ಪ್ರಜ್ಞಾನಂದ
(ಪಿಟಿಐ ಚಿತ್ರ)
ಲಾಸ್ ವೇಗಸ್: ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸಬ್ ಮತ್ತು ಭಾರತದ ಆರ್.ಪ್ರಜ್ಞಾನಂದ ಅವರು 16 ಆಟಗಾರರ ಭಾಗಹಿಸಲಿರುವ ಫ್ರೀಸ್ಟೈಲ್ ಚೆಸ್ ಟೂರ್ನಿಯ ಒಂದೇ ಗುಂಪಿನಲ್ಲಿದ್ದಾರೆ. ಭಾರತದ ಅರ್ಜುನ್ ಇರಿಗೇಶಿ ಮತ್ತು ವಿದಿತ್ ಎಸ್.ಗುಜರಾತಿ ಇನ್ನೊಂದು ಗುಂಪಿನಲ್ಲಿ ಜೊತೆಯಾಗಿದ್ದಾರೆ. ಈ ಟೂರ್ನಿಗೆ ಬುಧವಾರ ತಡರಾತ್ರಿ ಚಾಲನೆ ದೊರೆಯಿತು.
ನಾರ್ವೆಯ ದಿಗ್ಗಜ ಆಟಗಾರ ಕಾರ್ಲ್‌ಸನ್ ಮತ್ತೊಮ್ಮೆ ಈ ಟೂರ್ನಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದಾರೆ. ಈ ಟೂರ್ನಿಗೆ ಪೂರ್ವಭಾವಿಯಾಗಿ ಆಕರ್ಷಣೆ ಹೆಚ್ಚಿಸಲು ಪ್ರಿ ಇವೆಂಟ್‌ನಲ್ಲಿ ಎನ್‌ಬಿಎ ಆಟಗಾರರನ್ನು ಒಳಗೊಳಿಸಲಾಯಿತು.
ಟೂರ್ನಿಯು ಒಟ್ಟು ಸುಮಾರು ₹6.5 ಕೋಟಿ ಬಹುಮಾನ ಮೊತ್ತ ಹೊಂದಿದೆ. ಇದರಲ್ಲಿ ₹1.72 ಕೋಟಿ ಬಹುಮಾನ ಹಣ ವಿಜೇತ ಆಟಗಾರನ ಜೇಬಿಗಿಳಿಯಲಿದೆ.
ಇನ್ನೊಂದು ತಿಂಗಳಲ್ಲಿ ನಡೆಯುವ ಗ್ರ್ಯಾಂಡ್‌ಮಾಸ್ಟರ್ಸ್ ಟೂರ್ನಿಯಲ್ಲಿ ಆಡಲು ಸಜ್ಜಾಗಲು ಡಿ.ಗುಕೇಶ್ ಅವರು ಲಾಸ್‌ವೇಗಸ್ ಟೂರ್ನಿಯಲ್ಲಿ ಆಡದಿರಲು ತೀರ್ಮಾನಿಸಿದ್ದಾರೆ.
19 ವರ್ಷ ವಯಸ್ಸಿನ ಪ್ರಜ್ಞಾನಂದ ತಮ್ಮ ಮೊದಲ ಪಂದ್ಯದಲ್ಲಿ ಉಜ್ಬೇಕಿಸ್ತಾನದ ನದಿರ್ಬೆಕ್ ಅಬ್ದುಸತ್ತಾರೋವ್ ಅವರನ್ನು ಎದುರಿಸಲಿದ್ದಾರೆ. ಕಾರ್ಲ್‌ಸನ್ ಅವರ ಮೊದಲ ಸುತ್ತಿನ ಎದುರಾಳಿ ಈ ಟೂರ್ನಿಯ ಮೊದಲ ಆವೃತ್ತಿಯ ವಿಜೇತರಾದ ಜರ್ಮನಿಯ ವಿನ್ಸೆಂಟ್ ಕೀಮರ್.
ಮೊದಲ ಸಲ ಫ್ರೀಸ್ಟೈಲ್ ಚೆಸ್‌ನಲ್ಲಿ ಭಾಗವಹಿಸುತ್ತಿರುವ ಅಮೆರಿಕದ ಹ್ಯಾನ್ಸ್ ನೀಮನ್ ತಮ್ಮ ಮೊದಲ ಪಂದ್ಯವನ್ನು ಭಾರತದ ಅರ್ಜುನ್ ಇರಿಗೇಶಿ ವಿರುದ್ಧ ಆಡುವರು.
ಗುಜರಾತಿ ಅವರು ಅಮೆರಿಕದ ಫ್ಯಾಬಿಯಾನೊ ಕರುವಾನ ಅವರನ್ನು ಎದುರಿಸಲಿದ್ದಾರೆ. ಮೊದಲ ಸಲ ಟೂರ್ನಿಯಲ್ಲಿ ಮಹಿಳಾ ಆಟಗಾರ್ತಿ –ಕಜಕಸ್ತಾನದ ಬಿಬಿಸಾರಾ ಅಸ್ಸುಬಯೇವಾ ಅವರು ಕಣಕ್ಕಿಳಿದಿದ್ದಾರೆ.
ಫಿಷರ್ ರ‍್ಯಾಂಡಮ್ ಚೆಸ್ ಅಥವಾ ಚೆಸ್ 360ಗೆ ಫ್ರೀಸ್ಟೈಲ್ ಚೆಸ್ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಈ ಆಟ ಆರಂಭಿಸುವಾಗ ಎರಡೂ ಕಡೆ ಮೊದಲ ಸಾಲಿನಲ್ಲಿ ಪಡೆಗಳು ಅನುಕ್ರಮವಾಗಿ (ಸಾಂಪ್ರದಾಯಿಕ ಚೆಸ್ ಕ್ರಮದಲ್ಲಿರುವ ಹಾಗೆ) ಇರುವುದಿಲ್ಲ.
ಹೀಗಾಗಿ ಸಿದ್ಧಾಂತದ ಆಟಕ್ಕಿಂತ ಇದು ಭಿನ್ನವಾಗಿ ಜನಪ್ರಿಯತೆ ಪಡೆದಿದೆ. ಆರಂಭದಲ್ಲೇ ನೀರಸ ಡ್ರಾಗಳು ಇಲ್ಲಿ ನಡೆಯುವುದಿಲ್ಲ. ಪಂದ್ಯಗಳು ಹೋರಾಟದಿಂದ ಕೂಡಿರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.