ADVERTISEMENT

ನ್ಯೂಜಿಲೆಂಡ್‌ ಇಲೆವನ್‌ ವಿರುದ್ಧ: ಪೃಥ್ವಿ ಶಾ ಭರ್ಜರಿ ಶತಕ

ಪಿಟಿಐ
Published 19 ಜನವರಿ 2020, 20:00 IST
Last Updated 19 ಜನವರಿ 2020, 20:00 IST
ಪೃಥ್ವಿ ಶಾ–ಎಎಫ್‌ಪಿ ಚಿತ್ರ
ಪೃಥ್ವಿ ಶಾ–ಎಎಫ್‌ಪಿ ಚಿತ್ರ   

ಲಿಂಕನ್‌, ನ್ಯೂಜಿಲೆಂಡ್‌: ಪೃಥ್ವಿ ಶಾ ಅವರ ಭರ್ಜರಿ ಶತಕದ ಬಲದಿಂದ ಭಾರತ ಎ ತಂಡವು ನ್ಯೂಜಿಲೆಂಡ್‌ ಇಲೆವನ್‌ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾನುವಾರ 12 ರನ್‌ಗಳಿಂದ ಗೆದ್ದಿತು.

ಭಾರತ ಸೀನಿಯರ್‌ ತಂಡಕ್ಕೆ ಮರುಪ್ರವೇಶ ಪಡೆಯುವತ್ತ ಚಿತ್ತ ನೆಟ್ಟಿರುವ ಶಾ, 100 ಎಸೆತಗಳಲ್ಲಿ 150 ರನ್‌ಸಿಡಿಸಿದರು. ಅದರಲ್ಲಿ 22 ಬೌಂಡರಿ, 2 ಸಿಕ್ಸರ್‌ ಇದ್ದವು.

ನ್ಯೂಜಿಲೆಂಡ್‌ನಲ್ಲಿ ನಡೆಯುವ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಹಂತದಲ್ಲಿಯೇ ಶಾ ಅವರಿಂದ ಈ ಆಟ ಹೊರಹೊಮ್ಮಿದೆ.

ADVERTISEMENT

ಫೆಬ್ರುವರಿ 21ರಿಂದ ಮೊದಲ ಟೆಸ್ಟ್‌ ಹ್ಯಾಮಿಲ್ಟನ್‌ನಲ್ಲಿ ಹಾಗೂ ಎರಡನೇ ಪಂದ್ಯ ಫೆಬ್ರುವರಿ 29ರಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ ಎ ತಂಡ 49.2 ಓವರ್‌ಗಳಲ್ಲಿ 372 ರನ್‌ಗಳ ಬೃಹತ್‌ ಮೊತ್ತ ಪೇರಿಸಿ ಆಲೌಟ್‌ ಆಯಿತು. ಆತಿಥೇಯ ತಂಡವನ್ನು ಆರು ವಿಕೆಟ್‌ಗೆ 360 ರನ್‌ಗಳಿಗೆ
ನಿಯಂತ್ರಿಸಿತು.

ಕನ್ನಡಿಗ ಮಯಂಕ್‌ ಅಗರವಾಲ್‌ (32) ಹಾಗೂ ಶಾ ಮೊದಲ ವಿಕೆಟ್‌ ಜೊತೆಯಾಟದಲ್ಲಿ 89 ರನ್‌ ಕಲೆಹಾಕಿದರು. ಆಲ್‌ರೌಂಡರ್‌ ವಿಜಯ್‌ ಶಂಕರ್‌ (58), ಕೃಣಾಲ್‌ ಪಾಂಡ್ಯ (32) ನಾಯಕ ಶುಭಮನ್‌ ಗಿಲ್‌ (24), ಸೂರ್ಯಕುಮಾರ್‌ ಯಾದವ್‌ (26) ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡಿದರು.

ಗೆಲುವಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ ಇಲೆವನ್‌ ಆರಂಭದಲ್ಲೇ ಆಘಾತ ಅನುಭವಿಸಿತು. 27 ರನ್‌ಗಳು ಆಗುವಷ್ಟರಲ್ಲಿ ಆರಂಭಿಕ ಆಟಗಾರ ಕೇಟನ್‌ ಕ್ಲಾರ್ಕ್‌ (1) ಹಾಗೂ ಜೋಶ್‌ ಕ್ಲಾರ್ಕ್‌ಸನ್‌ (14) ಪೆವಿಲಿಯನ್‌ ಸೇರಿದರು. ಜಾಕ್‌ ಬಾಯ್ಲ್‌ ಶತಕ (130) ಹಾಗೂ ಫಿನ್‌ ಅಲೆನ್‌ ಅರ್ಧಶತಕ (87) ಗಳಿಸಿದರೂ ತಂಡದ ಸೋಲು ತಪ್ಪಲಿಲ್ಲ. ಭಾರತದ ಪರ ಮಧ್ಯಮವೇಗಿ ಇಶಾನ್‌ ಪೊರೆಲ್‌ (59ಕ್ಕೆ 2) ಹಾಗೂ ಸ್ಪಿನ್ನರ್‌ ಕೃಣಾಲ್‌ ಪಾಂಡ್ಯ (59ಕ್ಕೆ 2) ಬೌಲಿಂಗ್‌ನಲ್ಲಿ ಮಿಂಚಿದರು.ಭಾರತ ಎ ಮೊದಲ ಪಂದ್ಯವನ್ನು 92 ರನ್‌ಗಳಿಂದ ಗೆದ್ದಿತ್ತು.

ಸಂಕ್ಷಿಪ್ತ ಸ್ಕೋರ್‌: ಭಾರತ ಎ 49.2 ಓವರ್‌ಗಳಲ್ಲಿ 372 ಆಲೌಟ್‌ (ಪೃಥ್ವಿ ಶಾ 150, ವಿಜಯ್‌ ಶಂಕರ್‌ 58, ಮಯಂಕ್‌ ಅಗರವಾಲ್‌ 32, ಕೃಣಾಲ್‌ ಪಾಂಡ್ಯ 32; ಡೆರಿಲ್‌ ಮಿಷೆಲ್‌ 37ಕ್ಕೆ 3, ಆ್ಯಂಡ್ರ್ಯೂ ಹೆಜಲ್‌ಡೈನ್‌ 67ಕ್ಕೆ 2).

ನ್ಯೂಜಿಲೆಂಡ್‌ ಇಲೆವನ್‌ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 360 (ಜಾಕ್‌ ಬಾಯ್ಲ್‌ 130, ಫಿನ್‌ ಅಲೆನ್‌ 87, ಡೇನ್‌ ಕ್ಲೀವರ್‌ 44; ಇಶಾನ್‌ ಪೊರೆಲ್‌ 59ಕ್ಕೆ 2, ಕೃಣಾಲ್‌ ಪಾಂಡ್ಯ 57ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.