಳಲ್ಲಿಯೇ ಸಾಮರ್ಥ್ಯ ಸಾಬೀತು ಮಾಡಿ ಸ್ಥಾನ ಭದ್ರಪಡಿಸಿಕೊಳ್ಳಬೇಕು ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು.

ಭಾನುವಾರ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ಎದುರಿನ ಟ್ವೆಂಟಿ–20 ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಈ ಸಂದರ್ಭದಲ್ಲಿ ಅವರು ಸ್ಟಾರ್‌ ಸ್ಪೋರ್ಟ್ಸ್‌ಗೆ ಸಂದರ್ಶನ ನೀಡಿದರು.

‘ವಿಶ್ವ ಟಿ20 ಟೂರ್ನಿಗಿಂತ ಮುನ್ನ ಹೆಚ್ಚೆಂದರೆ ನಮ್ಮ ತಂಡಕ್ಕೆ 30 ಪಂದ್ಯಗಳಲ್ಲಿ ಆಡುವ ಅವಕಾಶ ಇದೆ. ಆದ್ದರಿಂದ ಒಬ್ಬರಿಗೆ ನಾಲ್ಕೈದು ಪಂದ್ಯಗಳಲ್ಲಿ ಅವಕಾಶ ಸಿಗಬಹುದು. ಅದರಲ್ಲಿಯೇ ಅವರು ತಮ್ಮ ಪ್ರತಿಭೆ ಅನಾವರಣ ಮಾಡಬೇಕು’ ಎಂದರು.

ADVERTISEMENT

‘ತಂಡಕ್ಕೆ ಆಯ್ಕೆಯಾದವರು ತಮಗೆ ಸಿಗುವ ಅಲ್ಪ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಮಾನಸಿಕವಾಗಿ ಗಟ್ಟಿಯಾಗಿಯೇ ಬರಬೇಕು. ಈಗ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಕೂಡ ನಡೆಯುತ್ತಿದೆ. ಆದ್ದರಿಂದ ಎರಡೂ ಮಾದರಿಗಳಲ್ಲಿ ಆಡುವವರು ಹೆಚ್ಚು ಶ್ರಮ ವಹಿಸಿ ತಮ್ಮ ಸ್ಥಾನ ಕಾಪಾಡಿಕೊಳ್ಳಬೇಕು. ಇದು ಅನಿವಾರ್ಯವೂ ಕೂಡ’ ಎಂದು ಹೇಳಿದರು.

ಮಳೆಯಿಂದ ರದ್ದು: ಮೂರು ಟ್ವೆಂಟಿ–20 ಪಂದ್ಯಗಳ ಟೂರ್ನಿಯ ಮೊದಲ ಹಣಾಹಣಿಯು ಒಂದೂ ಎಸೆತ ಕಾಣದೆ ರದ್ದಾಯಿತು.

ಭಾನುವಾರ ಮಧ್ಯಾಹ್ನದಿಂದಲೇ ಮಳೆ ಶುರುವಾಯಿತು. ಮಧ್ಯ ಸ್ವಲ್ಪ ಸ್ಥಗಿತವಾಯಿತು. ಆದರೆ ಸಂಜೆ 5.30ರ ನಂತರ ಸುರಿದ ಮಳೆಯಿಂದಾಗಿ ಮೈದಾನದಲ್ಲಿ ಬಹಳಷ್ಟು ನೀರು ನಿಂತಿತು. ರಾತ್ರಿ ಎಂಟು ಗಂಟೆಯವರೆಗೂ ಕಾದ ಅಂಪೈರ್‌ಗಳು ಪಂದ್ಯ ಸ್ಥಗಿತಗೊಳಿಸಿದರು.

ಪಂದ್ಯ ನೋಡಲು ಬಂದಿದ್ದ ಅಭಿಮಾನಿಗಳು ನಿರಾಶೆಯಿಂದ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.