ಪೃಥ್ವಿ ಶಾ
ಪಿಟಿಐ ಚಿತ್ರ
ಮುಂಬೈ: ಭಾರತ ತಂಡದ ಮಾಜಿ ಆಟಗಾರ ಪೃಥ್ವಿ ಶಾ ಅವರು ಮುಂಬೈ ತಂಡದ ಜೊತೆ ಸಂಬಂಧ ಕೊನೆಗೊಳಿಸಲು ಮುಂದಾಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಹೊಸ ತಂಡಕ್ಕೆ ಆಡುವ ಉದ್ದೇಶದಿಂದ ಅವರು ಮುಂಬೈ ಕ್ರಿಕೆಟ್ ಸಂಸ್ಥೆಯಿಂದ (ಎಂಸಿಎ) ನಿರಾಕ್ಷೇಪಣಾ ಪತ್ರ ಕೋರಿದ್ದಾರೆ.
25 ವರ್ಷ ವಯಸ್ಸಿನ ಶಾ ಅವರು ದೀರ್ಘ ಮಾದರಿಯ ಕ್ರಿಕೆಟ್‌ನಿಂದ ಹೊರಗಿದ್ದಾರೆ. ಆದರೆ ಸೀಮಿತ ಓವರುಗಳ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಆಟಕ್ಕಿಂತ ಹೆಚ್ಚಾಗಿ ಮೈದಾನದಾಚೆಯ ಅಶಿಸ್ತಿನ ನಡವಳಿಕೆಯಿಂದಾಗಿಯೇ ಅವರು ಸುದ್ದಿಗೆ ಗ್ರಾಸವಾಗಿದ್ದಾರೆ.
2017ರಲ್ಲಿ ಅವರು ಮುಂಬೈ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ‘ತಂಡವನ್ನು ಪ್ರತಿನಿಧಿಸಿದ ಅವಧಿಯಲ್ಲಿ ನನಗೆ ಸಂಸ್ಥೆ ನೀಡಿದ ಅವಿರತ ಬೆಂಬಲಕ್ಕೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಪೃಥ್ವಿ ಶಾ ಅವರು ಭಾರತದ ಪರ ಐದು ಟೆಸ್ಟ್ ಪಂದ್ಯ ಮತ್ತು ಆರು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಫಿಟ್ನೆಸ್ ಸಮಸ್ಯೆ ಮತ್ತು ಅಶಿಸ್ತಿನ ಕಾರಣ ಅವರನ್ನು ಕಳೆದ ಸಾಲಿನಲ್ಲಿ ಮುಂಬೈ ತಂಡದಿಂದ ಕೈಬಿಡಲಾಗಿತ್ತು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮಧ್ಯಪ್ರದೇಶ ವಿರುದ್ಧ ಕೊನೆಯ ಸಲ ಆಡಿದ್ದರು.
ಟೀಂ ಇಂಡಿಯಾ ಪರ ಐದು ಟೆಸ್ಟ್ ಹಾಗೂ ಆರು ಏಕದಿನ ಪಂದ್ಯಗಳಲ್ಲಿ ಆಡಿರುವ ಅವರು, ಐಪಿಎಲ್‌ನಲ್ಲಿ 2018ರಿಂದ 2024ರ ವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದಾರೆ.
2024ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಯಾವ ತಂಡವೂ ಪೃಥ್ವಿಯನ್ನು ಖರೀದಿಸಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.