ADVERTISEMENT

KKR vs LSG ಪಂದ್ಯ ಮುಂದೂಡಿ: ಬಂಗಾಳ ಕ್ರಿಕೆಟ್ ಸಂಸ್ಥೆಗೆ ಕೋಲ್ಕತ್ತ ಪೊಲೀಸ್ ಮನವಿ

ಪಿಟಿಐ
Published 19 ಮಾರ್ಚ್ 2025, 13:38 IST
Last Updated 19 ಮಾರ್ಚ್ 2025, 13:38 IST
   

ಕೋಲ್ಕತ್ತ: ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಏಪ್ರಿಲ್‌ 6ರಂದು ನಿಗದಿಯಾಗಿರುವ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ಹಾಗೂ ಲಖನೌ ಸೂಪರ್‌ ಜೈಂಟ್ಸ್‌ (ಎಲ್‌ಎಸ್‌ಜಿ) ಪಂದ್ಯವನ್ನು ಮುಂದೂಡುವಂತೆ ಪೊಲೀಸರು, ಬಂಗಾಳ ಕ್ರಿಕೆಟ್‌ ಸಂಸ್ಥೆಗೆ (ಸಿಎಬಿ) ತಿಳಿಸಿದ್ದಾರೆ. ಅದೇ ದಿನ, ನಗರದಾದ್ಯಂತ ರಾಮನವಮಿ ಸಂಭ್ರಮಾಚರಣೆ ಇರುವುದರಿಂದ ಭದ್ರತೆ ದೃಷ್ಟಿಯಿಂದ ಪೊಲೀಸರು ಮನವಿ ಮಾಡಿದ್ದಾರೆ.

'ರಾಮನವಮಿ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗುವುದು, ಏಪ್ರಿಲ್‌ 6ರಂದು ನಿಗದಿಯಾಗಿರುವ ಐಪಿಎಲ್‌ ಪಂದ್ಯವನ್ನು ಮರುನಿಗದಿ ಮಾಡುವಂತೆ ಸಿಎಬಿಗೆ ಮನವಿ ಮಾಡಿ ಪತ್ರ ಬರೆದಿದ್ದೇವೆ. ನಮಗೆ ಇನ್ನಷ್ಟೇ ಪ್ರತಿಕ್ರಿಯೆ ಬರೆಬೇಕಿದೆ' ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಗರ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದ ಸಿಎಬಿ ಅಧ್ಯಕ್ಷ ಸ್ನೇಹಶೀಶ್‌ ಗಂಗೂಲಿ, 'ನಿಗದಿಯಂತೆ ಪಂದ್ಯ ನಡಸಲು ಅಧಿಕಾರಿಗಳಿಂದ ಅನುಮತಿ ದೊರೆತಿಲ್ಲ' ಎಂದು ಹೇಳಿದ್ದರು.

ADVERTISEMENT

'ಪೊಲೀಸರು ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಸಾಧ್ಯವಾಗದು ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರ ಭದ್ರತೆ ಇಲ್ಲದಿದ್ದರೆ, 65,000 ಪ್ರೇಕ್ಷಕರ ನಿರ್ವಹಣೆ, ರಕ್ಷಣೆ ಅಸಾಧ್ಯ' ಎಂದಿದ್ದರು.

ಈ ಬಗ್ಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮಾಹಿತಿ ನೀಡಲಾಗಿದೆ ಎಂದೂ ತಿಳಿಸಿದ್ದರು.

ಕಳೆದ ಆವೃತ್ತಿ ವೇಳೆಯೂ, ಒಂದು (ಕೋಲ್ಕತ್ತ vs ರಾಜಸ್ಥಾನ ರಾಯಲ್ಸ್‌) ಪಂದ್ಯ ಇದೇ ಕಾರಣಕ್ಕೆ ಮರುನಿಗದಿಯಾಗಿತ್ತು.

ರಾಮನವಮಿ ದಿನದಂದು ಪಶ್ಚಿಮ ಬಂಗಾಳದಾದ್ಯಂತ 20,000ಕ್ಕೂ ಹೆಚ್ಚು ಮೆರವಣಿಗೆ ನಡೆಸಲಾಗುವುದು ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಈಗಾಗಲೇ ಹೇಳಿದ್ದಾರೆ. ಹೀಗಾಗಿ, ಪೊಲೀಸರು ರಾಜ್ಯದಾದ್ಯಂತ ಕಟ್ಟೆಚ್ಚರಕ್ಕೆ ಕ್ರಮ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.