ADVERTISEMENT

PV Web Exclusive: ಹೇಗಿದ್ದ ಗೌತಮ್‌ ಹೇಗಾದ ಗೊತ್ತಾ?

ಪ್ರಮೋದ
Published 19 ಫೆಬ್ರುವರಿ 2021, 12:27 IST
Last Updated 19 ಫೆಬ್ರುವರಿ 2021, 12:27 IST
ಕೆ. ಗೌತಮ್‌
ಕೆ. ಗೌತಮ್‌   

‘ಮಿಲಿಯನ್‌ ಡಾಲರ್‌ ಬೇಬಿ’ ಎಂದೇ ಹೆಸರಾದ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್ ಟೂರ್ನಿ ಸದಾ ಅಚ್ಚರಿಗಳ ಗಣಿ. ಪ್ರತಿ ವರ್ಷದ ಹರಾಜು ಪ್ರಕ್ರಿಯೆಯಲ್ಲಿ ಹಾಗೂ ಪಂದ್ಯಗಳಲ್ಲಿ ಸದಾ ಒಂದಿಲ್ಲೊಂದು ಕುತೂಹಲ, ವಿಶೇಷತೆಗಳು ಇದ್ದೇ ಇರುತ್ತವೆ.‌

ಐಪಿಎಲ್‌ ಆಟಗಾರರ ಹರಾಜು ಎಂದಾಕ್ಷಣ ಯುವ ಆಟಗಾರರಲ್ಲಿ ವಿಶೇಷ ಹುಮ್ಮಸ್ಸು. ಅದರಲ್ಲಿಯೂ ಮೊದಲ ಬಾರಿಗೆ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದವರಿಗಂತೂ ನಮಗೆ ಸ್ಥಾನ ಲಭಿಸುತ್ತದೆಯೋ; ಇಲ್ಲವೊ ಎನ್ನುವ ಪ್ರಶ್ನೆ. ಈಗಿನ ಪ್ರತಿ ಆಟಗಾರನಿಗೂ ಜೀವಮಾನದಲ್ಲಿ ಒಮ್ಮೆಯಾದರೂ ಐಪಿಎಲ್ ಆಡಬೇಕೆನ್ನುವ ತುಡಿತವೂ ಇದಕ್ಕೆ ಕಾರಣ. ಹೀಗಾಗಿ ಆಟಗಾರರ ಹರಾಜು ಆರಂಭವಾಗುತ್ತಿದ್ದಂತೆ ಅದೃಷ್ಟದ ‘ಲಕ್ಷ್ಮಿ’ ಯಾರಿಗೆ ಒಲಿಯುತ್ತಾಳೆ ಎನ್ನುವ ಚರ್ಚೆಯೂ ಶುರುವಾಗುತ್ತದೆ.

ಅನೇಕ ಅಚ್ಚರಿಗಳಲ್ಲಿ ಕರ್ನಾಟಕದ ಮಟ್ಟಿಗೆ ಮೊದಲ ಬೆರಗು ಮೂಡಿಸಿದ್ದು ಕೆ.ಸಿ. ಕಾರಿಯಪ್ಪ ಆಯ್ಕೆ. ಕರ್ನಾಟಕ ತಂಡದ ಪರ ಒಂದೇ ಒಂದೂ ಪ್ರಥಮ ದರ್ಜೆ ಪಂದ್ಯವಾಡದ (ಈಗಲೂ ಆಡಿಲ್ಲ) ಕಾರಿಯಪ್ಪ ಒಮ್ಮೆ ರಣಜಿ ಟೂರ್ನಿಗೆ 30 ಆಟಗಾರರ ಸಂಭಾವ್ಯ ತಂಡದಲ್ಲಷ್ಟೇ ಸ್ಥಾನ ಗಳಿಸಿದ್ದರು. ಕರ್ನಾಟಕ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಬಿಜಾಪುರ ಬುಲ್ಸ್‌ ತಂಡದಲ್ಲಿ ಆಡಿದ್ದರು. ಕರ್ನಾಟಕದ ಕ್ರಿಕೆಟ್‌ ಪ್ರೇಮಿಗಳಿಗೆ ಹೆಚ್ಚು ಗೊತ್ತೇ ಇರದಿದ್ದ ಕಾರಿಯಪ್ಪ 2015ರ ಐಪಿಎಲ್‌ ಟೂರ್ನಿಗೆ ಆಟಗಾರರ ಹರಾಜಿನಲ್ಲಿ ₹2.4 ಕೋಟಿ ಮೊತ್ತಕ್ಕೆ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪಾಲಾಗಿ ಅಚ್ಚರಿ ಮೂಡಿಸಿದ್ದರು. ಆಗಲೇ ರಾಜ್ಯದ ಕ್ರಿಕೆಟ್‌ ಪ್ರಿಯರು ಕಾರಿಯಪ್ಪ ಅವರನ್ನು ಅಚ್ಚರಿಯಿಂದ ನೋಡಿದ್ದು.

ADVERTISEMENT

ಈಗ ಮತ್ತೆ ಅಚ್ಚರಿ ಮೂಡಿಸಿರುವ ಸರದಿ ಸ್ಪಿನ್ನರ್‌ ಕೃಷ್ಣಪ್ಪ ಗೌತಮ್‌ ಅವರದ್ದು. ₹20 ಲಕ್ಷವಷ್ಟೇ ಮೂಲ ಬೆಲೆ ಹೊಂದಿದ್ದ ಗೌತಮ್‌ ಹರಾಜಿನಲ್ಲಿ ಬಹುಬೇಡಿಕೆಯ ಭಾರತದ ಆಟಗಾರನಾಗಿ ಹೊರಹೊಮ್ಮಿದರು. ಗೌತಮ್‌ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸ್‌ ₹9.5 ಕೋಟಿಗೆ ಖರೀದಿಸಿತು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಆಡಲು ಸಿದ್ಧವಾಗುತ್ತಿರುವ ಭಾರತ ತಂಡದಲ್ಲಿ ಗೌತಮ್‌ ನೆಟ್ಸ್‌ ಬೌಲರ್ ಆಗಿದ್ದಾರೆ. ಹೋದ ವರ್ಷ ಕಿಂಗ್ಸ್‌ ಇಲೆವನ್‌ ಪಂಜಾಬ್ ತಂಡದಲ್ಲಿದ್ದರು. ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳಲ್ಲಿಯೂ ಆಡಿದ್ದಾರೆ. ಹಿಂದೆ ನಡೆದ ಹರಾಜಿನಲ್ಲಿ ಕೃಣಾಲ್‌ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ ತಂಡ ₹8.8 ಕೋಟಿಗೆ ಖರೀದಿಸಿತ್ತು. ಅದಾದ ನಂತರ ‘ಅನ್‌ ಕ್ಯಾಪಡ್‌’ ಆಟಗಾರನಿಗೆ ಒಲಿದ ದೊಡ್ಡ ಮೊತ್ತ ಇದಾಗಿದೆ.‌

ಹೇಗಿದ್ದ ಹೇಗಾದ ಗೊತ್ತಾ?

ಬಾಲ್ಯದಿಂದಲೇ ಕ್ರಿಕೆಟ್‌ ಬಗ್ಗೆ ಆಸಕ್ತಿ ಹೊಂದಿದ್ದ ಗೌತಮ್‌ ವಿವಿಧ ವಯೋಮಿತಿಯೊಳಗಿನ ಕ್ರಿಕೆಟ್ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಅಲ್ಲಿ ಉತ್ತಮ ಪ್ರದರ್ಶನ ತೋರಿದ್ದರೂ ಗೌತಮ್‌ ಸ್ಪಿನ್‌ ಪ್ರತಿಭೆಗೆ ಕ್ರಿಕೆಟ್‌ ಲೋಕ ಅಚ್ಚರಿ ಪಟ್ಟಿದ್ದು 2016–17ರ ಅವಧಿಯಲ್ಲಿ. ಈ ಋತುವಿನಲ್ಲಿ ರಣಜಿ ಟೂರ್ನಿಯ ದೆಹಲಿ ಮತ್ತು ಅಸ್ಸಾಂ ವಿರುದ್ಧದ ಪಂದ್ಯಗಳಲ್ಲಿ ಸತತವಾಗಿ ತಲಾ ಐದು ವಿಕೆಟ್‌ಗಳನ್ನು ಕಬಳಿಸಿದ್ದರು. ಬಳಿಕ ಇನಿಂಗ್ಸ್‌ವೊಂದರಲ್ಲಿ 108 ರನ್‌ ನೀಡಿ ಏಳು ವಿಕೆಟ್‌ಗಳನ್ನು ಕಬಳಿಸಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರು. ಇದಕ್ಕೂ ಐದು ವರ್ಷಗಳ ಮೊದಲು ಉತ್ತರ ಪ್ರದೇಶ ವಿರುದ್ಧ ರಣಜಿಗೆ ಪದಾರ್ಪಣೆ ಮಾಡಿದ್ದರೂ ಗಮನ ಸೆಳೆದಿರಲಿಲ್ಲ.

2017ರಲ್ಲಿ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್‌ಗೆ ತಂಡಕ್ಕೆ ₹2 ಕೋಟಿಗೆ ಖರೀದಿಯಾದ ಗೌತಮ್‌ ಮರುವರ್ಷ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಸ್ಥಾನ ಗಳಿಸಿ ಅದೇ ವರ್ಷ ದೇವಧರ್‌ ಟ್ರೋಫಿ ಟೂರ್ನಿಯಲ್ಲಿಯೂ ಅವಕಾಶ ಗಿಟ್ಟಿಸಿದರು.

ದೇಶಿ ಟೂರ್ನಿಯ ಪಂದ್ಯಗಳಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ತೋರಿದ ಗೌತಮ್‌ ಕರ್ನಾಟಕ ಪ್ರೀಮಿಯರ್‌ ಲೀಗ್‌ನಲ್ಲಿ ‘ಸ್ಟಾರ್‌’ ಆಲ್‌ರೌಂಡರ್‌ ಆಗಿ ಗುರುತಿಸಿಕೊಂಡರು. 2019ರ ಕೆಪಿಎಲ್‌ ಟೂರ್ನಿಯಲ್ಲಿ ಬಳ್ಳಾರಿ ಟಸ್ಕರ್ಸ್ ತಂಡದಲ್ಲಿ, ಶಿವಮೊಗ್ಗ ಲಯನ್ಸ್‌ ವಿರುದ್ಧದ ಪಂದ್ಯದಲ್ಲಿ ಕೇವಲ 56 ಎಸೆತಗಳಲ್ಲಿ 134 ರನ್‌ ಕಲೆಹಾಕಿದ್ದರು. 15 ರನ್‌ ನೀಡಿ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದರು. ಇದರಿಂದಾಗಿ ಐಪಿಎಲ್‌ನಲ್ಲಿ ಕರ್ನಾಟಕದ ಆಟಗಾರನ ‘ಬೆಲೆ’ ಹೆಚ್ಚುತ್ತಲೇ ಹೋಯಿತು.

ಬೇಡಿಕೆ ಹೆಚ್ಚಿದ್ದು ಯಾಕೆ?

ಭಾರತದ ಬಹುತೇಕ ಕ್ರೀಡಾಂಗಣಗಳ ಪಿಚ್‌ಗಳು ಸ್ಪಿನ್ನರ್‌ಗಳ ಸ್ನೇಹಿಯಾಗಿವೆ. ಆದ್ದರಿಂದ ಸ್ಪಿನ್‌ ಬೌಲರ್‌ಗೆ ಆದ್ಯತೆ ನೀಡಲು ಬಹುತೇಕ ಎಲ್ಲ ತಂಡಗಳು ಯೋಜನೆ ರೂಪಿಸಿದ್ದವು. ತಮ್ಮ ತಂಡದಲ್ಲಿದ್ದ ಹರಭಜನ್‌ ಸಿಂಗ್‌ ಅವರನ್ನು ಕೈ ಬಿಟ್ಟಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ‘ಭಜ್ಜಿ’ ಅವರಷ್ಟೇ ಸಮರ್ಥರಾದ ಸ್ಪಿನ್ನರ್‌ ಹುಡುಕಾಟದಲ್ಲಿತ್ತು. ಅದಕ್ಕಾಗಿ ಹೆಚ್ಚು ಬೆಲೆ ಕೊಟ್ಟು ಕರ್ನಾಟಕದ ಆಟಗಾರನನ್ನು ತನ್ನ ಮಡಿಲಿಗೆ ಸೆಳೆದುಕೊಂಡಿತು.

ಮೊದಲು ಗೌತಮ್‌ ಹೆಸರು ಬಂದಾಗ ಚೆನ್ನೈ ತಂಡ ಬಿಡ್‌ ಮಾಡಲು ಹೋಗಲಿಲ್ಲ. ಆರಂಭದಲ್ಲಿ ಕಾದು ನೋಡುವ ತಂತ್ರ ಅನುಸರಿಸಿದ ಈ ತಂಡ ಬಿಡ್‌ ಮಾಡುತ್ತಿದ್ದ ಕೋಲ್ಕತ್ತ ನೈಟ್‌ ರೈಡರ್ಸ್‌ ಮತ್ತು ಆರ್‌ಸಿಬಿ ತಂಡಗಳ ನಡೆ ಅವಲೋಕಿಸುತ್ತ ಹೋಯಿತು. ಹಂತಹಂತವಾಗಿ ಬೆಲೆ ಏರಿದಂತೆ ಚೆನ್ನೈ ತಂಡ ಬಿಡ್‌ ಮಾಡಿ ಖರೀದಿಸಿತು.

ಬೆಂಗಳೂರಿನ ಗೌತಮ್‌ಗೆ ಹಂತಹಂತವಾಗಿ ಬೆಲೆ ಹೆಚ್ಚುತ್ತಲೇ ಹೋದಂತೆಲ್ಲ ‘ಗೌತಮ್‌ ಭಾರತ ತಂಡದಲ್ಲಿ ಆಡಲು ಅರ್ಹತೆಯಿರುವ ಆಟಗಾರ’ ಎನ್ನುವ ಹೇಳಿಕೆಗಳೂ ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಹೆಸರಾಂತ ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಕೂಡ ಇದಕ್ಕೆ ದನಿಗೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.