ADVERTISEMENT

PV Web Exclusive: ಸಿಕ್ಸರ್‌ಗಳ ಸಂತೆಯಲ್ಲಿ ಡಾಟ್ ಬಾಲ್ ಹುಡುಕುತ್ತಾ...

ಗಿರೀಶದೊಡ್ಡಮನಿ
Published 6 ಅಕ್ಟೋಬರ್ 2020, 4:30 IST
Last Updated 6 ಅಕ್ಟೋಬರ್ 2020, 4:30 IST
ರಶೀದ್ ಖಾನ್
ರಶೀದ್ ಖಾನ್   
""
""

ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಒಂದು ದಿನದ ಆಟದಲ್ಲಿ ಪ್ರಯೋಗವಾಗುವ ಸುಮಾರು 90 ಓವರ್‌ಗಳಲ್ಲಿ ಬೆರಳೆಣಿಕೆಯಷ್ಟು ಸಿಕ್ಸರ್‌ಗಳು ದಾಖಲಾದರೆ ಹೆಚ್ಚಿನ ಮಾತು. ರನ್‌ ಗಳಿಕೆಯಾಗದ ಎಸೆತಗಳ (ಡಾಟ್ ಬಾಲ್) ರಾಶಿ ಇರುತ್ತದೆ. ಅದೇ ಚುಟುಕು ಕ್ರಿಕೆಟ್‌ನಲ್ಲಿ ತದ್ವಿರುದ್ಧ ಪರಿಸ್ಥಿತಿ.

ಇರುವ 20–20 ಓವರ್‌ಗಳಲ್ಲಿ ಸಿಕ್ಸರ್, ಬೌಂಡರಿಗಳದ್ದೇ ಮೆರೆದಾಟ. ಈ ಭರಾಟೆಯಲ್ಲಿ ಡಾಟ್‌ ಬಾಲ್ ಪ್ರಯೋಗವೇ ಒಂದು ಸಾಹಸ. ಕೆ.ಎಲ್.ರಾಹುಲ್, ಮಯಂಕ್ ಅಗರವಾಲ್, ಸಂಜು ಸ್ಯಾಮ್ಸನ್, ರಾಹುಲ್ ತೆವಾಟಿಯಾ, ಕೀರನ್ ಪೊಲಾರ್ಡ್ ಅವರು ಅಬ್ಬರಿಸುತ್ತಿರುವ ಈ ಬಾರಿಯ ಐಪಿಎಲ್‌ನಲ್ಲಿ ಬೌಲರ್‌ಗಳ ಮುಂದೆ ಬಂಡೆಗಲ್ಲಿನಂತಹ ಸವಾಲು ಇದೆ. ಶಾರ್ಜಾದಂತಹ ಚಿಕ್ಕ ಕ್ರೀಡಾಂಗಣದಲ್ಲಿ ಬ್ಯಾಟ್ಸ್‌ಮನ್‌ಗಳ ಹೊಡೆತಕ್ಕೆ ಚೆಂಡು ಮೈದಾನದ ಹೊರಗಿನ ರಸ್ತೆಗೆ ಹೋಗಿ ಬೀಳುತ್ತಿವೆ. ಆದರೂ ಬೌಲರ್‌ಗಳು ಛಲ ಬಿಡದ ತ್ರಿವಿಕ್ರಮನಂತೆ ಡಾಟ್ ಬಾಲ್‌ಗಳನ್ನು ಹಾಕಿ ಸೈಎನಿಸಿಕೊಂಡಿದ್ದಾರೆ. ಅದರಲ್ಲೂ ಸ್ಪಿನ್ ಬೌಲರ್‌ಗಳು ಹೆಚ್ಚು ದಂಡನೆಗೊಳಗಾಗುವ ಈ ಮಾದರಿಯಲ್ಲಿ ಅವರೇ ಮೇಲುಗೈ ಸಾಧಿಸುತ್ತಿರುವುದು ವಿಶೇಷ.

ದುಬೈನಲ್ಲಿ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಿನ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಸ್ಪಿನ್ನರ್ ರಶೀದ್ ಖಾನ್ 16 ಡಾಟ್ ಬಾಲ್ ಹಾಕಿ ದಾಖಲೆ ಬರೆದರು. ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಪ್ರಯೋಗಿಸಿದವರಲ್ಲಿ ಅಗ್ರಸ್ಥಾನ ಪಡೆದುಕೊಂಡರು. ಆ ಪಂದ್ಯದಲ್ಲಿ ಸಾಧಾರಣ ಮೊತ್ತದ ಗುರಿ ನೀಡಿದ್ದ ಸನ್‌ರೈಸರ್ಸ್‌ ಜಯಿಸಲು ರಶೀದ್ ಬೌಲಿಂಗ್‌ ಪ್ರಮುಖವಾಗಿತ್ತು.

ADVERTISEMENT
ಜಸ್‌ಪ್ರೀತ್ ಬೂಮ್ರಾ

ಅವರ ನಂತರದ ಸ್ಥಾನದಲ್ಲಿ ಮೊಹಮ್ಮದ್ ಶಮಿ (15), ಜೋಫ್ರಾ ಆರ್ಚರ್‌ (ಸತತ ಎರಡು ಪಂದ್ಯಗಳಲ್ಲಿ 15 ಮತ್ತು 14) ಶೆಲ್ಡನ್ ಜಾಕ್ಸನ್ (14), ಜಸ್‌ಪ್ರೀತ್ ಬೂಮ್ರಾ (14) ಮತ್ತು ವಾಷಿಂಗ್ಟನ್ ಸುಂದರ್ (13) ಅವರು ಇದ್ದಾರೆ. ಸೆ.29ರಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವಿರುದ್ಧ ನಡೆದ ಪಂದ್ಯದಲ್ಲಿಯೂ ಸನ್‌ರೈಸರ್ಸ್‌ನ ರಶೀದ್ ಖಾನ್ 13 ಡಾಟ್ ಬಾಲ್ ಹಾಕಿ ಗಮನ ಸೆಳೆದಿದ್ದರು. ಅದಾಗಿ ಮೂರು ದಿನಗಳ ನಂತರ ತಮ್ಮ ಬೌಲಿಂಗ್‌ನಲ್ಲಿ ಮತ್ತಷ್ಟು ಉತ್ಕೃಷ್ಠತೆ ಸಾಧಿಸಿದ್ದರು. ಇವರೆಲ್ಲರೂ ಆಯಾ ಪಂದ್ಯಗಳಲ್ಲಿ ಹಾಕಿದ್ದು ತಲಾ ನಾಲ್ಕು ಓವರ್‌ (24 ಎಸೆತಗಳು) ಎಂಬುದು ಇಲ್ಲಿ ಗಮನಾರ್ಹ.

ಸೋಮವಾರ (ಅ. 5)ದವರೆಗೆ ಮುಕ್ತಾಯವಾದ ಪಂದ್ಯಗಳ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ; ಒಟ್ಟು ಡಾಟ್ ಬಾಲ್ ಪ್ರಯೋಗಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್‌ನ ಜಸ್‌ಪ್ರೀತ್ ಬೂಮ್ರಾ ಇಲ್ಲಿಯವರೆಗೆ ಆಡಿರುವ ಐದು ಪಂದ್ಯಗಳಲ್ಲಿ 55 ಡಾಟ್ ಬಾಲ್ ಹಾಕಿ ಅಗ್ರಸ್ಥಾನದಲ್ಲಿದ್ದಾರೆ. ಡೆಲ್ಲಿ ತಂಡದ ಎನ್ರಿಕ್ ನೊರ್ಟಿಯೆ (53), ರಶೀದ್ ಖಾನ್ (52), ಜೋಫ್ರಾ ಆರ್ಚರ್ (51) ಮತ್ತು ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ (51) ನಂತರದ ಸ್ಥಾನಗಳಲ್ಲಿದ್ದಾರೆ.

ಹರಭಜನ್ ಸಿಂಗ್

ಸ್ಪಿನ್ ಬೌಲರ್‌ಗಳೇ ಹೆಚ್ಚು ಡಾಟ್ ಬಾಲ್ ಪ್ರಯೋಗ ಮಾಡಿದ ಇತಿಹಾಸವಿದೆ. ಹರಭಜನ್ ಸಿಂಗ್ 160 ಪಂದ್ಯಗಳಲ್ಲಿ 1249 ಡಾಟ್ ಎಸೆತಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಪೀಯೂಷ್ ಚಾವ್ಲಾ (1141), ಅಮಿತ್ ಮಿಶ್ರಾ (1128) ಮತ್ತು ಆರ್. ಅಶ್ವಿನ್(1083) ಹರಭಜನ್ ದಾಖಲೆಯನ್ನು ಮುರಿಯುವ ಪೈಪೋಟಿಯಲ್ಲಿದ್ದಾರೆ. ಈ ಬಾರಿ ಹರಭಜನ್ ಕಣದಲ್ಲಿಲ್ಲ. ಆದ್ದರಿಂದ ಉಳಿದವರಿಗೆ ಉತ್ತಮ ಅವಕಾಶ ಇದೆ.

ಇದೇನೋ ಬೌಲರ್‌ಗಳ ಕಥೆಯಾಯಿತು. ಆದರೆ, ಟೂರ್ನಿಯಲ್ಲಿಇದುವರೆಗೆ ಹೆಚ್ಚು ಡಾಟ್ ಬಾಲ್ ಎದುರಿಸಿದ ಬ್ಯಾಟ್ಸ್‌ಮನ್‌ಗಳ ಕಥೆ ಏನು? ಇಲ್ಲಿ ಒಂದು ಕೌತುಕ ಇದೆ. ಈ ರೀತಿ ಹೆಚ್ಚು ಡಾಟ್ ಬಾಲ್ ಎದುರಿಸಿದ ದಾಂಡಿಗರೇ ಆರೆಂಜ್ ಕ್ಯಾಪ್‌ ಧರಿಸಿದ್ದಾರೆ!

ಹೌದು; ಕಿಂಗ್ಸ್ ಇಲೆವನ್ ಪಂಜಾಬ್ ನಾಯಕ ಕೆ.ಎಲ್. ರಾಹುಲ್ (47) ಅವರೇ ಅದು. ಶುಭಮನ್ ಗಿಲ್ (45), ಆ್ಯರನ್ ಫಿಂಚ್ (44), ರೋಹಿತ್ ಶರ್ಮಾ (44) ಮತ್ತು ಮಯಂಕ್ ಅಗರವಾಲ್ (42) ನಂತರದ ಸ್ಥಾನದಲ್ಲಿದ್ದಾರೆ. ಇವರೆಲ್ಲರೂ ಈ ಸಲ ರನ್‌ಗಳ ಹೊಳೆ ಹರಿಸುತ್ತಿರುವವರೇ. ಅಂದರೆ ಇವರೂ ತಲೆಬಾಗಿ ಗೌರವ ಕೊಡುವಂತೆ ಬೌಲಿಂಗ್ ಮಾಡಿದ ಆಟಗಾರರ ಸಾಮರ್ಥ್ಯವನ್ನು ಮೆಚ್ಚಲೇಬೇಕಲ್ಲವೇ?

ಕೊರೊನಾ ಕಾಲಘಟ್ಟದ ಒತ್ತಡಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತ ಆಟದ ಕೌಶಲಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಈ ಐಪಿಎಲ್‌ನಲ್ಲಿಆಡುತ್ತಿರುವ ಬಹುತೇಕ ಬೌಲರ್‌ಗಳು ಸುಮಾರು ಮೂರ್ನಾಲ್ಕು ತಿಂಗಳು ಅಭ್ಯಾಸವನ್ನೇ ಮಾಡಿಲ್ಲ. ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಬೌಲರ್‌ಗಳು ಮಾತ್ರ ಯುಎಇಗೆ ಬರುವ ಮನ್ನ ಕೆಲವು ಸರಣಿಗಳಲ್ಲಿ ಆಡಿದ್ದರು. ಅದರಿಂದಾಗಿ ಆಟದಲ್ಲಿ ಲಯ ಸಾಧಿಸುವುದು ಬೌಲರ್‌ಗಳಿಗೆ ತುಸು ಕಷ್ಟವೇ. ಆದ್ದರಿಂದಲೇ ಟೂರ್ನಿಯ ಆರಂಭದ ಪಂದ್ಯಗಳಲ್ಲಿ ರನ್‌ಗಳು ಹೊಳೆಯಾಗಿ ಹರಿದವು. ದಿನಗಳೆದಂತೆ ಸ್ವಲ್ಪ ಕಮ್ಮಿಯಾದವು.

ಚುಟುಕು ಪಂದ್ಯದಲ್ಲಿ ಡಾಟ್‌ ಬಾಲ್ ಮತ್ತು ಮೇಡನ್ ಓವರ್‌ಗಳ ಪ್ರಯೋಗವು ವಿಕೆಟ್‌ ಗಳಿಕೆಯಷ್ಟೇ ಮಹತ್ವದ್ದಾಗಿರುತ್ತದೆ. ಸಿಕ್ಸರ್‌, ಬೌಂಡರಿ ಗಳಿಕೆಯಾಗುವ ಎಸೆತಗಳು ಬೌಲರ್‌ ಮೇಲೆ ಒತ್ತಡ ಹೇರಿದರೆ. ರನ್‌ ಗಳಿಕೆಯಾಗದ ಎಸೆತಗಳು ಬ್ಯಾಟಿಂಗ್‌ ಮಾಡುವ ತಂಡದ ಮೇಲೆಯೇ ಒತ್ತಡ ಹೆಚ್ಚಿಸುತ್ತವೆ. ಇಂತಹ ಸಂಗತಿಗಳಿಂದಾಗಿಯೇ ಕ್ರಿಕೆಟ್ ರೋಚಕವಾಗುತ್ತ ಹೋಗುತ್ತದೆ. ಮುಂದೊಂದು ದಿನ ಬ್ಯಾಟ್ಸ್‌ಮನ್‌ಗಳ ಪಾರುಪತ್ಯಕ್ಕೆ ಸಮನಾಗಿ ಬೌಲರ್‌ಗಳೂ ಮೆರೆಯುವ ಸಾಧ್ಯತೆಗಳು ಇರುವುದು ಆಶಾದಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.