ADVERTISEMENT

'ಮ್ಯಾಜಿಕ್ ಬಾಲ್'ಎಸೆಯುವ ಸಾಮರ್ಥ್ಯ;ಕನ್ನಡಿಗ ಪ್ರಸಿದ್ಧಗೆ ಬೌಲಿಂಗ್ ಕೋಚ್ ಪ್ರಶಂಸೆ

ಪಿಟಿಐ
Published 4 ಆಗಸ್ಟ್ 2025, 5:51 IST
Last Updated 4 ಆಗಸ್ಟ್ 2025, 5:51 IST
<div class="paragraphs"><p>ಪ್ರಸಿದ್ಧ ಕೃಷ್ಣ</p></div>

ಪ್ರಸಿದ್ಧ ಕೃಷ್ಣ

   

(ರಾಯಿಟರ್ಸ್ ಚಿತ್ರ)

ಲಂಡನ್: ಕನ್ನಡಿಗ ಪ್ರಸಿದ್ಧ ಕೃಷ್ಣ 'ಮ್ಯಾಜಿಕ್ ಬಾಲ್' ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಪ್ರಶಂಶಿಸಿದ್ದಾರೆ.

ADVERTISEMENT

ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಪಂದ್ಯ ಭಾರತದ ಕೈಯಿಂದ ಜಾರಿತ್ತು ಎನ್ನುವಷ್ಟರಲ್ಲಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದ ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಪಂದ್ಯಕ್ಕೆ ಮಹತ್ವದ ತಿರುವು ನೀಡುವಲ್ಲಿ ಯಶಸ್ವಿಯಾಗಿದ್ದರು.

ಮೊದಲು ಜೇಕಬ್ ಬೆಥೆಲ್ ಕ್ಲೀನ್ ಬೌಲ್ಡ್ ಮಾಡಿದ ಪ್ರಸಿದ್ಧ ಬಳಿಕ ಶತಕ ಗಳಿಸಿ ಕ್ರೀಸಿನಲ್ಲಿ ನೆಲೆಯೂರಿ ನಿಂತಿದ್ದ ಜೋ ರೂಟ್ ಅವರನ್ನು ಅದ್ಭುತ ಎಸೆತದ ಮೂಲಕ ಪೆವಿಲಿಯನ್‌ಗೆ ಅಟ್ಟಿದರು. ಇದಕ್ಕೂ ಮೊದಲು ಬೆನ್ ಡಕೆಟ್ ವಿಕೆಟ್ ಸಹ ಪಡೆದಿದ್ದರು.

ಇಂಗ್ಲೆಂಡ್ ಗೆಲುವಿಗೆ ಇನ್ನು ನಾಲ್ಕು ವಿಕೆಟ್ ಇರುವಂತೆಯೇ 35 ರನ್ ಮಾತ್ರ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸಿದ್ಧ ಮಗದೊಮ್ಮೆ ಮೋಡಿ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಪ್ರಸಿದ್ಧ 62 ರನ್ನಿಗೆ ನಾಲ್ಕು ವಿಕೆಟ್ ಪಡೆದಿದ್ದರು.

'ಸಿರಾಜ್ ಅವರಂತೆಯೇ ಪ್ರಸಿದ್ಧ ಕೂಡ ಈ ಪ್ರವಾಸದಲ್ಲಿ ಆತ್ಮವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಥಮ ಟೆಸ್ಟ್‌ನಿಂದ ಇಲ್ಲಿಯವರೆಗೆ ಅವರ ಲೈನ್, ಲೆನ್ತ್ ಹಾಗೂ ಸ್ಥಿರತೆ ಗಮನಿಸಿದರೆ ಬಹಳಷ್ಟು ಸುಧಾರಣೆ ಕಂಡುಬಂದಿದೆ. ಅವರು ಭಾರತಕ್ಕೆ ಉತ್ತಮ ಟೆಸ್ಟ್ ಬೌಲರ್ ಆಗಬಲ್ಲರು ಎಂದು ನಾನು ಭಾವಿಸುತ್ತೇನೆ' ಎಂದು ಮಾರ್ಕೆಲ್ ಹೇಳಿದ್ದಾರೆ.

'ಪ್ರಸಿದ್ಧ ಅವರಿಗೆ ಹೆಚ್ಚಿನ ಆತ್ಮವಿಶ್ವಾಸ ತುಂಬಬೇಕಿದೆ. ಹೆಚ್ಚುವರಿ ಬೌನ್ಸ್ ಹಾಗೂ ವೇಗದೊಂದಿಗೆ ಮ್ಯಾಜಿಕ್ ಬಾಲ್ ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ' ಎಂದು ಅವರು ಉಲ್ಲೇಖಿಸಿದ್ದಾರೆ.

ಪ್ರಸಿದ್ಧ ಕೃಷ್ಣ

ಮತ್ತೊಂದೆಡೆ ಎಲ್ಲ ಐದು ಟೆಸ್ಟ್ ಪಂದ್ಯಗಳಲ್ಲಿ ಭಾರತದ ಬೌಲಿಂಗ್ ವಿಭಾಗವನ್ನು ಮುನ್ನಡೆಸಿರುವ ಮೊಹಮ್ಮದ್ ಸಿರಾಜ್ ಬಗ್ಗೆಯೂ ಮಾರ್ಕೆಲ್ ಗುಣಗಾನ ಮಾಡಿದ್ದಾರೆ. 'ಸಿರಾಜ್ ಭಾರತಕ್ಕಾಗಿ ಆಡುವುದನ್ನು ಇಷ್ಟಪಡುತ್ತಾರೆ. ಸಿರಾಜ್ ಪ್ರದರ್ಶನವು ನನ್ನಲ್ಲಿ ಅಚ್ಚರಿಯನ್ನುಂಟು ಮಾಡಿಲ್ಲ' ಎಂದು ಹೇಳಿದ್ದಾರೆ.

ಕೆಲಸದೊತ್ತಡ ಕುರಿತು ಪ್ರತಿಕ್ರಿಯಿಸಿದ ಮಾರ್ಕೆಲ್, 'ಐದನೇ ಪಂದ್ಯದ ಆರಂಭಕ್ಕೂ ಮುನ್ನ ಬೌಲರ್‌ಗಳ ದೈಹಿಕ ಹಾಗೂ ಮಾನಸಿಕ ಒತ್ತಡದ ಕುರಿತು ಕೇಳಲಾಗಿತ್ತು. ಆಗ ಸ್ವತಃ ಸಿರಾಜ್ ಅವರೇ ನಾನು ಈ ಪಂದ್ಯವನ್ನು ಆಡಲು ಬಯಸುತ್ತೇನೆ. ಅವರ ಮನೋಭಾವನೆ ನಿಜಕ್ಕೂ ಅದ್ಭುತವಾಗಿದೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.