ADVERTISEMENT

ನನ್ನ ಶೈಲಿಯ ಮಹತ್ವ ನಾಯಕ, ಕೋಚ್‌ಗೆ ಅರಿವಿದೆ: ಪೂಜಾರ

ಪಿಟಿಐ
Published 20 ಮಾರ್ಚ್ 2020, 4:42 IST
Last Updated 20 ಮಾರ್ಚ್ 2020, 4:42 IST
ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ   

ನವದೆಹಲಿ: ತಮ್ಮ ತಾಳ್ಮೆಭರಿತ ಕಲಾತ್ಮಕ ಶೈಲಿಯ ಬ್ಯಾಟಿಂಗ್‌ನ ಮಹತ್ವವು ತಂಡದ ನಾಯಕ ಮತ್ತು ಕೋಚ್‌ಗೆ ಗೊತ್ತಿದೆ ಎಂದು ಭಾರತದ ಟೆಸ್ಟ್ ‍‍ ಪರಿಣತ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಹೇಳಿದ್ದಾರೆ.

ಟ್ವೆಂಟಿ–20 ಕ್ರಿಕೆಟ್ ಭರಾಟೆಯಲ್ಲಿ ಹೊಡಿ ಬಡಿ ಆಟವೇ ಪ್ರಮುಖವಾಗಿರುವ ಇಂದಿನ ದಿನಗಳಲ್ಲಿ ಪೂಜಾರ ಬ್ಯಾಟಿಂಗ್ ಮತ್ತು ಅವರ ಸ್ಟ್ರೈಕ್‌ರೇಟ್ ಬಗ್ಗೆ ಆಗಾಗ ಕೆಲವು ಟೀಕೆಗಳು ಕೇಳಿಬರುತ್ತಿವೆ. ಆದರೆ ಈ ಕುರಿತು ಸೌರಾಷ್ಟ್ರದ ಪೂಜಾರ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ.

‘ಮಾಧ್ಯಮಗಳಲ್ಲಿ ಈ ಬಗ್ಗೆ ಅತಿಯಾದ ಚರ್ಚೆ ನಡೆದಿರುವುದು ಕಂಡುಬಂದಿಲ್ಲ. ತಂಡದ ವ್ಯವಸ್ಥಾಪನ ಮಂಡಳಿಯು ನನಗೆ ಸಂಪೂರ್ಣ ಬೆಂಬಲ ನೀಡುತ್ತಿದೆ. ನಾಯಕ ಅಥವಾ ಕೋಚ್‌ ಕಡೆಯಿಂದ ಯಾವುದೇ ಒತ್ತಡ ಇಲ್ಲ’ ಎಂದರು.

ADVERTISEMENT

ಪೂಜಾರ 77 ಟೆಸ್ಟ್‌ಗಳನ್ನು ಆಡಿದ್ದಾರೆ. ಅವರ ರನ್‌ ಗಳಿಕೆಯ ಸರಾಸರಿಯು 48.66 ಆಗಿದೆ.

‘ರನ್‌ ಗಳಿಸಲು ಏಕಿಷ್ಟು ಸಮಯ ತೆಗೆದುಕೊಳ್ಳುತ್ತೀರಿ ಎಂದು ಕೆಲವು ಅಭಿಮಾನಿಗಳು ಈಚೆಗೆ ರಣಜಿ ಟೂರ್ನಿ ಸಂದರ್ಭದಲ್ಲಿ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದರು. ತಂಡದ ಜಯವಷ್ಟೇ ನಮಗೆ ಮುಖ್ಯ. ಆದ್ದರಿಂದ ಅದಕ್ಕಾಗಿ ತಾಳ್ಮೆಯಿಂದ ಇನಿಂಗ್ಸ್‌ ಕಟ್ಟುವುದು ನನ್ನ ಹೊಣೆಯೆಂದು ಉತ್ತರಿಸಿದ್ದೆ. ನನ್ನ ಬ್ಯಾಟಿಂಗ್‌ನಿಂದ ನಮ್ಮ ತಂಡವು ಹಲವು ಬಾರಿ ಜಯಿಸಿರುವುದು ತೃಪ್ತಿಕೊಡುವ ವಿಚಾರ’ ಎಂದು ಪೂಜಾರ ಹೇಳಿದ್ದಾರೆ.

‘ನಾನು ಡೇವಿಡ್ ವಾರ್ನರ್ ಅಥವಾ ವೀರೇಂದ್ರ ಸೆಹ್ವಾಗ್ ಅವರಂತೆ ಆಗಲು ಸಾಧ್ಯವಿಲ್ಲ ಎಂದು ಗೊತ್ತಿದೆ. ಆದರೆ, ಯಾವುದೇ ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿ ಸಮಯ ತೆಗೆದುಕೊಂಡು ಇನಿಂಗ್ಸ್‌ ಕಟ್ಟುವುದರಲ್ಲಿ ತಪ್ಪೇನೂ ಇಲ್ಲ. ನಾನು ಎಷ್ಟು ಹೊತ್ತು ಕ್ರೀಸ್‌ನಲ್ಲಿರುತ್ತೇನೆ ಎನ್ನುವುದನ್ನು ಗಮನಿಸುವ ಜನರು. ಎದುರಾಳಿ ಬೌಲರ್‌ಗಳು ಅಷ್ಟು ಹೊತ್ತು ನನಗೆ ಎಸೆತಗಳನ್ನು ಹಾಕಿರುವುದನ್ನೂ ಗಮನಿಸಬೇಕು’ ಎಂದು ನುಡಿದಿದ್ದಾರೆ.

ಈಚೆಗೆ ನ್ಯೂಜಿಲೆಂಡ್ ಎದುರಿನ ಟೆಸ್ಟ್‌ ಸರಣಿಯಲ್ಲಿ ಪೂಜಾರ ಆಡಿದ್ದರು. ನಂತರ ಸೌರಾಷ್ಟ್ರ ತಂಡಕ್ಕೆ ಮರಳಿದ್ದರು. ತಂಡವು ರಣಜಿ ಟ್ರೋಫಿ ಜಯಿಸುವಲ್ಲಿ ಮಹತ್ವದ ಕಾಣಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.