
ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಟೂರ್ನಿಯ 11ನೇ ಆವೃತ್ತಿಯು 2026ರ ಮಾರ್ಚ್ 26 ರಿಂದ ಮೇ 3ರವರೆಗೆ ನಡೆಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ತಿಳಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿ ಕೂಡ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಆರಂಭದಲ್ಲಿ ಶುರುವಾಗಲಿದ್ದು, ಎರಡೂ ಟೂರ್ನಿಗಳು ಏಕಕಾಲದಲ್ಲಿ ಜರುಗಲಿವೆ.
ಪಿಎಸ್‌ಎಲ್ ವೇಳೆ ನಿಗದಿಯಾಗಿದ್ದ ಪಾಕಿಸ್ತಾನದ ಅಂತರರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗುತ್ತದೆ ಎಂದು ನಖ್ವಿ ತಿಳಿಸಿದ್ದಾರೆ.
ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ 2 ಟೆಸ್ಟ್, 3 ಏಕದಿನ ಹಾಗೂ 3 ಟಿ 20 ಪಂದ್ಯಗಳು ಆಯೋಜನೆಗೊಂಡಿದ್ದವು.
ಕಳೆದ ಬಾರಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆಗೊಂಡಿದ್ದರಿಂದ ಪಿಎಸ್‌ಎಲ್ 10ನೇ ಆವೃತ್ತಿ ಹಾಗೂ ಐಪಿಎಲ್ 18ನೇ ಆವೃತ್ತಿ ಏಕಕಾಲದಲ್ಲಿ ಆಯೋಜನೆಗೊಂಡಿತ್ತು.
2026ರಲ್ಲಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಭಾರತ ಹಾಗೂ ಶ್ರೀಲಂಕಾದಲ್ಲಿ ಟಿ20 ವಿಶ್ವಕಪ್ ಆಯೋಜನೆಗೊಂಡಿರುವುದರಿಂದ, ವಿಶ್ವಕಪ್ ನಂತರ ಪಿಎಸ್‌ಎಲ್ ಟೂರ್ನಿ ಜರುಗಲಿದೆ.
2016 ರಿಂದ ಆರಂಭವಾಗಿರುವ ಪಿಎಸ್ಎಲ್ ಟೂರ್ನಿಯ 11ನೇ ಆವೃತ್ತಿಯು ಪಾಕಿಸ್ತಾನ ಅಥವಾ ಯುಎಇ ಅಲ್ಲಿ ಜರುಗಲಿದೆ. ಈ ಬಾರಿ ಎರಡು ತಂಡಗಳು ಹೊಸದಾಗಿ ಸೇರ್ಪಡೆಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.