ಜೋಶ್ ಹ್ಯಾಜಲ್‌ವುಡ್ ಅವರೊಂದಿಗೆ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದು ಹೀಗೆ
ಪಿಟಿಐ ಚಿತ್ರ
ಮುಲ್ಲನಪುರ (ಚಂಡೀಗಡ): ಯಶ್, ಜೋಶ್ ಮತ್ತು ಸುಯಶ್..
ಈ ಮೂರು ಹೆಸರುಗಳು ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ನಾಲಿಗೆಗಳ ಮೇಲೆ ನಲಿಯುತ್ತಿವೆ. ಈ ಮೂವರು ಬೌಲರ್‌ಗಳ ಕಾರಣದಿಂದಲೇ ಆರ್‌ಸಿಬಿ ತಂಡವು ಒಂಬತ್ತು ವರ್ಷಗಳ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ ಹಂತವನ್ನು ಸುಲಭವಾಗಿ ಪ್ರವೇಶಿಸಲು ಸಾಧ್ಯವಾಯಿತು. ಮೂರು ಸಲ ರನ್ನರ್ಸ್ ಅಪ್ ಆಗಿರುವ ಆರ್‌ಸಿಬಿಯು 2016ರ ನಂತರ ಫೈನಲ್ ಪ್ರವೇಶಿಸಿದ್ದು ಈಗಲೇ. ತಂಡದ ಚೊಚ್ಚಲ ಪ್ರಶಸ್ತಿ ವಿಜಯದ ಸಾಧನೆಗೆ ಈಗ ಒಂದೇ ಹೆಜ್ಜೆ ಬಾಕಿ ಇದೆ. ಜೂನ್ 3ರಂದು ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ರಜತ್ ಬಳಗ ಕಣಕ್ಕಿಳಿಯಲಿದೆ.
ಸಮಬಲಶಾಲಿ ತಂಡಗಳ ಹೋರಾಟವೆಂದೇ ಬಿಂಬಿತವಾಗಿದ್ದ ಈ ಪಂದ್ಯದಲ್ಲಿ ರಜತ್ ಪಾಟೀದಾರ್ ಬಳಗವು ಏಕಪಕ್ಷೀಯ ಗೆಲುವು ಸಾಧಿಸಿತು. ಆತಿಥೇಯ ಪಂಜಾಬ್ ಕಿಂಗ್ಸ್ ತಂಡವು 8 ವಿಕೆಟ್‌ಗಳಿಂದ ಸೋತಿತು. ಮಹಾರಾಜ ಯದವೀಂದ್ರಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ರಜತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅವರ ನಿರ್ಧಾರವನ್ನು ಬೌಲರ್‌ಗಳು ಸಮರ್ಥಿಸಿಕೊಂಡರು. ಯಶ್ ದಯಾಳ್ (26ಕ್ಕೆ2), ಜೋಶ್ ಹ್ಯಾಜಲ್‌ವುಡ್ (21ಕ್ಕೆ3) ಮತ್ತು ಸ್ಪಿನ್ನರ್ ಸುಯಶ್ ಶರ್ಮಾ (17ಕ್ಕೆ3) ಅವರ ನಿಖರ ದಾಳಿಯಿಂದಾಗಿ ಪಂಜಾಬ್ ತಂಡವು 14.1 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್ ಆಯಿತು. ಈ ಸುಲಭ ಮೊತ್ತವನ್ನು ಆರ್‌ಸಿಬಿಯು 10 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ದಾಟಿತು. ಆರಂಭಿಕ ಬ್ಯಾಟರ್ ಫಿಲಿಪ್ ಸಾಲ್ಟ್ (ಅಜೇಯ 56; 27ಎ, 4X6, 6X3) ಅರ್ಧಶತಕ ಹೊಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು.
ವೇಗಿಗಳಾದ ಯಶ್ ದಯಾಳ್ ಜೋಶ್ ಹ್ಯಾಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ (17ಕ್ಕೆ1) ಅವರ ನಿಖರ ದಾಳಿಯ ಮುಂದೆ ಪವರ್‌ಪ್ಲೇ ಹಂತದಲ್ಲಿಯೇ ಪಂಜಾಬ್ ತಂಡವು 38 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು.
ಎಡಗೈ ವೇಗಿ ಯಶ್ ದಯಾಳ್ ಅವರು ತಮ್ಮ ಮೊದಲ ಓವರ್‌ನಲ್ಲಿಯೇ ಪ್ರಿಯಾಂಶ್ ಆರ್ಯ ವಿಕೆಟ್ ಗಳಿಸುವುದರೊಂದಿಗೆ ಖಾತೆ ತೆರೆದರು. ಬಿರುಬಿಸಿಲಿಗೆ ದಿನವಿಡೀ ಮೈಯೊಡ್ಡಿದ್ದ ಪಿಚ್‌ನಲ್ಲಿ ಚೆಂಡು , ಬ್ಯಾಟರ್‌ಗಳ ನಿರೀಕ್ಷೆಗಿಂತಲೂ ತುಸು ಹೆಚ್ಚು ಪುಟಿದು ಧಾವಿಸುತ್ತಿತ್ತು. ಲೆಂಗ್ತ್ ಎಸೆತಗಳನ್ನು ಅಂದಾಜಿಸುವುದು ನುರಿತ ಬ್ಯಾಟರ್‌ಗಳಿಗೂ ಕಷ್ಟವಾಗುತ್ತಿತ್ತು. ಇದರ ಲಾಭ ಪಡೆದ ಬೌಲರ್‌ಗಳು ಮೇಲುಗೈ ಸಾಧಿಸಿದರು.
ಗಾಯದಿಂದಾಗಿ ಸುಮಾರು 25 ದಿನಗಳಿಂದ ಆಟದಿಂದ ದೂರವಿದ್ದ ಆಸ್ಟ್ರೇಲಿಯಾ ವೇಗಿ ಹ್ಯಾಜಲ್‌ವುಡ್ ಕಣಕ್ಕಿಳಿದಿದ್ದು ಆರ್‌ಸಿಬಿಗೆ ಲಾಭವಾಯಿತು. ಜೋಶ್ ಇಂಗ್ಲಿಸ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ವಿಕೆಟ್‌ಗಳನ್ನು ಕಬಳಿಸಿದರು.
ಕಣಕ್ಕಿಳಿದ ಸುಯಶ್ ಶರ್ಮಾ ತಮ್ಮ ಒಂದೇ ಓವರ್‌ನಲ್ಲಿ (9ನೇ ಓವರ್) ಶಶಾಂಕ್ ಸಿಂಗ್ ಮತ್ತು ಮುಷೀರ್ ಖಾನ್ ಅವರ ವಿಕೆಟ್‌ಗಳನ್ನು ಗಳಿಸಿದರು. ಮಧ್ಯಮ ಕ್ರಮಾಂಕ ಕುಸಿಯಿತು. ಇನ್ನೊಂದೆಡೆ ಮಾರ್ಕಸ್ ಸ್ಟೊಯನಿಸ್ (26ರನ್) ಅವರು ರನ್ ಹೆಚ್ಚಳಕ್ಕೆ ಪ್ರಯತ್ನಿಸುತ್ತಿದ್ದರು. ಅವರ ವಿಕಟ್ ಅನ್ನೂ 11ನೇ ಓವರ್‌ನಲ್ಲಿ ಪಡೆದ ಸುಯಶ್ ಉತ್ಸಾಹ ಮುಗಿಲುಮುಟ್ಟಿತು. ಈ ಸಂದರ್ಭದಲ್ಲಿ ಮಾರ್ಕಸ್ ಮತ್ತು ಸುಯಶ್ ನಡುವೆ ‘ದೃಷ್ಟಿಯುದ್ಧ’ ಮತ್ತು ಮಾತಿನ ಚಕಮಕಿ ನಡೆಯಿತು.
15ನೇ ಓವರ್‌ನಲ್ಲಿ ಅಜ್ಮತ್‌ಉಲ್ಲಾ ವಿಕೆಟ್ ಪಡೆಯುವುದರೊಂದಿಗೆ ಹ್ಯಾಜಲ್‌ವುಡ್ ಅವರೇ ಇನಿಂಗ್ಸ್‌ಗೆ ತೆರೆ ಎಳೆದರು. ವಿಕೆಟ್‌ಕೀಪರ್ ಜಿತೇಶ್ ಶರ್ಮಾ ಮೂರು ಅಮೋಘ ಕ್ಯಾಚ್ ಪಡೆದು ಮಿಂಚಿದರು. ನಾಯಕ ರಜತ್ ಮತ್ತು ಅನುಭವಿ ವಿರಾಟ್ ಅವರ ಜಂಟಿ ಮಾರ್ಗದರ್ಶನ ರಂಗೇರಿತು.
ಯಶ್ ದಯಾಳ್
4–0–26–2
ಜೋಶ್ ಹ್ಯಾಜಲ್‌ವುಡ್
3.1–0–21–3
ಆರ್‌ಸಿಬಿ ವೇಗಿ ಜೋಶ್ ಹ್ಯಾಜಲ್‌ವುಡ್ ಅವರನ್ನು ಅಭಿನಂದಿಸಿದ ಸಹ ಆಟಗಾರರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.