ADVERTISEMENT

ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಗೆ ಪಿಎಂ ಬಾಲ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 10:33 IST
Last Updated 26 ಡಿಸೆಂಬರ್ 2025, 10:33 IST
<div class="paragraphs"><p>ವೈಭವ್‌ ಸೂರ್ಯವಂಶಿ ಅವರಿಗೆ&nbsp;ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರದಾನ ಮಾಡಿದ&nbsp;ರಾಷ್ಟ್ರಪತಿ ದ್ರೌಪದಿ ಮುರ್ಮು </p></div>

ವೈಭವ್‌ ಸೂರ್ಯವಂಶಿ ಅವರಿಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

   

ನವದೆಹಲಿ: ಭಾರತದ ಉದಯೋನ್ಮುಖ ಕ್ರಿಕೆಟಿಗ, 14 ವರ್ಷದ ವೈಭವ್‌ ಸೂರ್ಯವಂಶಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಶುಕ್ರವಾರ) ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಆರ್‌ಬಿಪಿ) ಪ್ರದಾನ ಮಾಡಿದ್ದಾರೆ.‌

'ವೀರ ಬಾಲ ದಿವಸ'ದ (ಡಿ.26) ಅಂಗವಾಗಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸೂರ್ಯವಂಶಿ ಮಾತ್ರವಲ್ಲದೆ ಶೌರ್ಯ, ಸಮಾಜ ಸೇವೆ, ಪರಿಸರ, ಕ್ರೀಡೆ, ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಒಟ್ಟು 20 ಮಕ್ಕಳಿಗೆ ಬಾಲ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ADVERTISEMENT

ದೇಶೀಯ ಕ್ರಿಕೆಟ್‌ನಲ್ಲಿ ಬಿಹಾರವನ್ನು ಪ್ರತಿನಿಧಿಸುವ ವೈಭವ್‌, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಆಡಿದ ಅತಿ ಕಿರಿಯ ಆಟಗಾರ ಹೆಗ್ಗಳಿಕೆಗೆ (2025) ಭಾಜನರಾಗಿದ್ದಾರೆ.

ಐಪಿಎಲ್‌ಗೆ ಪದಾರ್ಪಣೆ ಮಾಡುವ ಮೊದಲು, ಆಸ್ಟ್ರೇಲಿಯಾ 19 ವರ್ಷದೊಳಗಿನವರ ತಂಡದ ವಿರುದ್ಧ ನಡೆದ ನಾಲ್ಕು ದಿನಗಳ ಪಂದ್ಯದಲ್ಲಿ ಕೇವಲ 58 ಎಸೆತಗಳಲ್ಲೇ ಶತಕ ಸಿಡಿಸಿದ್ದರು. 2024ರಲ್ಲಿ ನಡೆದ ಯುವ ಏಷ್ಯಾಕಪ್‌ನಲ್ಲಿ ಎರಡು ಅರ್ಧಶತಕ ಬಾರಿಸಿದ್ದರು.

ಇದೇ ವರ್ಷ ನಡೆದ 19 ವರ್ಷದೊಳಗಿನವರ ಏಷ್ಯಾಕಪ್‌ ಟೂರ್ನಿಯಲ್ಲೂ ಮಿಂಚಿದ್ದರು. ಬಿರುಸಿನ ಬ್ಯಾಟಿಂಗ್‌ ಮೂಲಕ ಸಂಚಲನ ಮೂಡಿಸಿರುವ ಅವರು, ಭರವಸೆಯ ಆಟಗಾರ ಎನಿಸಿದ್ದಾರೆ.

16ನೇ ವಯಸ್ಸಿಗೆ ಟೀಂ ಇಂಡಿಯಾ ಪರ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಾರ್ಪಣೆ ಮಾಡಿದ್ದ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರಂತೆ ವೈಭವ್‌ ಕೂಡ ಸಾಧನೆ ಮಾಡಲಿದ್ದಾರೆ ಎಂಬ ಅಭಿಪ್ರಾಯ ಕ್ರಿಕೆಟ್‌ ವಲಯದಲ್ಲಿ ವ್ಯಕ್ತವಾಗಿದೆ.

₹ 1.1 ಕೋಟಿಗೆ ಹರಾಜು

2025ರ ಐಪಿಎಲ್‌ ಲೀಗ್‌ಗೂ ಮುನ್ನ ನಡೆದ ಹರಾಜಿನಲ್ಲಿ ವೈಭವ್‌ ಬರೋಬ್ಬರಿ ₹ 1.1 ಕೋಟಿ ಜೇಬಿಗಿಳಿಸಿಕೊಂಡಿದ್ದರು. ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸ್‌ ಅವರನ್ನು ಖರೀದಿಸಿತ್ತು. ಆಗ ವೈಭವ್‌ ವಯಸ್ಸು ಕೇವಲ 13!

2026ರ ಆವೃತ್ತಿಗೂ ಮುನ್ನ ಕೆಲವು ಆಟಗಾರರನ್ನು ಹರಾಜಿಗೆ ಬಿಡುಗಡೆ ಮಾಡಿದ್ದ ರಾಯಲ್ಸ್‌, ವೈಭವ್‌ಗೆ ಹಿಂದಿನ ವರ್ಷ ನೀಡಿದ್ದಷ್ಟೇ ಮೊತ್ತ ನೀಡಿ ತನ್ನಲ್ಲೇ ಉಳಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.